Advertisement

ಮಾವುತರು, ಕಾವಾಡಿಗಳಿಗೆ ಸಹಪಂಕ್ತಿ ಭೋಜನ

12:04 PM Sep 22, 2018 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕರೆತಂದಿರುವ ಗಜಪಡೆ ಜೊತೆಗೆ ಬಂದಿರುವ ಆನೆಗಳ ಮಾವುತರು, ಕಾವಾಡಿಗಳು ಮತ್ತವರ ಕುಟುಂಬದವರಿಗೆ ಮೈಸೂರು ಅರಮನೆ ಮಂಡಳಿಯಿಂದ ಶುಕ್ರವಾರ ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Advertisement

ಅರಮನೆ ಆವರಣದಲ್ಲಿ ದಸರಾ ಗಜಪಡೆ ಬೀಡುಬಿಟ್ಟಿರುವ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನದಲ್ಲಿ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 1.35ಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ವರ್ಗದವರ ಯೋಗ ಕ್ಷೇಮ ವಿಚಾರಿಸಿಕೊಂಡು ಹೋಳಿಗೆ ಬಡಿಸಿದರು.

ಅವರೊಂದಿಗೆ ಶಾಸಕರಾದ ರಾಮದಾಸ್‌, ಹರ್ಷವರ್ಧನ್‌, ನಾಗೇಂದ್ರ ಮೊದಲಾದವರು ಊಟ ಬಡಿಸಲು ಕೈ ಜೋಡಿಸಿದರು. ಬಳಿಕ ಗಿರಿಜನರೊಂದಿಗೆ ಕುಳಿತು ಊಟ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿದ್ರಾಮಪ್ಪ ಚಳಾRಪುರೆ, ವೆಂಕಟೇಶನ್‌, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ಆನೆ ವೈದ್ಯ ಡಾ.ನಾಗರಾಜ್‌ ಮೊದಲಾದವರು ಹಾಜರಿದ್ದರು.

ಮಕ್ಕಳಿಗೆ ಆಟಿಕೆ: ಇದೇ ವೇಳೆ ಗಿರಿಜನರ ಮಕ್ಕಳಿಗೆ ಅರಮನೆ ಮಂಡಳಿವತಿಯಿಂದ ಆಟಿಕೆಗಳನ್ನು ನೀಡಲಾಯಿತು.

ಊಟದ ವಿವರ: ಅಕ್ಕಿರೊಟ್ಟಿ, ಎಣ್ಣೆಗಾಯಿ, ಕೆಂಪುಚಟ್ನಿ, ಮೆಂತ್ಯಾ ಪಲಾವ್‌, ರಾಯಿತ,ಸ್ವೀಟ್‌ ಕಾರ್ನ್ ಕೋಸಂಬರಿ, ತರಕಾರಿ ಪಲ್ಯ, ಹುರುಳಿಕಾಳು ಪಲ್ಯ, ಅನ್ನ, ಹುರುಳಿ ಕಟ್ಟು, ತಿಳಿಸಾರು, ಮೊಸರು, ಹಪ್ಪಳ, ಉಪ್ಪಿನಕಾಯಿ, ಬೇಳೆ ಹೋಳಿಗೆ, ತುಪ್ಪ, ಖರ್ಜೂರ ಪಾಯಸ, ಈರುಳ್ಳಿ ಪಕೋಡ, ಬಾಳೆಹಣ್ಣು, ಐಸ್‌ಕ್ರೀಂ, ಬೀಡಾ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿತ್ತು.

Advertisement

ಅಕ್ಕಿ ರೊಟ್ಟಿ ಬೆಳ್ಳಗಿಲ್ವಲ್ಲಾ!: ಊಟಕ್ಕೆ ಬಾಳೆ ಎಲೆಯ ಮೇಲೆ ಮೊದಲಿಗೆ ರೊಟ್ಟಿ ಮತ್ತು ಎಣ್ಣೆಗಾಯಿ ಬಡಿಸಲಾಯಿತು. ರೊಟ್ಟಿಗೆ ಸೊಪ್ಪುಗಳನ್ನು ಹಾಕಿದ್ದರಿಂದ ಹಸಿರು ಬಣ್ಣವಿದ್ದುದರಿಂದ ಕುತೂಹಲಗೊಂಡ ಮಾವುತನೊಬ್ಬ ಇದೇನ್‌ ಸಾರ್‌ ಇದು ಪ್ರಶ್ನಿಸಿದ, ಅಕ್ಕಿರೊಟ್ಟಿ ಎಂದಾಗ, ಮತ್ತಿದು ಬೆಳ್ಳಗಿಲ್ವಲ್ಲಾ, ಅಕ್ಕಿರೊಟ್ಟಿ ಅಂದ್ರೆ ಬೆಳ್ಳಗಿರಬೇಕಲ್ವಾ? ನಾನು ಇದೇ ಮೊದು ಇಂಥಾ ರೊಟ್ಟಿ ನೋಡ್ತಿರೋದು ಎಂದು ಮುಗªತೆ ತೋರಿದ.

35 ನಿಮಿಷ ಎಲೆಯ ಮುಂದೆ ಕಾಯ್ದರು: ಮಧ್ಯಾಹ್ನ 1ಗಂಟೆಗೆ ಸಹಪಂಕ್ತಿ ಭೋಜನಕ್ಕೆ ಏರ್ಪಾಟು ಮಾಡಿ ಮಾವುತರು, ಕಾವಾಡಿಗಳು, ಅವರ ಕುಟುಂಬದವರು, ಮಕ್ಕಳನ್ನು ಊಟಕ್ಕೆ ಕೂರಿಸಿ ಅವರ ಮುಂದೆ ಬಾಳೆಎಲೆ ಕೂಡ ಹಾಕಲಾಗಿತ್ತು. ಆದರೆ, ಸಹಪಂಕ್ತಿ ಭೋಜನಕ್ಕೆ ಚಾಲನೆ ನೀಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಬಾರದಿದ್ದರಿಂದ ಮಧ್ಯಾಹ್ನ 1.35ರವರೆಗೆ ಖಾಲಿ ಎಲೆಯ ಮುಂದೆ ಊಟಕ್ಕಾಗಿ ಕಾದು ಕುಳಿತುಕೊಳ್ಳಬೇಕಾಯಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಘಟ್ಟ ಜಂಬೂಸವಾರಿ. ಜಂಬೂಸವಾರಿಯ ರೂವಾರಿಗಳು ಆನೆಗಳ ಮಾವುತರು, ಕಾವಾಡಿಗಳು. ಜಂಬೂಸವಾರಿಯ ಯಶಸ್ಸು ಅವರ ಮೇಲೆ ನಿಂತಿದೆ. ಅದಕ್ಕಾಗಿ ಅವರಿಗೆ ಹೋಳಿಗೆ ಊಟ ಹಾಕಿಸಿ ಖುಷಿ ಪಡಿಸಲಾಗಿದೆ.
-ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next