ಬೆಂಗಳೂರು: ಫೇಸ್‌ಬುಕ್ ಮೂಲಕ ಪರಿಚಯವಾದ “ಕಳ್ಳ’ ಸ್ನೇಹಿತನನ್ನು ಪಾರ್ಟಿ ಮಾಡಲು ಮನೆಗೆ ಆಹ್ವಾನಿಸಿದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾರ್ಟಿ ನೆಪದಲ್ಲಿ ಮನೆಗೆ ಆಗಮಿಸಿದ ವ್ಯಕ್ತಿ ಬಿಯರ್ ಕುಡಿದು ಸ್ನೇಹಿತ ನಿದ್ರೆಗೆ ಜಾರುತ್ತಲೇ, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಮಾರನೇ ದಿನ ನಿದ್ದೆಯಿಂದ ಎದ್ದ ವ್ಯಕ್ತಿ, ಫೇಸ್‌ಬುಕ್ ಸ್ನೇಹಿತ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಗಿರುವುದನ್ನು ಕಂಡು ಕಂಗಾಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ಕತ್ರಿಗುಪ್ಪೆ ನಿವಾಸಿ ಸುರೇಶ್ (ಹೆಸರು ಬದಲಾಗಿದೆ) ಎಂಬಾತನಿಗೆ ಒಂದು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಬಳಿಕ ಇಬ್ಬರೂ ಚಾಟ್ ಮೂಲಕ ಆತ್ಮೀಯ ಸ್ನೇಹಿತರಾಗಿದ್ದು, ದೂರವಾಣಿ ಸಂಖ್ಯೆ ವಿನಿಮಯ ಮಾಡಿಕೊಂಡು ಆಪ್ತ ಸ್ನೇಹಿತರಾಗಿದ್ದರು. ಫೇಸ್‌ಬುಕ್ ಸ್ನೇಹಿತ ಇನ್ಶೂರೆನ್ಸ್ ಕಂಪನಿಯಲ್ಲಿ ಹೆಚ್ಚು ಹಣ ಹೂಡಿಕೆ ಮಾಡುತ್ತೇನೆ ಎಂದು ಹೇಳಿದ್ದ ಮಾತನ್ನು ಸುರೇಶ್ ನಂಬಿದ್ದರು.
ಬಿಯರ್ ಕುಡಿಸಿ ವಂಚಿಸಿದ!: ದಿನ ಕಳೆದಂತೆ ಹೆಚ್ಚು ಆತ್ಮೀಯನಾದ ಫೇಸ್‌ಬುಕ್ ಸ್ನೇಹಿತ ಮುಂದಿನ ತಿಂಗಳು ತನಗೆ ವಿವಾಹ ನಿಶ್ಚಯವಾಗಿದೆ. ಬಟ್ಟೆ ಶಾಪಿಂಗ್ ಮಾಡಬೇಕಿದೆ ನೀನೂ ನನ್ನ ಜತೆ ಬರಬೇಕು ಎಂದು ಹೇಳಿದ್ದು ಇದಕ್ಕೆ ಸುರೇಶ್ ಕೂಡ ಒಪ್ಪಿದ್ದಾನೆ. ಈ ಮಧ್ಯೆ ಏ. 20ರಂದು ಸುರೇಶ್ ಕುಟುಂಬಸ್ಥರೆಲ್ಲರೂ ಕಾರ್ಯಕ್ರಮದ ಸಲುವಾಗಿ ನೆಂಟರ ಮನೆಗೆ ಹೋಗಿದ್ದರು. ಹೀಗಾಗಿ, ಮನೆಯಲ್ಲಿ ಪಾರ್ಟಿ ಮಾಡೋಣ ಎಂದು ಫೇಸ್‌ಬುಕ್ ಸ್ನೇಹಿತನಿಗೆ ಹೇಳಿದ್ದ.
ಫೇಸ್‌ಬುಕ್ ಸ್ನೇಹಿತನನ್ನು ರಾತ್ರಿ 7 ಗಂಟೆ ಸುಮಾರಿಗೆ ಕತ್ರಿಗುಪ್ಪೆ ಸಿಗ್ನಲ್ ಬಳಿ ಹೋಗಿ ಸುರೇಶ್ ಬರಮಾಡಿಕೊಂಡಿದ್ದಾನೆ. ಜತೆಗೆ, ಇಬ್ಬರೂ ಸೇರಿ ಹತ್ತಿರದ ಬಾರ್‌ನಲ್ಲಿ 4 ಬಿಯರ್ ಹಾಗೂ ಎರಡು ಬಿರಿಯಾನಿ ಪಾರ್ಸೆಲ್ ಕಟ್ಟಿಸಿಕೊಂಡು ಮನೆಗೆ ಬಂದಿದ್ದಾರೆ. ಸುರೇಶ್ ಬಿಯರ್ ಕುಡಿದ ಬಳಿಕವೇ ನಿದ್ರೆಗೆ ಜಾರಿದ್ದು, ಬೆಳಗ್ಗೆ 6.30ರ ಸುಮಾರಿಗೆ ಎದ್ದು ನೋಡಿದಾಗ ಮನೆಗೆ ಬಂದಿದ್ದ ಫೇಸ್‌ಬುಕ್ ಸ್ನೇಹಿತ ಇರಲಿಲ್ಲ.
ಚಿನ್ನಾಭರಣ ಮೊಬೈಲ್ ಕಳವು: ಅನುಮಾನ ಬಂದು ಬೀರು ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನದ ಬ್ರಾಸ್‌ಲೆಟ್, ಸರ, ಸುಮಾರು 60ಗ್ರಾಂ ತೂಕದ ಚಿನ್ನದ ಅವಲಕ್ಕಿ ಸರ, ಎರಡು ಉಂಗುರ, ಬೆಳ್ಳಿ ಆಭರಣ, ಆತನದ್ದೇ ಮೊಬೈಲ್ ಇರಲಿಲ್ಲ. ಬಳಿಕ, ಫೇಸ್‌ಬುಕ್ ಸ್ನೇಹಿತನಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಹೀಗಾಗಿ ಅವನೇ ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೂರುದಾರ ಸುರೇಶ್, ಆರೋಪಿಯು ಸ್ನೇಹಿತ ಎಂದು ಹೇಳಿದ್ದು ಹಲವು ಹೆಸರುಗಳನ್ನು ಹೇಳಿದ್ದಾನೆ ಎಂದು ಹೇಳಿದ್ದಾರೆ. ಆತ ಬಳಸುತ್ತಿದ್ದ ದೂರವಾಣಿ ನಂಬರ್ ನೀಡಿದ್ದು ಆರೋಪಿ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
* ಮಂಜುನಾಥ ಲಘುಮೇನಹಳ್ಳಿ