Advertisement

ಫ್ರೆಂಚ್‌ ಓಪನ್‌: ನಡಾಲ್‌ ಟ್ರೋಫಿ ನಂ.11

06:30 AM Jun 11, 2018 | Team Udayavani |

ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’, ವಿಶ್ವದ ನಂಬರ್‌ ವನ್‌ ಟೆನಿಸಿಗ ಸ್ಪೇನಿನ ರಫೆಲ್‌ ನಡಾಲ್‌ ಅವರ ಫ್ರೆಂಚ್‌ ಓಪನ್‌ ಪ್ರಶಸ್ತಿ ಬೇಟೆಯ ದಾಖಲೆ 11ಕ್ಕೆ ವಿಸ್ತರಿಸಲ್ಪಟ್ಟಿದೆ. ರವಿವಾರ ನಡೆದ ಫೈನಲ್‌ ಕಾಳಗದಲ್ಲಿ ಅವರು ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು “ಡಾಮಿನೇಟ್‌’ ಮಾಡಲು ಬಿಡದೆ 6-4, 6-3, 6-2 ಅಂತರದಿಂದ ಮಣಿಸಿ ಹೊಳೆಯುವ ಟ್ರೋಫಿಯನ್ನು ಕಚ್ಚಿ ಹಿಡಿದರು.

Advertisement

ಪ್ರಶಸ್ತಿ ಸಮರದಲ್ಲಿ ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಅವರೇ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರೂ ಡೊಮಿನಿಕ್‌ ಥೀಮ್‌ ಮೇಲೆಯೂ ಬಾಜಿ ಕಟ್ಟಿದವರಿದ್ದರು. ಕಾರಣ, ಥೀಮ್‌ ಕೂಡ ಆವೆಯಂಗಳದಲ್ಲಿ ಅಮೋಘ ಪ್ರದರ್ಶನ ನೀಡುವ ಸಾಮರ್ಥ್ಯವುಳ್ಳ ಆಟಗಾರ. ಅಲ್ಲದೇ ಕಳೆದ 2 ವರ್ಷಗಳ ಆವೆಯಂಗಳದ ಟೆನಿಸ್‌ ಕೂಟಗಳಲ್ಲಿ ನಡಾಲ್‌ಗೆ 2 ಸಲ ಸೋಲುಣಿಸಿದ ಏಕೈಕ ಆಟಗಾರನೆಂಬ ಹಿರಿಮೆಯೂ ಥೀಮ್‌ ಪಾಲಿಗಿತ್ತು. ಆದರೆ ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೆ ಏರಿಬಂದ ಥೀಮ್‌ಗೆ ರೊಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮ್ಯಾಜಿಕ್‌ ಮಾಡಲಾಗಲಿಲ್ಲ. ಅವರು ನೇರ ಸೆಟ್‌ಗಳಲ್ಲಿ ಸೋತು ನಿರಾಸೆ ಅನುಭವಿಸಿದರು.

ಥೀಮ್‌ ಮೊದಲ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ನಡಾಲ್‌ ಆಟದ ರಂಗೇರುತ್ತಿದ್ದಂತೆಯೇ ಥೀಮ್‌ ಹಿನ್ನಡೆ ಅನುಭವಿಸತೊಡಗಿದರು. ಉಳಿದೆರಡು ಸೆಟ್‌ಗಳಲ್ಲಿ ಅವರ ಅಂಕ ಕಡಿಮೆಯಾಗುತ್ತ ಹೋಯಿತು.

ಇದು ರಫೆಲ್‌ ನಡಾಲ್‌ ಆಡಿದ 24ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿದ್ದು, ಅವರ ಒಟ್ಟು ಪ್ರಶಸ್ತಿಗಳ ಸಂಖ್ಯೆ 17ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next