Advertisement

ತಾಜಾ ತಿಂಡಿ ಲೈವ್‌ ಹೋಟೆಲ್‌

12:12 PM Jul 15, 2017 | |

 ದೋಸೆ ಹೇಗೆ ಮಾಡ್ತಾರೆ, ಉಪ್ಪಿಟ್ಟಿಗೆ ರವೆ ಹೇಗೆ  ಹುರಿಯುತ್ತಾರೆ, ಪಾತ್ರೆ ಹೇಗೆ ತೊಳೀತಾರೆ ಎಂಬುದನ್ನು ಸೀದಾ ಸಾದಾ ಅಡುಗೆ ಮನೆಗೇ ಹೋಗಿ ನೋಡಬಹುದು. 

Advertisement

ಮಸಾಲೆ ದೋಸೆ ಚೆನ್ನಾಗಿತ್ತು, ಪಲ್ಯ, ಚಟ್ನಿ ಸೂಪರ್‌ – ತಿಂಡಿ ತಿಂದಾದ ಮೇಲೆ ಹೀಗೆ ಹೇಳುತ್ತಾ ಚಪ್ಪರಿಸಿಕೊಂಡು ಬರುತ್ತೇವೆ. ಆದರೆ ಈ ಮಸಾಲೆ ದೋಸೆ ಹೇಗೆ ಮಾಡುತ್ತಾರೆ,  ಪಲ್ಯದ ಆಲೂಗಡ್ಡೆಯನ್ನು ಕಾಲಲ್ಲಿ ತುಳಿದು ಮಾಡ್ತಾರಂತೆ ನಿಜಾನಾ ? ರುಚಿಕಟ್ಟಾಗಿರಲು ಯಾವ ತುಪ್ಪ ಬಳಸಬಹುದು? ಹೋಟೆಲ್‌ನಲ್ಲಿ ತಟ್ಟೆ, ಲೋಟವನ್ನು ಹೇಗೆ ತೊಳೆಯುತ್ತಾರೆ? ರುಚಿಯ ಜೊತೆ ಇಂಥ ಪ್ರಶ್ನೆಗಳು ಇದ್ದರೆ ಅದನ್ನು ದೋಸೆಯ ಜೊತೆ ನೆಂಚಿಕೊಂಡು ತಿನ್ನಬೇಕು ಅಷ್ಟೇ.  ಏಕೆಂದರೆ ಯಾವ ಹೋಟೆಲ್‌ನವರನ್ನೂ ಇಂಥ ಪ್ರಶ್ನೆಗಳನ್ನು ಕೇಳಲು ಆಗದು, ಕೇಳೇ ಬಿಡೋಣ ಅಂದರೂ ಯಾರೂ ಉತ್ತರ ಕೊಡಲೊಲ್ಲರು.

 ಆದರೆ ಇಂಥ ಪ್ರಶ್ನೆಗಳೊಂದಿಗೆ ನೀವು ಬೆಂಗಳೂರಿನ ಕತ್ರಿಗುಪ್ಪೆಯ ರಿಂಗ್‌ರೋಡಿನಲ್ಲಿರುವ ತಾಜಾ ತಿಂಡಿ ಹೋಟೆಲ್‌ಗೆ ಹೋದರೆ ಉತ್ತರದ ಜೊತೆ ಬಿಸಿ,ಬಿಸಿ ಖಾರಾಬಾತ್‌, ಕೇಸರಿಬಾತ್‌ ಮುಖ್ಯವಾಗಿ ತುಪ್ಪದ ಮಸಾಲೆ ದೋಸೆ ತಿಂದು ಬರಬಹುದು. 

 ಇವಿಷ್ಟೇ ಅಲ್ಲ, ಜೊತೆಗೆ ನೀವು ತಿನ್ನುವ ದೋಸೆಯನ್ನು ಹೇಗೆ ಮಾಡುತ್ತಾರೆ ಅನ್ನೋದನ್ನು ಲೈವ್‌ ಡೆಮೋ ನೋಡಬಹುದು. ಇಡೀ ಹೋಟೆಲ್‌ನ ರೌಂಡ್‌ ಹೊಡೆಯಬಹುದು.  ಲೋಟ ಸರಿಯಾಗಿ ತೊಳೆಯುತ್ತಿದ್ದಾರಾ, ವಡೆಗೆ ಉದ್ದಿನ ಬೇಳೆ ಹೇಗೆ ರುಬ್ಬುತ್ತಿದ್ದಾರೆ  ಹೀಗೆ ಎಲ್ಲವನ್ನೂ ಕಣ್ಣಲ್ಲೇ ಅಳತೆ ಮಾಡಬಹುದು. 

 “ತಾಜಾತಿಂಡಿ’ ಹೋಟೆಲ್‌ನ ಉದ್ದೇಶವೇ ಅದು.  ಹೋಟೆಲ್‌ನ ಶುಚಿ, ರುಚಿ ಹಾಗೂ ಬೆಲೆಯ ಬಗ್ಗೆ ಯಾವುದೇ ಅನುಮಾನಗಳು ಇರಬಾರದು ಅನ್ನೋದು.  ಅದಕ್ಕಾಗಿ ಇಲ್ಲಿದೆ, ಓಪನ್‌ ಕಿಚನ್‌.  ಯಾವುದೂ ಗುಟ್ಟಿಲ್ಲ,  ಎಲ್ಲವೂ ಒಪನ್ನಾಗಿ ಕಣ್ಣ ಮುಂದೆಯೇ ನಡೆಯುತ್ತದೆ. 

Advertisement

“ತಾಜಾತಿಂಡಿ’ ಹೋಟೆಲು ಮಲೆನಾಡಿನ ಯಾವುದೋ ದೇವಾಲಯದಂತೆ ಕಂಡರೂ ಆಶ್ಚರ್ಯವಿಲ್ಲ.  ಏಕೆಂದರೆ ಹೋಟೆಲ್‌ನ ಮುಂಭಾಗದಲ್ಲಿ ಮಕ್ಕಳಿಗಾಗಿ ಪುಟ್ಟ ಪಾರ್ಕಿನ ರೀತಿ ಇದೆ.  ಅಲ್ಲಿ ಒಂದಷ್ಟು ಬೆಂಚುಗಳು.  ಹೋಟೆಲ್‌ ಮುಂಭಾಗವನ್ನು ಪಾಶ್ಚಾತ್ಯ ಶೈಲಿಯಲ್ಲಿ ರೇಲಿಂಗ್‌ ಮಾಡಿರುವುದರಿಂದ ಹೋಟೆಲ್‌ನ ಲುಕ್ಕೇ  ಬದಲಾಗಿದೆ. 

 ಇವಿಷ್ಟು ನೋಟವಾದರೆ ಹೋಟೆಲ್‌ನ ಎಡಭಾಗದಲ್ಲಿ – ಕುಡಿಯುವ ನೀರಿನ ಬಗ್ಗೆ ವಿವರ, ಎರಡು ದೊಡ್ಡ ಗಾತ್ರದ ನೀರ ಶುದ್ದೀಕರಿಸುವ ಯಂತ್ರಗಳಿವೆ.  ಅದರ ಮೇಲೆ ನೀರು ಬಳಕೆ ಮಂತ್ರವೂ ಇದೆ. ಈ ಹೋಟೆಲಿಗೆ  ದಿನಕ್ಕೆ ಹೆಚ್ಚಾ ಕಡಿಮೆ 25 ಸಾವಿರ ಲೀ. ನೀರು ಬೇಕಂತೆ. ಇದಕ್ಕೆ ಯಾವುದೇ ಕೆಮಿಕಲ್‌ ಬೆರೆಸೋಲ್ಲ.  ಬೋರ್‌ವೆಲ್‌, ಪಾಲಿಕೆ ನೀರನ್ನೇ ಶುದ್ದೀಕರಿಸಿ ಕೊಡುವುದು ಹೋಟೆಲ್‌ನ ಹೆಮ್ಮೆ. 

  ಹಾಗೇ ಮುಂದೆ ಹೋದರೆ ಎಡಕ್ಕೆ ಕೌಂಟರ್‌, ಬಲಕ್ಕೆ ಕಣ್ಣ ಮುಂದೆಯೇ ದೋಸೆಗಳು ತಯಾರಾಗುತ್ತಿರುತ್ತವೆ. ಎಡ ಭಾಗದ ಓಣಿಯಲ್ಲಿ ಹಸಿರೋ ಹಸಿರು.  ಸಣ್ಣ, ಸಣ್ಣ ಪಾಟುಗಳಲ್ಲಿ ನೂರಾರು ಗಿಡಗಳು.  ಹೆಚ್ಚು ಕಮ್ಮಿ 20-30 ವೆರೈಟಿ.   ಆ ಕಡೆಯಿಂದ ಬರುವ ತಂಗಾಳಿಯಲ್ಲಿ ಒಂದಷ್ಟು ವಿಟಮಿನ್‌ಗಳೂ ಗಾಳಿಯಲ್ಲಿ ಸೇರಿಬಂದು ತಿಂಡಿ ತಿನ್ನುತ್ತಿರುವ ಗ್ರಾಹಕರನ್ನು ಸೇರದೇ ಇರದು. 

 ಇಂಥ ಗಿಡಗಳು ಸ್ಟಾರ್‌ ಹೋಟೆಲ್‌ನಲ್ಲಿ ಕಾಣಸಿಗುತ್ತಿವೆ. ಆದರೆ ಮಧ್ಯಮ ವರ್ಗದ ಹೋಟೆಲ್‌ನಲ್ಲಿ ಹೇಗೆ ಸಾಧ್ಯ?

 ಮಾಲೀಕರಾದ ಸುಹಾಸ್‌ ಹೇಳ್ಳೋದು ಹೀಗೆ- ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಕಟ್ಟಡಗಳೇ ಕಾಣುತ್ತವೆ.   ಹಸಿರೇ ಇಲ್ಲ. ಹಸಿರ ಪ್ರೀತಿ ಇಲ್ಲಿಂದಲೇ ಶುರುವಾಗಬೇಕು. ತಿಂಡಿ ತಿನ್ನುವ ಹೊತ್ತಲ್ಲಾದರೂ ಒಂದಷ್ಟು ಶುದ್ಧ ಗಾಳಿ ಬರಲಿ ಅಂತ ಹೀಗೆ ಮಾಡಿದ್ದೇವೆ ಎನ್ನುತ್ತಾರೆ. 

 ಮಿಸ್ಟರ್‌ ಕ್ಲೀನ್‌
  ಬಲಭಾಗದಲ್ಲಿರುವ ದೋಸೆ ಕೌಂಟರ್‌ ಮುಂದೆ ನಿಂತರೆ ಘಮ್ಮೆನ್ನುವ ತುಪ್ಪ.  ಸ್ವಲ್ಪ ಕಣ್ಣನ್ನು ಜೂಮ್‌ ಮಾಡಿ ನೋಡಿ. ನೀವು ತಿನ್ನುವ ಮಸಾಲೆ ದೋಸೆ ಕಣ್ಣ ಮುಂದೆ ಬೇಯುತ್ತಿರುತ್ತದೆ.  ನಂದಿನಿ ಪಾಕೆಟ್‌ನಿಂದ ಸ್ಪ್ರಿಂಕ್ಲರ್‌ ನಂತೆ ತುಪ್ಪ ಹಾರುತ್ತಿರುತ್ತದೆ.  ದೋಸೆ ಹೇಗೆ ಬೇಯುತ್ತದೆ,  ಪಲ್ಯ ಹೇಗೆ ಹಾಕುತ್ತಾರೆ, ಶುಚಿ ಇದೆಯಾ, ಹೀಗೆ ಎಲ್ಲ ಅನುಮಾನಗಳಿಗೆ ಪರಿಹಾರ ಎಂಬಂತೆ ಒಂದಷ್ಟು ಜನ ಆಗಾಗ ನೆಲವನ್ನು ಕ್ಲೀನ್‌ ಮಾಡುತ್ತಿರುತ್ತಾರೆ. ಹೋಟೆಲ್‌ನ ದೋಸೆ ಹೆಂಚು ಅಂದರೆ – ಅಟ್ಟೆ ಕಟ್ಟಿದೆ ಕಡುಗಪ್ಪು ಬಣ್ಣದಿಂದ ಕೂಡಿರುತ್ತದೆ. ದೋಸೆ ಹಾಕುವವರ ಬೆವರು ಕೂಡ ಅಲ್ಲಿ ಬೀಳಬಹುದು ಅನ್ನೋ  ಅನುಮಾನವಿದ್ದರೆ ಇಲ್ಲಿಗೆ ಬನ್ನಿ.  ದೋಸೆ ಭಟ್ಟರು ಶುದ್ದಾತಿ ಶುದ್ದ ಡ್ರೆಸ್‌ನಲ್ಲಿ ಇರುತ್ತಾರೆ. ತಲೆಗೆ ಕ್ಯಾಪ್‌ ಕಟ್ಟಿಕೊಂಡಿರುತ್ತಾರೆ. ಆಗಾಗ ಹೆಂಚನ್ನು ಜತನದಿಂದ ಕ್ಲೀನ್‌ ಮಾಡುವುದನ್ನು ನೋಡಬಹುದು.  ಹೋಟೆಲ್‌ ಇಷ್ಟು ಕ್ಲೀನಾಗಿರುತ್ತಾ ಅಂತ ಅನುಮಾನ ಬರುವ ರೀತಿ ಓಪನ್‌ ಕಿಚನ್‌ ಇದೆ. ಜೊತೆಗೆ ಹಿಟ್ಟು ರುಬ್ಬವ ಮಿಷನ್‌, ಗೋಡೌನ್‌ ಎಲ್ಲಿ ನೋಡಿದರೂ ಶುಚಿಯ ಶಿಸ್ತೇ.

 ಇದೇ ರೀತಿ ನೀವು ತಟ್ಟೆ, ಲೋಟ, ಸ್ಪೂನ್‌ ಯಾವುದನ್ನು ನೋಡಿದರೆ ಫ‌ಳ, ಫ‌ಳ.  ಹಾಗೆಯೇ, ಸ್ಪೂನಿನ ಮೇಲಾಗಲಿ, ತಟ್ಟೆಯಲ್ಲಾಗಲಿ ಒಂದೇ ಒಂದು ರವೆಯ ಅಣುವಿನಂಶವೋ, ಜಿಡ್ಡೋ ಕಾಣೋಲ್ಲ. ಕನ್ನಡಿಯಂತೆ ನೋಡಿಕೊಂಡು ತಲೆ ಬಾಚಿಕೊಳ್ಳಬಹುದು.  ಇದಕ್ಕೆ ಕಾರಣವೂ ಉಂಟು. ಇಲ್ಲಿ ಪಾತ್ರೆ ತೊಳೆಯೋದು ಮಿಷನ್‌. ಇದನ್ನು ಜರ್ಮಿನಿಯಿಂದ ತಂದಿದ್ದಾರೆ. ಒಂದು ಸಲಕ್ಕೆ 24 ಲೋಟಗಳ ಟ್ರೇಅನ್ನು ಕುದಿ,ಕುದಿಯುವ ನೀರಲ್ಲಿ, ಒಂದು ನಿಮಿಷದಲ್ಲಿ  ನಾಲ್ಕು ಸಲ ತೊಳೆದು ಹಾಕುತ್ತದೆ. ತೊಳೆಯಲು ಸುಮಾರಿನ್ಸ್‌ ಅನ್ನೋ ಸಾವಯವ ಪೌಡರ್‌ ಅನ್ನು ಬಳಸುವುದರಿಂದ ತಟ್ಟೆ, ಲೋಟ, ಸ್ಪೂನ್‌ ಎಲ್ಲವೂ ಮಿಸ್ಟರ್‌ ಕ್ಲೀನ್‌. 

 ಕ್ಲೀನ್‌ ಅನ್ನೋದು ಕೇವಲ ತಟ್ಟೆ, ಲೋಟಕ್ಕೆ ಮಾತ್ರ ಸೀಮಿತವಲ್ಲ.  ಇಡೀ ತಾಜಾ ತಿಂಡಿಯ ಕಟ್ಟಡಕ್ಕೂ ಅನ್ವಯಿಸುತ್ತದೆ. ಕಟ್ಟಡ ದಿನಕ್ಕೆ ಎರಡು  ಬಾರಿ ಶುಚಿಯಾಗುತ್ತದೆ.   ಮಧ್ಯಾಹ್ನದ ಬ್ರೇಕ್‌ನಲ್ಲಿ ಒಂದು ಗಂಟೆ,  ರಾತ್ರಿ ಹೋಟೆಲ್‌ ಮುಗಿದ ನಂತರ ಒಂದು ಗಂಟೆ  ಇಡೀ ಹೋಟೆಲ್‌ ಮತ್ತು ಗೋಡೆಗಳನ್ನೂ  ಕ್ಲೀನ್‌ ಮಾಡುತ್ತಾರೆ. ಇದಕ್ಕಾಗಿಯೇ 18 ಜನ ಕೆಲಸಗಾರರಿದ್ದಾರೆ. “ರುಚಿಗೆ ಎಷ್ಟು ಗಮನ ಕೊಡುತ್ತೇವೋ, ಶುಚಿಗೂ, ಗ್ರಾಹಕರ ಆರೋಗ್ಯದ ಬಗೆಗೂ ಅಷ್ಟೇ ಗಮನ ಕೊಡುತ್ತೇವೆ.   ಎಲ್ಲಾ ಸ್ಟೀಲ್‌ ಎಲ್ಲಾದಕ್ಕೂ ಬಳಸೋಕೆ ಆಗೋಲ್ಲ. ನಾವು ಗುಣಮಟ್ಟದ 317, 402 ಗ್ರೇಡ್‌ ಸ್ಟೀಲ್‌ ಬಳಸುತ್ತೇವೆ. ಕಾರಣ ಇಷ್ಟೇ, ಉಪ್ಪು, ಉಳಿ ಖಾರ ಬಿದ್ದಾಗ ಪಾತ್ರೆಗಳಲ್ಲಿರುವ ರಾಸಾಯನಿಕ ಅಂಶ ಬಿಡುಗಡೆಯಾಗಿ ಗ್ರಾಹಕರ ಆರೋಗ್ಯದ ಮೇಲೆ ಪ್ರಭಾವ ಬೀರಬಾರದು ಅಂತ.   ಹಾಗೆಯೇ, ಮನುಷ್ಯ ಸ್ಪರ್ಷ ಕಡಿಮೆ ಮಾಡಿ, ಹೆಚ್ಚು ಯಂತ್ರಗಳನ್ನು ಬಳಸುತ್ತೇವೆ. ಗ್ರೌಂಡರ್‌ನ ಕಲ್ಲು ಸವೆಯದ ಹಾಗೆ ನೋಡಿಕೊಳ್ಳುತ್ತೇವೆ.  ಹೀಗೆ ಆಹಾರ ತಯಾರಿಸುತ್ತೇವೆ ಎನ್ನುತ್ತಾರೆ ಹೋಟೆಲ್‌ನ ಸಿಎಂಡಿ ಗೋಪಾಡಿ ಶ್ರೀನಿವಾಸರಾವ್‌. 

 ಹೋಟೆಲ್‌ನ ಶುಚಿತ್ವಕ್ಕೆ ಇನ್ನೊಂದು ಕಾರಣ ಪಾರ್ಸಲ್‌ ಇಲ್ಲದೇ ಇರುವುದು ಕೂಡ.  ಎಲ್ಲೂ ಪ್ಲಾಸ್ಟಿಕ್‌ ಬಳಸೊಲ್ಲ. ಪಾರ್ಸೆಲ್‌ ಬೇಕು ಅಂದರೆ ಮನೆಯಿಂದ ಬಾಕ್ಸ್‌ ತರುವುದು ಕಡ್ಡಾಯ. ತರದೇ ಇದ್ದರೆ ಅಲ್ಲೇ ತಿಂದು ಹೋಗಬೇಕು. ಕದ್ದು ಮುಚ್ಚಿ ಕವರ್‌ಗಳ ಬಳಕೆಯಂತೂ ಇಲ್ಲವೇ ಇಲ್ಲ.   

 ಹೋಟೆಲ್‌ನ ತಿಂಡಿ ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ.  ಹೆಚ್ಚಾ ಇಲ್ಲ, ಕಡಿಮೆಯೂ ಇಲ್ಲದೆ ಸಮತೂಲಿತವಾಗಿರುತ್ತದೆ. ಗ್ಯಾಸ್ಟ್ರಿಕ್‌ ತೇಗು ಬರುವುದಾಗಲಿ, ಹೊಟ್ಟೆ ಗುಡಗುಡ ಎನ್ನುವುದಾಗಲಿ ಆಗುವುದಿಲ್ಲ.  ಕಾರಣ ಇಷ್ಟೇ.  ಇವರು ಸೋಡವಾಗಲಿ, ಕೃತಕ ಬಣ್ಣವಾಗಲಿ ಬಳಸುವುದೇ ಇಲ್ಲ.  ವಿಶೇಷ ಎಂದರೆ ಇಲ್ಲಿನ ತಿಂಡಿಗಳ ಕ್ವಾಂಟಿಟಿಯನ್ನು ತೀರ್ಮಾನಿಸುವ ಮೊದಲು ಬೆಂಗಳೂರು ಗ್ರಾಹಕರ ಹೊಟ್ಟೆಯನ್ನು ಸರ್ವೆ ಮಾಡಿದ್ದಾರೆ.  ಹಸಿವನ್ನು ಅಳೆದಿದ್ದಾರೆ.  ಗಡಿಬಿಡಿ ಬದುಕಿನ ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ಮಾತ್ರ ತಿಂಡಿಯನ್ನು ಇಟ್ಟಿದ್ದಾರೆ.   ಕಾಫಿ 70 ಎಂ.ಎಲ್‌.  ಚಟ್ನಿ 100 ಎಂ.ಎಲ್‌, ಕೇಸರಿಬಾತ್‌, ಉಪ್ಪಿಟ್ಟು 150.ಗ್ರಾಂ, ಮಸಾಲೆ ದೋಸೆ 200ಗ್ರಾಂ  ಹೀಗೆ ಗ್ರಾಂ. ಎಂಎಲ್‌ ಲೆಕ್ಕದಲ್ಲೇ ಇವೆ.  ಕಡಿಮೆ ಬೆಲೆಗೆ, ಶುದ್ದ ರುಚಿಕಟ್ಟಾದ ಹೊಟ್ಟೆ ತುಂಬುವಷ್ಟು ತಿಂಡಿ ಕೊಡಬೇಕು ಅನ್ನೋದೇ ಮೂಲ ಉದ್ದೇಶವಂತೆ. ಅದಕ್ಕಾಗಿ ನಾನಾ ಸರ್ಕಸ್ಸುಗಳನ್ನು ಕೂಡ ಮಾಡಿದ್ದಾರೆ. 

   ಇವೆಲ್ಲ ಹೇಳಿದ ಮೇಲೆ ಇಲ್ಲಿನ ತಿಂಡಿಗಳ ಬೆಲೆ ಹೆಚ್ಚೇನೋ ಅನ್ನೋ ಅನುಮಾನ ಪಡಬೇಡಿ.  ಕಡಿಮಾತಿ ಕಡಿಮೆ. 

ಮಸಾಲೆ ದೋಸೆ 20, ಕಾಫಿ 10, ಖಾರಾಬಾತ್‌ 15ರೂ. ಮರೆಯದೇ ತಿನ್ನಬೇಕಾದದ್ದು ಗೋಡಂಬಿ, ಬಾದಾಮಿ ಹಾಕಿರುವ ಬಿಸಿಬಿಸಿ ತುಪ್ಪದ ಸ್ವೀಟ್‌ ಬಾತ್‌ ಇದಕ್ಕೆ ಕೇವಲ 15. ರೂ.  ಇದೊಂಥರ ರಾಘವೇಂದ್ರಸ್ವಾಮಿ ಮಠದ ಸಜ್ಜಿಗೆ ಇದ್ದಂಗೆ ಇಲ್ಲದೇ ಇದ್ದರೆ ಕೇಳಿ.

 ಇಷ್ಟೆಲ್ಲ ಹೇಳ್ತೀರಲ್ಲ, ನಿಮ್ಮ ಹೋಟೆಲ್‌ನ ಒಂದ್ಸಲ ನೋಡಬಹುದಾ? ಹೀಗಂತ ಅಲ್ಲಿದ್ದವರನ್ನು ಕೇಳಿ ನೋಡಿ.  ಖಂಡಿತ ನಿಮ್ಮನ್ನು ಕರೆದುಕೊಂಡು ಹೋಗಿ ಇಡೀ ಹೋಟೆಲ್‌ನಲ್ಲಿ ರೌಂಡ್‌ ಹೊಡೆಸಿ ಡೆಮೋ ಕೊಡುತ್ತಾರೆ. 

  ಎಲ್ಲ ತಿಂದು ಹೊರಗೆ ಬಂದು ನಿಂತರೆ ಮತ್ತದೇ ಮಲೆನಾಡ ದೇಗುಲದಂತೆ ಕಾಣುವ ತಾಜಾತಿಂಡಿಯನ್ನು ನೋಡಿ  ಹೋಟೆಲ್‌ ಅಂದರೆ ಇದಪ್ಪಾ ಅನ್ನುತ್ತದೆ ಮನಸ್ಸು.  

 ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next