Advertisement

ರೈತನೆಂಬ ಬಂಧು

08:01 PM Sep 12, 2019 | mahesh |

ತನ್ನೊಳಗೆ ಎಷ್ಟೇ ನೋವು-ಸಂಕಷ್ಟಗಳು ಇದ್ದರೂ ತನ್ನವರೊಂದಿಗೆ ಹೇಳಿಕೊಳ್ಳದೆ ಇತರರಿಗೋಸ್ಕರ ಬದುಕುವವನೆಂದರೆ ಅದು ರೈತ ಒಬ್ಬನೇ. ರೈತ ಅಂತ ಅಂದಾಗ ನಾವು ಹೆಮ್ಮೆಯಿಂದ ಎದೆಎತ್ತಿ ಹೇಳಿಕೊಳ್ಳುತ್ತೇವೆ- “ರೈತ ನಮ್ಮ ದೇಶದ ಬೆನ್ನೆಲುಬು’ ಅಂತ. ಅಷ್ಟಕ್ಕೇ ಬಿಟ್ಟುಬಿಡುತ್ತೇವೆ. ಆದರೆ, ನಾವು ರೈತರ ಬುಡಕ್ಕೆ ಹೋಗಿ ಅವರ ಕಷ್ಟ-ಸುಖ ವಿಚಾರಿಸುವ ಕೆಲಸ ಮಾಡುವುದಿಲ್ಲ. ಯಾಕೆಂದರೆ, ನಮಗೇನೂ ಅಗತ್ಯ ಇಲ್ಲ , ನಾವು ಯಾಕೆ ಅವರ ಕಷ್ಟ-ಸುಖ ವಿಚಾರಿಸಬೇಕು ಎಂದೆಲ್ಲ ಪ್ರಶ್ನೆ ಕೇಳಬಹುದು.

Advertisement

ನಾವು ಬೇಕಾದಷ್ಟು ಊಟ ಮಾಡುತ್ತೇವೆ, ಬೇಕಾಬಿಟ್ಟಿಯಾಗಿ ಅನ್ನವನ್ನು ಬಿಸಾಡುತ್ತೇವೆ. ಯಾಕೆಂದರೆ, ಅಂಗಡಿಯಲ್ಲಿ ಹಣ ಕೊಟ್ಟರೆ ಬೇಕಾದಷ್ಟು ಅಕ್ಕಿ ಸಿಗುತ್ತದೆ. ಆದ್ದರಿಂದ, ನಾವು ನಮ್ಮ ಜೀವನದ ಬಗ್ಗೆ ಮಾತ್ರ ಚಿಂತೆ ಮಾಡುತ್ತೇವೆ. ರೈತ ಭತ್ತ ಬೆಳೆಯೋಕೆ ಸಾಕಷ್ಟು ಶ್ರಮಿಸಿರುತ್ತಾನೆ. ತನ್ನ ಜೀವನವನ್ನು ತನ್ನ ಕೃಷಿಯನ್ನು ನಂಬಿ ಮುಡಿಪಾಗಿಟ್ಟಿರುತ್ತಾನೆ. ಹಾಗೇ ಗದ್ದೆ ನಾಟಿ ಮಾಡಿ ಒಂದು ದಿನ ಮಳೆಬಾರದಿದ್ದರೆ, ಆಕಾಶ ನೋಡಿ, ದೇವರಲ್ಲಿ, “ಮಳೆ ತರಿಸಪ್ಪ’ ಎಂದು ಬೇಡಿಕೊಳ್ಳುತ್ತಾನೆ. ಇನ್ನು ಕೆಲವರು ಇನ್ನೊಬ್ಬರ ಹೊಲದಲ್ಲಿ ಕೆಲಸಮಾಡಿ ಒಂದು ಹೊತ್ತಿನ ಊಟಕ್ಕೋಸ್ಕರ ಕಷ್ಟಪಟ್ಟು ಜೀವನ ಸಾಗಿಸುವವರು ಇದ್ದಾರೆ. ವ್ಯವಸಾಯವೇ ಜೀವನ ಎಂದು ಬದುಕುವವರು ತುಂಬಾ ಜನ ಇದ್ದಾರೆ. ಯಾಕೆಂದರೆ, ಅವರಿಗೆ ತಕ್ಕಮಟ್ಟಿನ ವಿದ್ಯೆ ಇರಲಿಲ್ಲ. ಇನ್ನೊಂದು ಕಡೆಯಿಂದ ಬಡತನದ ಹಸಿವು ಕೂಡ ಅವರಿಗೆ ಕಾಡುತ್ತಿದ್ದರೂ ತನ್ನ ಮಕ್ಕಳು ನಾವು ಬೆಳೆದುಬಂದ ರೀತಿಯಲ್ಲಿ ಏನೂ ಕುಂದು-ಕೊರತೆ ಬಾರದ ರೀತಿಯಲ್ಲಿ ಬದುಕಬಾರದು ಎಂದು ತನ್ನ ಮಕ್ಕಳನ್ನು ಬೆಳೆಸುತ್ತಾರೆ. ಇಂದಿನ ಕಾಲ ಹೇಗಾಗಿದೆ ಎಂದರೆ ಮಳೆ ಇದ್ದರೆ ಬೆಳೆ! ಮಾನವ ಸ್ವಂತಿಕೆಗೋಸ್ಕರ ಮಾಡುತ್ತಿರುವಂಥ ಪ್ರಕೃತಿ ನಾಶದಿಂದ ರೈತರಿಗೆ ಎಷ್ಟು ತೊಂದರೆ ಆಗುತ್ತದೆ ಎಂದು ಯಾರೂ ಯೋಚನೆ ಮಾಡುವುದಿಲ್ಲ.

ನಾವು ಭಾರತೀಯರು ಹೆಚ್ಚಾಗಿ ರೈತ ಕೊಡುವಂತಹ ಅಕ್ಕಿ-ಧಾನ್ಯಗಳನ್ನು ಆಹಾರವನ್ನಾಗಿ ಬಳಸಿ ತಿಂದು ಬೆಳೆದವರು. ಆದರೆ, ಇಂದಿನ ಕಾಲ ಹೇಗೆ ಅಂದರೆ ಆಸ್ತಿ ಪಾಲು ಎಂದು ಗದ್ದೆ-ಭೂಮಿಯನ್ನು ಅಗೆದು ಕಟ್ಟಡಗಳನ್ನು ಕಟ್ಟುತ್ತಿದ್ದೇವೆ. ಇದರಿಂದ ಕೊನೆಗೆ ನಮಗೆ ಅಕ್ಕಿಗಾಗಿ ಪರದಾಡುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಯಾರೂ ಯೋಚನೆ ಮಾಡುವುದಿಲ್ಲ. ನಾವೇಕೆ ಒಂದು ಬಾರಿ ರೈತರ ಬಳಿ ಹೋಗಿ ಅವರ ಕಷ್ಟ-ಸುಖ ಕೇಳಿ ತಿಳಿದುಕೊಳ್ಳಬಾರದು ! ಹಳ್ಳಿ ಜನರ ಮುಗ್ದತೆಯನ್ನು ಅನುಭವಿಸಬಾರದು !

ದೀಕ್ಷಿತ್‌ ಧರ್ಮಸ್ಥಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಮ್‌ ಕಾಲೇಜ…, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next