ಪ್ಯಾರಿಸ್: ಕೋವಿಡ್-19 ಮಹಾಮಾರಿಯಿಂದಾಗಿ 4 ತಿಂಗಳ ಕಾಲ ಮುಂದೂಡಲ್ಪಟ್ಟಿರುವ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆಯೇ? ಫ್ರಾನ್ಸ್ ಟೆನಿಸ್ ಅಧ್ಯಕ್ಷ ಬರ್ನಾರ್ಡ್ ಗಿಡಿಸೆಲ್ಲಿ ಇಂಥ ದೊಂದು ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.
ಮೂಲ ವೇಳಾಪಟ್ಟಿ ಪ್ರಕಾರ ವರ್ಷದ ಈ ದ್ವಿತೀಯ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿ ಮೇ 24ರಿಂದ ಜೂನ್ 7ರ ತನಕ ನಡೆಯಬೇಕಿತ್ತು. ಆದರೆ ಇದಕ್ಕೀಗ ನೂತನ ದಿನಾಂಕವನ್ನು ಪ್ರಕಟಿಸಲಾಗಿದ್ದು, ಸೆ. 20ರಿಂದ ಅ. 4ರ ತನಕ ನಡೆಸಲು ನಿರ್ಧರಿಸಲಾಗಿದೆ. ಆಗ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ, ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
“ನಾವು ಯಾವುದೇ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ. ಲಕ್ಷಾಂತರ ಟೆನಿಸ್ ಪ್ರೇಮಿಗಳು ಈ ಕೂಟಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ವೀಕ್ಷಕರಿಗೆ ಪ್ರವೇಶಾವಕಾಶ ನೀಡದೇ ಪಂದ್ಯವನ್ನು ನಡೆಸುವುದು, ಟಿವಿಯಲ್ಲಿ ಇದರ ನೇರ ಪ್ರಸಾರ ಮಾಡುವುದು ಸದ್ಯದ ಯೋಚನೆ’ ಎಂಬುದಾಗಿ ಗಿಡಿಸೆಲ್ಲಿ ಹೇಳಿದ್ದಾರೆ.
ಆವೆ ಅಂಗಳದ ಟೂರ್ನಿ
ವರ್ಷದ 4 ಗ್ರ್ಯಾನ್ ಸ್ಲಾಮ್ ಪಂದ್ಯಾವಳಿ ಗಳಲ್ಲಿ ಫ್ರೆಂಚ್ ಓಪನ್ ಮಾತ್ರ ಆವೆಯಂಗಳ ದಲ್ಲಿ ನಡೆಯುವ ಕಾರಣ ಸಹಜವಾಗಿಯೇ ಈ ಕೂಟದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚು.
ವರ್ಷದ 3ನೇ ಗ್ರ್ಯಾನ್ ಸ್ಲಾಮ್ ಕೂಟವಾದ ವಿಂಬಲ್ಡನ್ ಈಗಾಗಲೇ ರದ್ದುಗೊಂಡಿದೆ. 4ನೇ ಹಾಗೂ ಕೊನೆಯ ಗ್ರ್ಯಾನ್ ಸ್ಲಾಮ್ ಆಗಿ ರುವ ಯುಎಸ್ ಓಪನ್ ನ್ಯೂಯಾರ್ಕ್ ನಲ್ಲಿ ನಡೆಯುವ (ಆ. 31-ಸೆ. 13) ಯಾವುದೇ ಸಾಧ್ಯತೆ ಇಲ್ಲ.