ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ಹಂತಕೇರಿದ್ದಾರೆ.
ಅವರು ತನ್ನ ಡಚ್ ಜತೆಗಾರ ಮಿಡಲ್‌ಕೂಪ್ ಅವರೊಂದಿಗೆ ಸೋಮವಾರ ನಡೆದ ಫ್ರೆಂಚ್ ಓಪನ್‌ನ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಲಾಯ್ಡ ಗ್ಲಾಸ್‌ಪೂಲ್ ಮತ್ತು ಹೆನ್ರಿ ಹೆಲಿಯೊವಾರ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದರು.
ಬೋಪಣ್ಣ- ಮಿಡಲ್‌ಕೂಪ್ ಅವರು 4-6, 6-4, 7-6 (3) ಸೆಟ್‌ಗಳಿಂದ ಉರುಳಿಸಿ ಮುನ್ನಡೆದರು. ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ 42ರ ಹರೆಯದ ಬೋಪಣ್ಣ ಮತ್ತು ಮಿಡಲ್‌ಕೂಪ್ ಅವರು ಮಾರ್ಸೆಲೊ ಅರೆವಾಲೊ ಮತ್ತು ಜೀನ್ ಜುಲಿಯನ್ ರೋಜರ್ ಅವರನ್ನು ಎದುರಿಸಲಿದ್ದಾರೆ.
ಬೋಪಣ್ಣ 2015ರ ವಿಂಬಲ್ಡನ್ ಕೂಟದಲ್ಲಿ ಈ ಹಿಂದೆ ಸೆಮಿಫೈನಲ್ ತಲುಪಿದ್ದ ಸಾಧನೆ ಮಾಡಿದ್ದರು. ರುಮಾನಿಯಾದ ಫ್ಲೋರಿನ್ ಮೆರ್ಜಿಯಾ ಜತೆಗೂಡಿ ಆಡಿದ್ದ ಬೋಪಣ್ಣ ಅವರು ಐದು ಸೆಟ್‌ಗಳ ಕಠಿನ ಕಾದಾಟದಲ್ಲಿ ಜೀನ್ ಜುಲಿಯನ್ ರೋಜರ್ ಮತ್ತು ಹೊರಿಯಾ ತೆಕಾವು ಅವರನ್ನು ಮಣಿಸಿದ್ದರು.
ಮೊದಲ ಸೆಟ್‌ನಲ್ಲಿ ಸೋತಿದ್ದ ಬೋಪಣ್ಣ-ಮಿಡಲ್‌ಕೂಪ್ ಅವರು ದ್ವಿತೀಯ ಸೆಟ್‌ನಲ್ಲಿ ಪ್ರಬಲ ಹೋರಾಟ ಸಂಘಟಿಸಿ ಗೆದ್ದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಅವರಿಬ್ಬರು ಸೂಪರ್ ಟೈಬ್ರೇಕರ್‌ನಲ್ಲಿ ಪಂದ್ಯ ಗೆದ್ದು ಸಂಭ್ರಮಿಸಿದರು.
ಬೋಪಣ್ಣ-ಮಿಡಲ್‌ಕೂಪ್ ಈ ಹಿಂದಿನ ಪಂದ್ಯದಲ್ಲಿ ಐದು ಮ್ಯಾಚ್ ಅಂಕ ರಕ್ಷಿಸಿ ಮಾಟೆ ಪಾವಿಕ್ ಮತ್ತು ನಿಕೋಲಾ ಮೆಕ್ತಿಕ್ ಅವರನ್ನು ಕೆಡಹಿ ಮುನ್ನಡೆದಿದ್ದರು.