Advertisement

ಬೆನ್ನ ಮೇಲೆ ಗೆಳೆಯ

03:54 PM Mar 06, 2018 | |

ಕಾಲುಗಳಿಲ್ಲದ ಕೇವನ್‌ಗೆ ಜಗತ್ತು ತೋರಿಸುತ್ತಿರುವುದು, ಆತನ ಸ್ನೇಹಿತ ಫಿಲಿಪ್‌ ಕೆಲ್ಲರ್‌ ಎಂಬಾತ. ಜಗತ್ತನ್ನು ಸುತ್ತಬೇಕೆನ್ನುವ ಗೆಳೆಯನ ಮಹಾದಾಸೆಗೆ ಸ್ಪಂದಿಸಿದ ಫಿಲಿಪ್‌, “ವಿ ಕ್ಯಾರಿ ಕೇವನ್‌’ ಎಂಬ ಪ್ರಾಜೆಕ್ಟ್ ಅನ್ನೇ ಶುರುಮಾಡಿಬಿಟ್ಟ. “ಕೇವಲ 29 ಕಿಲೋ ತೂಗುವ ಕೇವನ್‌ನನ್ನು ಬೆನ್ನ ಮೇಲೆ ಹೊತ್ತು ಜಗತ್ತು ತೋರಿಸಲು ನೀವ್ಯಾರಾದರೂ ತಯಾರಿದ್ದೀರಾ?’ ಅಂತ ಕೇಳಿದ್ದಷ್ಟೇ. ಮಾನವೀಯ ಜಗತ್ತು ಕೂಡಲೇ ಸ್ಪಂದಿಸಿತ್ತು…

Advertisement

ದೇಶ ಸುತ್ತು ಕೋಶ, ಓದು ಎನ್ನುವ ಮಾತಿದೆ. ಜಗತ್ತಿನ ಅಚ್ಚರಿಗಳನ್ನೆಲ್ಲ ಓದಿ ಮುಗಿಸಿದ್ದ, ಫ್ಲೋರಿಡಾದ ಕೇವನ್‌ ಕ್ಯಾಂಡ್ಲರ್‌ ಎಂಬಾತನಿಗೆ ದೇಶವಲ್ಲ, ಇಡೀ ಪ್ರಪಂಚವನ್ನೇ ಸುತ್ತಿಬರಬೇಕು ಎಂಬ ಆಸೆ ಸಹಜವಾಗಿ ಹುಟ್ಟಿತು. ಹಿಮಾಲಯದ ಕಣಿವೆಗಳನ್ನು ಹತ್ತಿ ಇಳಿಯಬೇಕು, ಪಿರಾಮಿಡ್‌ನ‌ ಮೈದಡವಿ ಬರಬೇಕು,

ಆಲ್ಫ್ ಪರ್ವತಗಳ ಹಿಮವನ್ನು ಪುಟ್ಟ ಮಗುವಿನಂತೆ ಮುಷ್ಠಿಯಲ್ಲಿ ಹಿಡಿದು, ಹುಡಿಹುಡಿ ಮಾಡಬೇಕು, ಐಫೆಲ್‌ ಟವರಿನ ಮೇಲೆ ನಿಂತು ಪ್ಯಾರಿಸ್‌ ಅನ್ನು ಕಣ್ಣ ಬಿಂಬದಲ್ಲಿ ಸೆರೆಹಿಡಿಯಬೇಕು, ನೈಲ್‌ ನದಿಯಲ್ಲಿ ಮೀಯಬೇಕು, ಚೀನಾದ ಮಹಾಗೋಡೆಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆಗಳಲ್ಲೇ ನಿದ್ದೆಗೆಟ್ಟುಬಿಟ್ಟ ಕೇವನ್‌.

ಕನಸನ್ನೇನೋ ಪುಕ್ಕಟೆ ಕಾಣಬಹುದು. ಆದರೆ, ಅದನ್ನು ಸಾಧಿಸಬೇಕಲ್ಲ. ಹಾಗೆ ಓಡಾಡಲು ಒಂದಿಷ್ಟು ದುಡ್ಡು ಒಟ್ಟು ಹಾಕೋಣವೆಂದರೆ, ಆತನಲ್ಲಿ ಅಷ್ಟೊಂದು ಹಣವಿಲ್ಲ. ಒಂದೊಂದು ಹೆಜ್ಜೆಯೂರುತ್ತಾ ಹೊರಡೋಣವೆಂದರೆ, ಕಾಲುಗಳಲ್ಲಿ ಚೈತನ್ಯವೇ ಇಲ್ಲ! ಇನ್ನು ಈತನ ಆಸೆಗೆ ರೆಕ್ಕೆಗಳು ಮೂಡುವಾದಾದರೂ ಹೇಗೆ?

ಕೇವನ್‌ ಕ್ಯಾಂಡ್ಲರ್‌ ಹೀಗೆ ಜಗತ್ತು ಸುತ್ತುವ ಕನಸು ಕಂಡು, ಎರಡು ವರುಷವೇ ಆಗಿದೆ. ಹಾಗಾದರೆ, ಕಾಸೂ ಇಲ್ಲ, ಕಾಲೂ ಇಲ್ಲವೆಂದಾದರೆ, ಆತ ಇಂದು ಕುಳಿತಲ್ಲೇ ಕುಳಿತಿದ್ದಾನಾ? ಅಂತ ನೀವು ಕೇಳಬಹುದು. ಇಲ್ಲ. ಕುಳಿತಲ್ಲೇ ಕುಳಿತಿರುವುದು ನಾವು ಮಾತ್ರ. ಕೇವನ್‌ ಈಗಾಗಲೇ ಶೇ.60ರಷ್ಟು ಜಗತ್ತನ್ನು ನೋಡಿದ್ದಾನೆ! ಅಮೆರಿಕ, ಯೂರೋಪ್‌, ಆಫ್ರಿಕದ ಕೆಲವು ಭಾಗಗಳನ್ನೂ ಆತ ಸುತ್ತು ಹಾಕಿ ಬಂದಿದ್ದಾನೆ!

Advertisement

ಕಾಲುಗಳಿಲ್ಲದ ಕೇವನ್‌ಗೆ ಜಗತ್ತು ತೋರಿಸಿದ್ದು ಆತನ ಸ್ನೇಹಿತ ಫಿಲಿಪ್‌ ಕೆಲ್ಲರ್‌ ಎಂಬಾತ. ಜಗತ್ತನ್ನು ಸುತ್ತಬೇಕೆನ್ನುವ ಗೆಳೆಯನ ಮಹಾದಾಸೆಗೆ ಸ್ಪಂದಿಸಿದ ಫಿಲಿಪ್‌, “ವಿ ಕ್ಯಾರಿ ಕೇವನ್‌’ ಎಂಬ ಪ್ರಾಜೆಕ್ಟ್ ಅನ್ನೇ ಶುರುಮಾಡಿಬಿಟ್ಟ. “ಕೇವಲ 29 ಕಿಲೋ ತೂಗುವ ಕೇವನ್‌ನನ್ನು ಬೆನ್ನ ಮೇಲೆ ಹೊತ್ತು ಜಗತ್ತು ತೋರಿಸಲು ನೀವ್ಯಾರಾದರೂ ತಯಾರಿದ್ದೀರಾ?’ ಅಂತ ಕೇಳಿದ್ದಷ್ಟೇ.

ಮಾನವೀಯ ಜಗತ್ತು ಕೂಡಲೇ ಸ್ಪಂದಿಸಿತ್ತು. ಕೇವಲ ಅಮೆರಿಕವನ್ನಷ್ಟೇ ತೋರಿಸಲು ಸಾವಿರಾರು ಜನ ಮುಂದೆ ಬಂದರು. ಅಂಥ ಸಾವಿರಾರು ಸ್ನೇಹಿತರ ಬೆನ್ನ ಮೇಲೆ ಕುಳಿತೇ ಕೇವನ್‌, ಉತ್ತರ ಮತ್ತು ದಕ್ಷಿಣ ಅಮೆರಿಕವನ್ನು ನೋಡಿಬಂದ. ನಯಾಗರ ನೋಡಿ ಬೆರಗಾದ. ಬ್ರೆಜಿಲ್‌ನ ಕಾಡುಗಳಲ್ಲಿ ಹಗಲು- ರಾತ್ರಿ ಕಳೆದುಬಂದ.

ಕೇವನ್‌ ಪ್ರವಾಸಕ್ಕೆ ಹೋದಾಗಲೆಲ್ಲ, ಒಂದಿಷ್ಟು ಖರ್ಚುಗಳಿರುತ್ತವೆ. ಊಟ- ತಿಂಡಿಯ ಹೊರತಾಗಿ, ಆತನ ವೈದ್ಯಕೀಯ ವೆಚ್ಚಗಳೇ ಅಧಿಕವಿರುತ್ತವೆ. ಅವೆಲ್ಲವನ್ನೂ ಭರಿಸಲು “ವಿ ಕ್ಯಾರಿ ಕೇವನ್‌’ಗೆ ಜಗತ್ತಿನ ಅಭಿಮಾನಿಗಳಿಂದ ಫ‌ಂಡ್‌ ಬರುತ್ತಿದೆ. ಹೊತ್ತು ಸಾಕಾಯಿತು ಎಂದಾಗ, ಕೆಲ ದೂರ ಸಾಗಲು ಕೇವನ್‌ಗೆ ಒಂದು ಮೋಟಾರ್‌ ಎಂಜಿನ್‌ ಉಳ್ಳ ವ್ಹೀಲ್‌ಚೇರ್‌ ಅನ್ನೂ “ವಿ ಕ್ಯಾರಿ ಕೇವನ್‌’ ಒದಗಿಸಿದೆ.

ಕೇವನ್‌ಗೆ ಬಹಳ ಹುಚ್ಚಿದ್ದಿದ್ದು, ಐರ್ಲೆಂಡಿನ 6ನೇ ಶತಮಾನದ ಫಾದರ್‌ ಒಬ್ಬನ ಸಮಾಧಿ ನೋಡುವುದು. ಆ ಸ್ಥಳವನ್ನು ತಲುಪಲು 600 ಮೆಟ್ಟಿಲುಗಳ ಬೆಟ್ಟ ಏರಬೇಕು. ಅಲ್ಲಿ ಯಾವುದೇ ವಿಲ್‌ಚೇರ್‌ ಹೋಗಲಾರದಷ್ಟು ಅದು ದುರ್ಗಮವಾಗಿದೆ. ಆದರೆ, ಸ್ನೇಹಿತರು ಅದನ್ನು ಲೆಕ್ಕಿಸದೇ, ಅವನನ್ನು ಬೆನ್ನ ಮೇಲೆ ಹೊತ್ತುಕೊಂಡೇ ಜೀವಮಾನದ ಕನಸಿನ ತಾಣವನ್ನು ತಲುಪಿಸಿದರು.

ಈಗ ಕೇವನ್‌ ಚೀನಾ ಪ್ರವಾಸದಲ್ಲಿದ್ದಾನೆ. ಆತನ ಮುಂದೆ ಈಗ ದೊಡ್ಡ ದೊಡ್ಡ ಪಟ್ಟಿ ರೆಡಿಯಾಗಿದೆ. ಭಾರತದ ತಾಜ್‌ಮಹಲ್‌ ನೋಡುವುದು, ನೇಪಾಳದ ಕಣಿವೆಯಲ್ಲಿ ಸುತ್ತುವುದು, ಇಂಡೋನೇಷ್ಯಾದ ಕಾಡಿನಲ್ಲಿ ವಾಸ್ತವ್ಯ ಹೂಡುವುದು, ಆಸ್ಟ್ರೇಲಿಯಾದ ದಿ ಗ್ರೇಟ್‌ ಬ್ಯಾರಿಯರ್‌ ರೀಫ್ ಅನ್ನು ನೋಡಿಬರುವುದು… ಹೀಗೆ.

ಸಲೀಸಾಗಿ ಹೋಗಬಹುದಾದ ಇವೆಲ್ಲ ತಾಣಗಳ ಭೇಟಿ ಮುಗಿದ ಬಳಿಕ, ಎವರೆಸ್ಟ್‌ನಂಥ ದೊಡ್ಡ ಕನಸಿಗೆ ಕೈ ಹಾಕಲು ಕೇವನ್‌ ಅಣಿಯಾಗುತ್ತಿದ್ದಾನೆ. ಪ್ರಾಣ ಸ್ನೇಹಿತನ ಆ ಎಲ್ಲ ಆಸೆಗಳನ್ನು ಈಡೇರಿಸಲು ಫಿಲಿಪ್‌ ಸಹಾಯ ಮಾಡುವ ಕೈಗಳನ್ನು ಜೋಡಿಸುತ್ತಲೇ ಇದ್ದಾನೆ. ಫ್ರೆಂಡ್‌ಶಿಪ್‌ ಅಂದ್ರೆ ಹೀಗಿರಬೇಕಲ್ವಾ?

Advertisement

Udayavani is now on Telegram. Click here to join our channel and stay updated with the latest news.

Next