Advertisement

ಸಂಕಷ್ಟದಿಂದ ಪಾರು ಮಾಡಿದ ಫಿಸಿಕ್ಸ್‌ನ ಫ್ರೀಕ್ವೆನ್ಸಿ ಪಾಠ! 

06:00 AM Aug 14, 2018 | Team Udayavani |

ನಾವೆಲ್ಲ, ಜಪ್ಪಯ್ಯ ಎಂದರೂ ಬಾಯಿ ಬಿಡದೆ ಮುಗ್ಧರಂತೆ ನಟಿಸುತ್ತಾ ಕುಳಿತಿದ್ದೆವು. ಆದರೆ ಅವರು ಸುಲಭಕ್ಕೆ ಬಗ್ಗುವಂತೆ ಕಾಣಲಿಲ್ಲ. ನೀವಾಗಿಯೇ ಒಪ್ಪಿಕೊಳ್ಳದಿದ್ದರೆ, ನಾವೇ ನಿಮ್ಮೆಲ್ಲರ ಬ್ಯಾಗ್‌ ಚೆಕ್‌ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು. ನಾವು ತುಟಿ ಬಿಚ್ಚಲಿಲ್ಲ.

Advertisement

ದ್ವಿತೀಯ ಪಿಯುಸಿ ದಿನಗಳವು. ವಿಜ್ಞಾನ ವಿಭಾಗವಾದರೂ ತಂಟೆ, ತರಲೆ, ಕೀಟಲೆ ಮಾಡಿ ಉಪನ್ಯಾಸಕರಿಗೆ ಗೋಳು ಕೊಡುವುದರಲ್ಲಿ ಕಲಾ ವಿಭಾಗಕ್ಕೆ ಪೈಪೋಟಿ ನೀಡುವಂತಿತ್ತು ನಮ್ಮ ಬ್ಯಾಚ್‌. ವಿಜ್ಞಾನದ ವಿದ್ಯಾರ್ಥಿಗಳೆಂದರೆ ಪಾಠ, ನೋಟ್ಸ್‌, ಲ್ಯಾಬ್‌, ರೆಕಾಡ್ಸ್ ಅಂತೆಲ್ಲಾ “ಪುಸ್ತಕದ ಹುಳುಗಳು’ ಎಂಬ ತಥಾಕಥಿತ ಅಭಿಪ್ರಾಯವನ್ನು ಬದಲಿಸಿದ (ಅಪ)ಕೀರ್ತಿ ನಮ್ಮ ಕ್ಲಾಸ್‌ಗೆ ಸಲ್ಲಲೇಬೇಕು. ಉಪನ್ಯಾಸಕರೂ ಅವಕಾಶ ಸಿಕ್ಕಾಗೆಲ್ಲಾ “ಸೈನ್ಸ್ ಮಕ್ಕಳೆಂದರೆ ಹೇಗಿರಬೇಕು ಗೊತ್ತಾ? ಸದಾ ಓದಬೇಕು, ಇಲ್ಲದಿದ್ದರೆ ಪಾಸ್‌ ಆಗೋದು ಕಷ್ಟ’ ಅಂತ ಹೇಳಿ ಇತರ ಸೆಕ್ಷನ್‌ನಲ್ಲಿರುವ ಗಾಂಭೀರ್ಯತೆಯನ್ನು ನಮ್ಮಲ್ಲೂ ತುಂಬಿಸಲು ಯತ್ನಿಸುತ್ತಿದ್ದರು. ಆದರೆ ಆ ಪ್ರಯತ್ನ ಟ್ಯೂಬ್‌ ತೂತಾದ ವಾಲಿಬಾಲ್‌ಗೆ ಗಾಳಿ ತುಂಬಿಸಲು ಪಂಪ್‌ ಹೊಡೆದಷ್ಟೇ ವ್ಯರ್ಥವಾಗುತ್ತಿತ್ತು. 

  ದ್ವಿತೀಯ ಪಿಯುಸಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ಗೆ ಹೊಸ ಉಪನ್ಯಾಸಕಿಯೊಬ್ಬರು ಬಂದರು. ಮೃದು ಸ್ವಭಾವದ, ಮಿತಭಾಷಿಯಾಗಿದ್ದ ಅವರು, ಸಣ್ಣ ಹಾಗೂ ಕೀರಲು ದನಿಯಲ್ಲಿ ಬೈದರೂ, ಅದರ ಹಿಂದಿನ ಕೋಪ, ಆವೇಶ ನಮ್ಮನ್ನು ತಟ್ಟುತ್ತಿರಲಿಲ್ಲ. ಪಾಠದ ಶೈಲಿಯೂ ಚೆನ್ನಾಗಿರಲಿಲ್ಲ. ಅವರಿಗಿಂತ ಮುಂಚೆ ಇದ್ದ ಉಪನ್ಯಾಸಕರ ಒಳ್ಳೆಯ ಕ್ಲಾಸ್‌ ಕೇಳಿದ್ದ ನಮಗೆ ಸಹಜವಾಗಿಯೇ ಇವರ ತರಗತಿಯೆಂದರೆ ನಿರಾಸಕ್ತಿ ಮೂಡುತ್ತಿತ್ತು. ದಿನಗಳೆದಂತೆ ಅವರ ತರಗತಿಯಲ್ಲಿ ನಮ್ಮ ಉಪಟಳವೂ ಹೆಚ್ಚಿತು. ಗೊಣಗುವುದು, ಚಿತ್ರ ವಿಚಿತ್ರ ಸ್ವರ ಹೊರಡಿಸುವುದು, ರೇಗಿಸುವುದು, ಚಾಕ್‌ ಎಸೆಯುವುದು, ರಾಕೆಟ್‌ ಬಿಡುವುದು… ಹೀಗೆ. ಗಲಾಟೆ ಮಿತಿ ಮೀರಿ, ತರಗತಿಯನ್ನು ನಿಯಂತ್ರಿಸಲಾಗದೆ ಅವರು ಕೈಚೆಲ್ಲುತ್ತಿದ್ದ ವಿಚಾರ ಉಳಿದ ಉಪನ್ಯಾಸಕರ ಗಮನಕ್ಕೂ ಬಂದಿತ್ತು. 

ಅಂದೊಮ್ಮೆ ಹಾಗೇ ಆಯಿತು. ಆ ಉಪನ್ಯಾಸಕಿ ಮೊದಲ ಅವಧಿಯಲ್ಲಿ ಪಾಠ ಮಾಡುತ್ತಾ ಬೋರ್ಡ್‌ನತ್ತ ತಿರುಗಿ ಏನೋ ಬರೆಯುತ್ತಿದ್ದಾಗ ಕ್ಲಾಸಿನಲ್ಲಿ ಯಾರೋ ಜೋರಾಗಿ ಸೀಟಿ ಊದಿದರು. ಶಬ್ದ ಎಷ್ಟು ಜೋರಾಗಿತ್ತೆಂದರೆ, ಕಾರಿಡಾರ್‌ನಲ್ಲಿ ಬರುತ್ತಿದ್ದ ಇನ್ನಿಬ್ಬರು ಉಪನ್ಯಾಸಕರು ಹಾಗೂ ಉಪಪ್ರಾಂಶುಪಾಲರಿಗೂ ಅದು ಕೇಳಿಸಿತು. ನಮ್ಮ ತರಗತಿಯ ಬಗ್ಗೆ ಮೊದಲೇ ಸಿಟ್ಟಿಗೆದ್ದಿದ್ದ ಅವರು ಕಣ್ಣು ಕೆಂಪಗೆ ಮಾಡಿಕೊಂಡು ತರಗತಿಗೆ ಲಗ್ಗೆಯಿಟ್ಟರು. ಅವರು ತರಗತಿಯನ್ನು ಹೊಕ್ಕ ಪರಿ ಸಿಬಿಐ ದಾಳಿಯನ್ನು ನೆನಪಿಸುವಂತಿತ್ತು. “ಯಾರು, ಯಾರದು ವಿಷಲ್‌ ಊದಿದವರು? ಯಾರೆಂದು ಒಪ್ಪಿಕೊಂಡರೆ ಸರಿ, ಇಲ್ಲವಾದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ವಾರ್ನ್ ಮಾಡಿದರು. ನಾವೆಲ್ಲ ಕುಳಿತಲ್ಲೇ ಬೆವರಿದೆವು. ಕಂಪ್ಯೂಟರ್‌ ಮೇಡಂ “ಐ ಕಾಂಟ್‌ ಟೀಚ್‌ ಟು ದಿಸ್‌ ಕ್ಲಾಸ್‌’ ಎನ್ನುತ್ತಾ ಅಸಹಾಯಕತೆಯಿಂದ ದುಸುಮುಸುಗುಟ್ಟಿ ಉರಿಯುವ ಬೆಂಕಿಗೆ ತುಪ್ಪ ಸುರಿದರು. 

ನಾವೆಲ್ಲ, ಜಪ್ಪಯ್ಯ ಎಂದರೂ ಬಾಯಿ ಬಿಡದೆ ಮುಗ್ಧರಂತೆ ನಟಿಸುತ್ತಾ ಕುಳಿತಿದ್ದೆವು. ಆದರೆ ಅವರು ಸುಲಭಕ್ಕೆ ಬಗ್ಗುವಂತೆ ಕಾಣಲಿಲ್ಲ. ನೀವಾಗಿಯೇ ಒಪ್ಪಿಕೊಳ್ಳದಿದ್ದರೆ, ನಾವೇ ನಿಮ್ಮೆಲ್ಲರ ಬ್ಯಾಗ್‌ ಚೆಕ್‌ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು. ನಾವು ತುಟಿಬಿಚ್ಚಲಿಲ್ಲ. “ಮೌನಂ ಸಮ್ಮತಿ ಲಕ್ಷಣಂ’ ಎಂದು ಬಗೆದ ಅವರು ಫೀಲ್ಡಿಗಿಳಿದೇ ಬಿಟ್ಟರು. ಒಬ್ಬೊಬ್ಬರದ್ದೇ ಬ್ಯಾಗ್‌ ಚೆಕ್‌ ಮಾಡುತ್ತಾ ಬಂದರು. ಸ್ವಲ್ಪ ಹೊತ್ತು ಪರೀಕ್ಷಿಸಿದ ನಂತರ ಒಬ್ಬನ ಬ್ಯಾಗ್‌ನಲ್ಲಿ ಪುಟ್ಟ ವಿಷಲ್‌ ಸಿಕ್ಕಿಬಿಟ್ಟಿತು. ಉಪನ್ಯಾಸಕರ ಮೊಗದಲ್ಲಿ ಗೆಲುವಿನ ಹುರುಪು. ಆತನೋ ಒಂದೇ ಸಮನೆ, ನನ್ನ ಚಿಕ್ಕ ತಮ್ಮ ಅದನ್ನು ತಪ್ಪಿ ಬ್ಯಾಗ್‌ಗೆ ಹಾಕಿರಬೇಕು, ನನಗೆ ಗೊತ್ತೇ ಇರಲಿಲ್ಲ. ನಾನು ಊದಿಲ್ಲ ಎಂದು ಪರಿ ಪರಿಯಾಗಿ ನಿವೇದಿಸಿಕೊಳ್ಳುತ್ತಿದ್ದ. ಸೀಟಿ ಊದಿದವರು ಆತನನ್ನೇ “ಬಲಿ ಕಾ ಬಕ್ರ’ ಮಾಡಲು ಹೊಂಚು ಹಾಕಿ ತೆಪ್ಪಗೆ ಕುಳಿತಿದ್ದರು. ಅಸಲಿಗೆ ಆತ ಹಾಗೆಲ್ಲಾ ಮಾಡುವವನಲ್ಲ. ಆದರೆ ಶಸ್ತ್ರಸಮೇತ ಸಿಕ್ಕಿಬಿದ್ದಿದ್ದರಿಂದ ಆತನೇ ತಪ್ಪಿತಸ್ಥನಾಗಿದ್ದ. ತನ್ನದು ತಪ್ಪಿಲ್ಲ ಎಂದು ನಿರೂಪಿಸಲು ಆತನಲ್ಲೂ ಬೇರೆ ಪ್ರಬಲ ಸಾಕ್ಷ್ಯಗಳಿರಲಿಲ್ಲ! 

Advertisement

ಒಂದಷ್ಟು ಹೊತ್ತು ಈ ವಿಚಾರಣೆ ಮುಂದುವರಿದಿತ್ತು. ನಂತರ ವಿಷಲ್‌ನ ಕೈಗೆತ್ತಿಕೊಂಡು, ಒರೆಸಿ ಒಂದೆರಡು ಬಾರಿ ಊದಿ ನೋಡಿದ ಫಿಸಿಕ್ಸ್ ಲೆಕ್ಚರರ್‌ ಏನೋ ಹೊಳೆದವರಂತೆ, “ಇಲ್ಲಾ ಇಲ್ಲಾ, ಈತ ಊದಿಲ್ಲ’ ಎಂದು ಘೋಷಿಸಿದರು. ಆ ಸೌಂಡ್‌ ಅನ್ನು ನಾನು ಸರಿಯಾಗಿಯೇ ಕೇಳಿಸಿಕೊಂಡಿದ್ದೇನೆ. ಅದರ ಫ್ರೀಕ್ವೆನ್ಸಿ ಬೇರೆ. ಈ ಫ್ರೀಕ್ವೆನ್ಸಿ ಅಲ್ಲವೇ ಅಲ್ಲಾ! ಎಂದರು. ಉಳಿದವರೂ ಅದಕ್ಕೆ ಸಮ್ಮತಿಸಿದರು. ಆ ಹುಡುಗ ಬಹುವಾಗಿ ದ್ವೇಷಿಸುತ್ತಿದ್ದ ಭೌತಶಾಸ್ತ್ರದ ಪರಿಕಲ್ಪನೆಯೊಂದು ಆತನನ್ನು ಸಂದಿಗ್ಧತೆಯಿಂದ ಪಾರು ಮಾಡಿತ್ತು. ಗೆದ್ದ ಹುಮ್ಮಸ್ಸಿನಲ್ಲಿದ್ದ ಉಪನ್ಯಾಸಕರು ಪೆಚ್ಚಾದರು. ಇದೇ ಲಾಸ್ಟ್ ವಾರ್ನಿಂಗ್‌ ಎಂದು ದಬಾಯಿಸಿ ಹೊರನಡೆದರು. ಮನಸ್ಸಿಲ್ಲದ ಮನಸ್ಸಲ್ಲಿ ಉಪನ್ಯಾಸಕಿ ಪಾಠ ಆರಂಭಿಸಿದರು. ವಿಷಲ್‌ ಅನ್ನು ಬಾಯಿಯೊಳಗೆ ಇಟ್ಟುಕೊಂಡು ಮ್ಯಾನೇಜ್‌ ಮಾಡಿದ್ದ ಹಿಂದಿನ ಬೆಂಚ್‌ನ ಆಸಾಮಿ ಯಾವಾಗ ಬೆಲ್‌  ಹೊಡೆದೀತೆಂದು ಕಾಯುತ್ತಿದ್ದ!

ಸಂದೇಶ್‌ ಎಚ್‌.ನಾಯ್ಕ, ಹಕ್ಲಾಡಿ    

Advertisement

Udayavani is now on Telegram. Click here to join our channel and stay updated with the latest news.

Next