ರಿಂಝಾಯಿ ಎಂಬೊಬ್ಬ ಝೆನ್ ಗುರುವಿದ್ದ. ಇದು ಅವನಿಗೆ ಜ್ಞಾನೋದಯ ಆಗುವುದಕ್ಕೆ ಮುಂಚಿನ ಕಥೆ. ಒಂದು ದಿನ ರಿಂಝಾಯಿ ಬೆಳಗ್ಗೆ ಎಂದಿನಂತೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ. ಆ ದಾರಿಯಲ್ಲಿ ಒಂದು ಮಾಂಸದಂಗಡಿ ಇತ್ತು. ಅದರೊಳಗೆ ಗ್ರಾಹಕ ಮತ್ತು ಅಂಗಡಿಯಾತನ ನಡುವೆ ಏರುದನಿಯಲ್ಲಿ ನಡೆಯು ತ್ತಿದ್ದ ಮಾತುಕತೆ ರಿಂಝಾಯಿಯ ಕಿವಿಗೆ ಬಿತ್ತು.
“ಇದು ತಾಜಾ ಮಾಂಸವೇ? ಉತ್ಕೃಷ್ಟ ವಾಗಿದೆಯೇ’ ಎಂದು ಗ್ರಾಹಕ ಪ್ರಶ್ನಿಸಿದ್ದ. ಮಾಂಸದ ಅಂಗಡಿ ಯವನಿಗೆ ಇದನ್ನು ಕೇಳಿ ಸಿಟ್ಟು ಬಂದಿತ್ತು. “ಏನೂಂತ ಅಂದು ಕೊಂಡಿದ್ದೀರಿ? ನನ್ನ ಅಂಗಡಿಯಲ್ಲಿ ಹಳತು ಪಳತು ಮಾಂಸ ಇಟ್ಟುಕೊಳ್ಳುವೆನೇ! ಇಲ್ಲಿರುವ ಎಲ್ಲ ಮಾಂಸವೂ ತಾಜಾ, ಅತ್ಯು ತ್ಕೃಷ್ಟ…’ ಎಂದು ಏರುಧ್ವನಿಯಲ್ಲಿ ಹೇಳುತ್ತಿದ್ದ ಮಾಲಕ.
ರಿಂಝಾಯಿಯ ಕಿವಿಗೆ ಬಿದ್ದದ್ದು ಇದೇ ಸಂಭಾಷಣೆ. ಆ ಕ್ಷಣದಲ್ಲಿ ರಿಂಝಾಯಿಗೆ ಜ್ಞಾನೋದಯವಾಯಿತು, ಪರಮ ಸತ್ಯದ ಅರಿವಾಯಿತು. ಆತ ಪರಮ ಸಂತಸದಲ್ಲಿ ಕುಣಿಯುತ್ತ, ಕಿರುಚಾ ಡುತ್ತ ಗುರುಮಠದತ್ತ ಧಾವಿಸಿದ. ಪುರಾತನ ಗ್ರೀಸ್‌ನಲ್ಲಿಯೂ ಇಂಥದ್ದೇ ಒಂದು ಘಟನೆಯಿದೆ. ದಾರ್ಶನಿಕ ಸ್ನಾನಕ್ಕೆಂದು ಬಚ್ಚಲು ತೊಟ್ಟಿಗೆ ಇಳಿ ದಿದ್ದ. ಆಗ ಒಂದಷ್ಟು ನೀರು ಹೊರ ಚೆಲ್ಲಿತು. ಅದನ್ನು ಗಮನಿಸಿ, ಕೊಂಚ ಆಲೋಚಿಸಿದಾಗ ಅವನಿಗೆ ಹೊರ ಚೆಲ್ಲಿದ್ದು ತನ್ನ ದೇಹತೂಕದಷ್ಟು ನೀರು ಎಂಬುದು ಗಮನಕ್ಕೆ ಬಂತು. ಥಟ್ಟನೆ “ಯುರೇಕಾ’ ಎಂದು ಕೂಗಾಡುತ್ತ ಆತ ಕುಣಿದಾಡಿದ್ದನಂತೆ. ರಿಂಝಾಯಿ ಯದೂ ಇಂಥದ್ದೇ ಸ್ಥಿತಿಯಾಗಿತ್ತು.
ಹೀಗೆ ಹಿಗ್ಗಿನಿಂದ ಆನಂದ ತುಂದಿಲ ನಾಗಿ ಆಗಮಿಸಿದ ರಿಂಝಾಯಿಯನ್ನು ಗುರುಗಳು ಆಲಂಗಿಸಿಕೊಂಡರು. “ನಿನ್ನನ್ನು ನೋಡಿದಾಕ್ಷಣ ವಿಷಯ ತಿಳಿದು ಹೋಯಿತು. ಈಗ ಅದು ಹೇಗೆ ನಡೆಯಿತು ಎಂಬುದನ್ನು ವಿವರಿಸಿ ಹೇಳು’ ಎಂದರು. ಝೆನ್‌ನಲ್ಲಿ ಜ್ಞಾನೋದಯ ಹೀಗೆ ಹಠಾತ್ತನೆ ಸಂಭವಿಸುತ್ತದೆ. ಸಾಮಾನ್ಯರಿಗೆ ಅದು ಒಗಟಿನಂತೆ ಅನ್ನಿಸಬಹುದು. ಆದರೆ ಝೆನ್ ಮಾರ್ಗದ ಪಥಿಕರಿಗೆ ಅದು ಮಹಾಸತ್ಯ ದರ್ಶನದ ಕ್ಷಣ.
ರಿಂಝಾಯಿ . ತಾನು ಬೆಳಗ್ಗೆ ಹೊರ ಟಲ್ಲಿಂದ ಆರಂಭಿಸಿ ನಡೆದ ಎಲ್ಲವನ್ನೂ ಸಾದ್ಯಂತವಾಗಿ ವಿವರಿ ಸಿದ. ಮಾಂಸದ ಅಂಗಡಿ ಮಾಲಕನು ಗ್ರಾಹಕನಿಗೆ ಕೊಟ್ಟ ಉತ್ತರವನ್ನು ಬಣ್ಣಿಸಿದ.
ಈ ಲೋಕ ಒಂದು ಅಂಗಡಿಯ ಹಾಗೆ. ದೇವರು ಅಂಗಡಿಕಾರ. ಅವನು ಸೃಷ್ಟಿಸಿದ ಮಾಲುಗಳಲ್ಲಿ ಇದು ಕೀಳು, ಅದು ಮೇಲು ಎಂಬುದಿಲ್ಲ. ಎಲ್ಲವೂ ಉತ್ಕೃಷ್ಟವೇ, ಅತ್ಯುತ್ತಮವೇ. ಇದನ್ನೇ ಕನ್ನಡದ ವಚನಕಾರರು ಕೂಡ ಹೇಳಿದ್ದಾರೆ. ದೇವರು ಎಂದು ನಾವು ನಂಬುವ, ಪರಬ್ರಹ್ಮದ ಸೃಷ್ಟಿಯಾಗಿ ರುವ ಈ ಜಗತ್ತಿನಲ್ಲಿ ಪ್ರತಿಯೊಂದು ಕೂಡ ಸ್ವಯಂ ಪರಿಪೂರ್ಣ ಮತ್ತು ತಮ್ಮದೇ ಆದ ಕಾರ್ಯ- ಕಾರಣಗಳನ್ನು ಹೊಂದಿ ರುತ್ತವೆ.
ಒಂದು ಸಣ್ಣ ಕೀಟವನ್ನೇ ತೆಗೆದುಕೊಳ್ಳಿ. ಅದರ ಮಟ್ಟಿಗೆ ಅದು ಕೊರತೆಯ ಲವಲೇಶವೂ ಇಲ್ಲದೆ ಪರಿಪೂರ್ಣವಾಗಿರುತ್ತದೆ. ಅದರ ಬದುಕು ಕೆಲವು ದಿನ, ಕೆಲವು ವಾರಗಳದ್ದಾಗಿರಬಹುದು. ಆದರೆ ಆ ಅವಧಿಯಲ್ಲಿ ನಡೆಯಬೇಕಾದ ಎಲ್ಲ ಪ್ರಕ್ರಿಯೆಗಳೂ ನಡೆಯುತ್ತವೆ, ತಾನು ಮಾಡಬೇಕಾಗಿರುವ ಎಲ್ಲವನ್ನೂ ಅದು ಸಾಧಿಸಿರುತ್ತದೆ. ತಾನು ಬದುಕಿ ಉಳಿಯಲು, ವಂಶವೃದ್ಧಿ ಮಾಡಲು ಅದು ತನ್ನ ಗರಿಷ್ಠ ಪ್ರಯತ್ನಗಳನ್ನು ನಡೆಸುತ್ತದೆ. ಪ್ರತಿ ಜೀವಿಯೂ ಕೂಡ ಹೀಗೆಯೇ. ತಾಜಾ ಅಲ್ಲದ ಒಂದೇ ಒಂದು ಉತ್ಪನ್ನವೂ ಈ ದೇವರಂಗಡಿ ಯಲ್ಲಿಲ್ಲ!
(ಸಾರ ಸಂಗ್ರಹ)