ಎಚ್.ಡಿ.ಕೋಟೆ: ರೈತರ ಜಮೀನುಗಳಲ್ಲಿ ಕೊರೆದಿರುವ ಬೋರ್‌ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಸೆಸ್ಕ್ ವತಿಯಿಂದ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ ಹೆಚ್ಚಿನ ಲೋಡ್‌ನಿಂದಾಗಿ ಪದೇ ಪದೇ ಸುಟ್ಟುಹೊಗುತ್ತಿದ್ದು, ಈ ಭಾಗಕ್ಕೆ ಹೆಚ್ಚುವರಿ ಅಡಿಸನಲ್ ಟಿ.ಸಿ ಗಳನ್ನು ಅಳವಡಿಸಬೇಕೆಂದು ಪಟ್ಟಣದ ರೈತರು ಆಗ್ರಹಿಸಿದ್ದಾರೆ.
ತಾಲೂಕಿನ ಸೋನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಈ ಪರಿಸ್ಥಿತಿ ಕಂಡು ಬಂದಿದ್ದು, ಅನೇಕ ವರ್ಷಗಳ ಹಿಂದೆ ಟ್ರಾನ್ಸ್‌ಫಾರ್ಮರ್‌ವೊಂದನ್ನು ಸೆಸ್ಕ್ ನವರು ಅಳವಡಿಸಿದ್ದು, ಇದರಿಂದ ಪ್ರಾರಂಭದಲ್ಲಿ ಆರೇಳು ಜನ ರೈತರು ಮಾತ್ರ ತಮ್ಮ ಬೋರ್‌ಗೆ ಸಂಪರ್ಕ ಪಡೆದಿದ್ದರು.
ಆದರೆ ಕಳೆದ 3 ವರ್ಷಗಳಿಂದ ತಲೆದೂರಿದ್ದ ತೀವ್ರ ಬರದಿಂದ ಮಳೆ ಇಲ್ಲದೇ ತತ್ತರಿಸಿದ್ದ ಇಲ್ಲಿನ ಬಹುತೇಕ ಮಂದಿ ರೈತರು ತಮ್ಮ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ ದ್ವಿ-ದಳ ಧಾನ್ಯ ಬೆಳೆಗಳು ಸೇರಿದಂತೆ ಕಬ್ಬು ಇನ್ನಿತರ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ಈ ಭಾಗದಲ್ಲಿ ಅನೇಕ ರೈತರು ಬೋರ್ ಕೊರೆಸಿದ್ದು, ಇಲ್ಲಿ ಇರುವ ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ಸುಮಾರು 30ಕ್ಕೂ ಹೆಚ್ಚು ರೈತರು ಸಂಪರ್ಕ ಪಡೆದಿದ್ದಾರೆ.
ಈ ಭಾಗದಲ್ಲೂ ಪ್ರತಿನಿತ್ಯ ಅನಿಯಮಿತ ಲೋಡ್ ಸೆಡ್ಡಿಂಗ್ ಇರುವುದರಿಂದ ಕರೆಂಟ್ ಬಂದ ತಕ್ಷಣ ಎಲ್ಲ ರೈತರ ಬೋರ್‌ನ ಮೋಟರ್ ಚಾಲನೆ ಗೊಳ್ಳುವುದರಿಂದ ಟ್ರಾನ್ಸ್‌ಫಾರ್ಮರ್‌ಗೆ ಲೋಡ್ ಹೆಚ್ಚಾಗಿ ವಾರದಲ್ಲಿ ಎರಡು, ಮೂರು ದಿನಕ್ಕೊಮ್ಮೆ ಸುಟ್ಟು ಹೋಗುತ್ತಿದ್ದು, ಸೆಸ್ಕ್ ಸಿಬ್ಬಂದಿ ಬಂದು ಬದಲಿ ಟ್ರಾನ್ಸ್‌ಫಾರ್ಮರ್ ಅಳವಡಿಸುವವರೆಗೂ ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಹಾಯಿಸಲು ಆಗದೆ ಪರಿತಪಿಸಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ.
ಈ ಬಗ್ಗೆ ರೈತರು ಹಲವಾರು ಬಾರಿ ಪಟ್ಟಣದ ಸೆಸ್ಕ್ ಅಧಿಕಾರಿಗಳಿಗೆ ಈ ಭಾಗಕ್ಕೆ ಎರಡು ಹೆಚ್ಚುವರಿ ಅಡಿಸನಲ್ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕೆಂದು ಮನವಿ ಮಾಡಿಕೊಂಡರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಸೆಸ್ಕ್ನ ಮೇಲಾಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ಭಾಗದಲ್ಲಿ ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲು ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ನಾನು ಸೇರಿದಂತೆ 30ಕ್ಕೂ ಹೆಚ್ಚು ರೈತರು ಇಲ್ಲಿ ಇರುವ ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ನಮ್ಮ ಜಮೀನುಗಳ ಬೋರ್‌ಗಳಿಗೆ ಸಂಪರ್ಕ ಪಡೆದಿದ್ದು, ಟಿ.ಸಿ ಲೋಡ್ ತಡೆಯದೇ ಪದೇ ಪದೇ ಸುಟ್ಟು ಹೋಗುತ್ತಿದೆ. ಹಾಗಾಗಿ ಈ ಭಾಗಕ್ಕೆ ಎರಡು ಅಡಿಶನಲ್ ಟಿ.ಸಿ ಅಳವಡಿಸುವಂತೆ ಸೆಸ್ಕ್ ಅಧಿಕಾರಿಗಳನ್ನು ನಾಮ ಹಲವು ಬಾರಿ ಕೇಳಿಕೊಂಡರು ಇನ್ನು ಅಳವಡಿಸಿಲ್ಲ ಶೀಘ್ರ ಅಡಿಶಿನಲ್ ಟಿ.ಸಿ ಅಳವಡಿಸಿ ಅನುಕೂಲ ಮಾಡಿಕೊಡಿ.
-ಮಂಜೇಗೌಡ, ಸೋನಹಳ್ಳಿ