ಪ್ಯಾರಿಸ್: ಟೆನಿಸ್ ದಿಗ್ಗಜಗಳಾದ ನೊವಾಕ್ ಜೊಕೋವಿಕ್ ಮತ್ತು ರಫೆಲ್ ನಡಾಲ್ ಮಹಾ ಕಾಳಗವೊಂದಕ್ಕೆ ಹುರಿಗೊಂಡಿದ್ದಾರೆ. ಶುಕ್ರವಾರ ನಡೆಯುವ ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಇವರಿಬ್ಬರು ಮುಖಾಮುಖಿಯಾಗಲಿದ್ದಾರೆ. ಇಲ್ಲಿ ಗೆದ್ದವರು ಚಾಂಪಿಯನ್ ಆಗಿ ಮೂಡಿಬರುವ ಸಾಧ್ಯತೆ ಹೆಚ್ಚು ಎಂಬುದೊಂದು ಲೆಕ್ಕಾಚಾರ.
ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ರಫೆಲ್ ನಡಾಲ್ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್ ಅವರನ್ನು ಪರಾಭವಗೊಳಿಸಿದರೆ, ಜೊಕೋವಿಕ್ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವರನ್ನು 6-3, 6-2, 6-7 (5-7), 7-5 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
“ಕ್ಲೇ ಕೋರ್ಟ್ ಕಿಂಗ್’ ಎನಿಸಿರುವ ರಫೆಲ್ ನಡಾಲ್ ಪ್ಯಾರಿಸ್‌ನಲ್ಲಿ ಜೊಕೋವಿಕ್ ವಿರುದ್ಧ ಅಮೋಘ ದಾಖಲೆ ಹೊಂದಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಏಳನ್ನು ಗೆದ್ದು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.
ಕರ್ಫ್ಯೂ ಲೆಕ್ಕಿಸದ ವೀಕ್ಷಕರು :
ಜೊಕೋವಿಕ್-ಬೆರೆಟಿನಿ ನಡುವಿನ ಪಂದ್ಯ ರಾತ್ರಿ 11 ಗಂಟೆಯ ಬಳಿಕವೂ ಮುಂದುವರಿಯಿತು. ಆಗ “ಕೊರೊನಾ ಕರ್ಫ್ಯೂ’ ಜಾರಿಗೆ ಬರುವುದರಿಂದ ವೀಕ್ಷಕರನ್ನು ಹೊರಗೆ ಕಳುಹಿಸುವುದು ಅನಿವಾರ್ಯವಾಗಿತ್ತು. ಆದರೆ ಇದಕ್ಕೆ ವೀಕ್ಷಕರು ತಗಾದೆ ತೆಗೆದು ಸ್ಟೇಡಿಯಂನಲ್ಲೇ ಉಳಿಯುವುದಾಗಿ ಪಟ್ಟು ಹಿಡಿದರು. ಹೀಗಾಗಿ ಪಂದ್ಯ 25 ನಿಮಿಷಗಳ ಕಾಲ ಸ್ಥಗಿತಗೊಂಡಿತು.