ನಮ್ಮ ಕಡೆ ಆಷಾಢದಲ್ಲಿ ಯಾವ ಕಾರ್ಯಕ್ರಮ ಕೂಡ ಮಾಡಬಾರದು ಎಂಬ ನಂಬಿಕೆ ಇದೆ. ಕಾಕತಾಳೀಯವೋ ಎಂಬಂತೆ ನಾವು ನಿರ್ಧರಿಸಿದ್ದ ಫ್ರೆಷರ್ಸ್ ಡೇಗೆ ಒಳ್ಳೆಯ ದಿನಗಳು ಸಿಗುತ್ತಲೇ ಇರಲಿಲ್ಲ! ಅದ್ಹೇಗೋ ಕಾದು ಒಂದು ದಿನ ನಿಕ್ಕಿ ಆಯಿತು. ತರಹೇವಾರಿ ತಯಾರಿಯ ಮಧ್ಯೆ ನಾವು ತವಕದಿಂದ ಕಾದಿದ್ದ ದಿನ ಬಂದೇ ಬಿಟ್ಟಿತ್ತು. ಇಷ್ಟು ದಿನ ಹೊಸಬರಾಗಿದ್ದ ನಾವು ನಮ್ಮ ಜೂನಿಯರ್ಸ್ ಅವರನ್ನು ಸ್ವಾಗತಿಸೋ ಹೊತ್ತಿಗೆ ಸೀನಿಯರ್ಸ್ ಆಗಿಬಿಟ್ಟಿದ್ದೆವು.
ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಆದ ತಕ್ಷಣ, ನಾವೆಲ್ಲ ತಂಡಗಳಾಗಿ ಶ್ರಮವಹಿಸುವ ನಿರ್ಧಾರ ಮಾಡಿದೆವು. ಒಬ್ಬರಿಗೆ ಅಲಂಕಾರ, ಇನ್ನೊಬ್ಬರಿಗೆ ಆಹಾರ, ಮತ್ತೂಬ್ಬರದು ಸಂಚಾರ, ಇತರರಿಗೆ ಅತಿಥಿ ಸತ್ಕಾರ ಅಂತೆಲ್ಲ ವಿಭಾಗ ಮಾಡಿಕೊಂಡು ರೂಪುರೇಷೆ ಸಿದ್ಧಪಡಿಸಿದ್ದೆವು. ಜೂನಿಯರ್ಸ್
ಗಾಗಿ ವಿವಿಧ ತರಲೆ ಚಟುವಟಿಕೆಗಳನ್ನು ಕೂಡ ಹಮ್ಮಿಕೊಂಡಿದ್ದೆವು. ಇಷ್ಟೆಲ್ಲ ತಯಾರಿ ನಡೆಸಿದ್ದ ನಮಗೆ ಆಘಾತವೇನೋ ಎಂಬಂತೆ, ನಾವು ಬುಕ್ ಮಾಡಿದ್ದ ಹಾಲ್ ನಮಗೆ ಲಭ್ಯವಿರಲಿಲ್ಲ. ತಲೆಮೇಲೆ ಆಕಾಶವೇ ಬಿದ್ದಂಥ ಪರಿ. ಹೇಗೋ ಬೇರೊಂದು ಭವನ ನಿಗದಿ ಆಯಿತು. ಲೇಟ್ ಆದರೂ ಲೇಟೆಸ್ಟ್ ಆಗಿರಬೇಕು ಅಂತ ಅಂದುಕೊಳ್ಳುತ್ತಲೇ ತಯಾರಿ ಮುಗಿಸಿದಾಗ ರಾತ್ರಿ 2.30 ಕಳೆದಿತ್ತು! ಮರುದಿನ ಮುಂಜಾವ ಉಲ್ಲಾಸದಿಂದಲೇ ಎದ್ದರೂ ನಭದ ತುಂಬೆಲ್ಲ ಮೋಡ ಕವಿದಿತ್ತು. ಅದೇನಿದ್ದರೂ ಜೂನಿಯರ್ಸ್ ಅನ್ನು ಸ್ವಾಗತಿಸುವ ಹೊಸ ಹುರುಪಿನ excitementಗೆ impediment ಆಗಿರಲಿಲ್ಲ!
ಬರೀ ಫ್ರೆಷರ್ಸ್ ಡೇ ಅಂದರೆ ಚೆನ್ನಾಗಿರಲ್ಲ ಅಂತ ನಮ್ಮ ಬಳಗದವರು ಯಾವುದೊ ಹವಾಯಿ ಭಾಷೆಯ ಅಲೋಹಾ ನೋವಾಟೊ ಅನ್ನುವ ವಿಭಿನ್ನ ನಾಮಕರಣ ಮಾಡಿಬಿಟ್ಟಿದ್ದರು. ನಮ್ಮ ವಿಭಾಗದ ಸಂಪ್ರದಾಯದಂತೆ ಬೆಳಗ್ಗೆ ಪ್ರವಾಸೋದ್ಯಮ ಕೂಟದ ಉದ್ಘಾಟನೆ ಮಧ್ಯಾಹ್ನ ಫ್ರೆಷರ್ಸ್ ಡೇ ಎಂಬುದಾಗಿತ್ತು.
ನಮ್ಮ ಜೂನಿಯರ್ಸ್ ಕೂಡ ಪ್ರತಿಭಾನ್ವಿತರೇ! ನಮ್ಮಣ್ಣ ರಂಜಿಸುವ ಉದ್ದೇಶದಿಂದ ಕೆಲವರು ನೃತ್ಯ, ನಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಬಂದಿದ್ದರು. ನಮ್ಮ ಕಡೆಯಿಂದ ಮುಂಚಿತವಾಗಿ ಸೀನಿಯರ್ಸ್‌ಗಳ ಹೆಸರು ಕೊಟ್ಟು ಅವರ ಬಗ್ಗೆ ಒಂದೆರಡು ನಿಮಿಷ ಮಾತನಾಡುವ ಟಾಸ್ಕ್ ನೀಡಿದ್ದೆವು. ಅದರ ಜತೆಗೆ ವೇದಿಕೆಯ ಮೇಲೆ ಚಕ್ಕುಲಿ ಇಟ್ಟುಕೊಂಡು ಹಾಡುವುದು, ಸೀರೆ ಉಟ್ಟು ಬೆಕ್ಕಿನ ನಡಿಗೆ ಮಾಡುವುದು ಮುಂತಾದ ಚಟುವಟಿಕೆಗಳಿಂದ ಇಡೀ ಕಾರ್ಯಕ್ರಮ ಲವಲವಿಕೆಯಿಂದ ಮೇಳೈಸಿತ್ತು. ಒಟ್ಟಾರೆ ಇಡೀ ಕಾರ್ಯಕ್ರಮ ಸೀನಿಯರ್ಸ್ ಜೂನಿಯರ್ಸ್ ನಡುವಿನ ಅಂತರ ಭೇದಿಸಿ, ವರ್ಷದುದ್ದಕ್ಕೂ ಸಹಯೋಗದ ಸಹೃದಯತೆಯ ಮಹತ್ವ ತಿಳಿಸಿ, ನವ ಚೈತನ್ಯ ಮೂಡಿಸಿತ್ತು ಎಂಬುದು ಸುಳ್ಳಲ್ಲ.
ತಿಮ್ಮಯ್ಯ ಮೋನಿ
ಸ್ನಾತಕೋತ್ತರ ವಿಭಾಗ, (ಅರ್ಥಶಾಸ್ತ್ರ)
ಮಂಗಳೂರು ವಿಶ್ವವಿದ್ಯಾನಿಲಯ