Advertisement

ಕರೆಂಟ್‌ ಇಲ್ಲದೆ ಕೆಲಸ ಮಾಡುವ ಫ್ರಿಡ್ಜ್

11:27 AM Nov 18, 2017 | Team Udayavani |

ಬೆಂಗಳೂರು: ಇದು ಕರೆಂಟ್‌ ಇಲ್ಲದೆ ಕಾರ್ಯನಿರ್ವಹಿಸುವ ರೆಫ್ರಿಜರೇಟರ್‌! ಈ ಶೂನ್ಯ ಶಕ್ತಿ ಶೇಖರಣಾ ಘಟಕದಲ್ಲಿ ತರಕಾರಿಯನ್ನು ವಾರಗಟ್ಟಲೆ ಇಟ್ಟರೂ ತಾಜಾತನದಿಂದ ಕೂಡಿರುತ್ತದೆ. ಇದನ್ನು ರಾಮನಗರದ ಮೂರು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬಳಸುವ ತರಕಾರಿಗಳನ್ನು ಸಂಗ್ರಹಿಸಿಡಲು ಬಳಸಲಾಗುತ್ತಿದೆ.

Advertisement

ಪ್ರಸ್ತುತ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಇದರಲ್ಲಿ ಹೂವು, ಹಣ್ಣುಗಳನ್ನು ಕೂಡ ಈ ವಿಶಿಷ್ಟ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡಬಹುದು. ಕನಿಷ್ಠ 15 ಕೆಜಿಯಿಂದ 50 ಕೆಜಿವರೆಗೂ ತರಕಾರಿ, ಹೂವು-ಹಣ್ಣು ಶೇಖರಿಸಬಹುದು. ಸಿಆರ್‌ಡಿಎ ಹೈದರಾಬಾದ್‌ ತಂತ್ರಜ್ಞಾನ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ.

ರೆಫ್ರಿಜರೇಟರ್‌ ಒಳಭಾಗದಲ್ಲಿ ಹುಲ್ಲು ತುಂಬಲಾಗಿದೆ. ಅದರ ಮುಚ್ಚಳದ ಸುತ್ತಲೂ ನೀರಿನ ಸಣ್ಣ ಕೊಳವೆ ಜೋಡಿಸಲಾಗಿದೆ. ಅದಕ್ಕೆ ಅಲ್ಲಲ್ಲಿ ರಂಧ್ರಗಳನ್ನು ಕೊರೆಯಲಾಗಿದೆ. ಆ ಮೂಲಕ ನೀರು ಹನಿ-ಹನಿಯಾಗಿ ಹುಲ್ಲಿನ ಮೇಲೆ ಬೀಳುತ್ತದೆ. ಅದರಿಂದ ರೆಫ್ರಿಜರೇಟರ್‌ ಒಳಭಾಗ ಯಾವಾಗಲೂ ತಂಪಾಗಿರುತ್ತದೆ.

ಸಾಮಾನ್ಯವಾಗಿ ವಾತಾವರಣದಲ್ಲಿರುವ ತಾಪಮಾನಕ್ಕಿಂತ ಇದರೊಳಗೆ ಸುಮಾರು 3ರಿಂದ 4 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇರುತ್ತದೆ. ಸೊಪ್ಪು 2ರಿಂದ 3 ದಿನಗಳು ಹಾಗೂ ಇತರೆ ತರಕಾರಿ 5ರಿಂದ 7 ದಿನಗಳ ಕಾಲ ಇದರಲ್ಲಿ ಇಡಬಹುದು ಎಂದು ರಾಮನಗರ ಕೃಷಿ ವಿಜ್ಞಾನ ಕೇಂದ್ರದ ಡಾ.ಲತಾ ಕುಲಕರ್ಣಿ ತಿಳಿಸಿದರು. ಸಾಮಾನ್ಯವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕರೆಂಟ್‌ ಇರುವುದಿಲ್ಲ.

ಇನ್ನು ರೆಫ್ರಿಜರೇಟರ್‌ ದೂರದ ಮಾತು. ಆದರೆ, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟಕ್ಕಾಗಿ ತರಕಾರಿ ಖರೀದಿಸಲಾಗುತ್ತದೆ. ಹೀಗೆ ತಂದ ತರಕಾರಿಯನ್ನು ಈ ಕರೆಂಟ್‌ರಹಿತ ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ತಾಜಾ ತರಕಾರಿಯನ್ನು ಅಡಿಗೆಗೆ ಹಾಕಬಹುದು ಎಂಬ ಆಲೋಚನೆಯಿಂದ ಪ್ರಾಯೋಗಿಕವಾಗಿ ಇದನ್ನು ಮೂರು ಶಾಲೆಗಳಲ್ಲಿ ಪರಿಚಯಿಸಲಾಗಿದೆ. ಉತ್ತಮ ಸ್ಪಂದನೆ ದೊರಕಿದೆ. ಇದರ ಬೆಲೆ 4 ಸಾವಿರ ರೂ. ಎಂದು ಅವರು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next