Advertisement

ಮೂರನೇ ಸುತ್ತು ದಾಟಿದ ಜ್ವೆರೇವ್‌, ನಿಶಿಕೊರಿ

06:00 AM Jun 02, 2018 | |

ಪ್ಯಾರಿಸ್‌: ವಿಶ್ವದ ದ್ವಿತೀಯ ರ್‍ಯಾಂಕಿಂಗ್‌ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌, ಜಪಾನಿನ ಕೀ ನಿಶಿಕೊರಿ ಫ್ರೆಂಚ್‌ ಓಪನ್‌ ಪಂದ್ಯಾವಳಿಯಲ್ಲಿ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎರಡು ಬಾರಿಯ ಗ್ರ್ಯಾನ್‌ಸ್ಲಾಮ್‌ ಸೆಮಿ ಫೈನಲಿಸ್ಟ್‌, ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. 

Advertisement

ದಮಿರ್‌ ಹೋರಾಟದ ಕೆಚ್ಚು
ಶುಕ್ರವಾರದ ಸೆಣಸಾಟದಲ್ಲಿ ಅಲೆಕ್ಸಾಂಡರ್‌ ಜ್ವೆರೇವ್‌ ಬೋಸ್ನಿಯಾದ ದಮಿರ್‌ ಜುಮುರ್‌ ವಿರುದ್ಧ ಸೋಲಿನಿಂದ ಪಾರಾದದ್ದೇ ಒಂದು ಪವಾಡ. 5 ಸೆಟ್‌ಗಳ ಕಠಿನ ಕಾದಾಟದ ಬಳಿಕ ಜ್ವೆರೇವ್‌ 6-3, 3-6, 4-6, 7-6 (7-3), 7-5 ಅಂತರದಿಂದ ಗೆದ್ದು ನಿಟ್ಟುಸಿರೆಳೆದರು. ಭರವಸೆಯ ಟೆನಿಸಿಗ ಜ್ವೆರೇವ್‌ ಅವರ ಈ ಒದ್ದಾಟ ವನ್ನು ಕಂಡಾಗ ಮುಂದಿನ ಹಾದಿ ಕಠಿನ ಎಂದೇ ಭಾವಿಸಬೇಕಾಗುತ್ತದೆ.

ಜಪಾನಿನ ಕೀ ನಿಶಿಕೊರಿ ಸತತ 3ನೇ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್‌ ಆಟಗಾರನನ್ನು ಸೋಲಿಸಿ ಪ್ರಿ-ಕ್ವಾರ್ಟರ್‌ ಫೈನಲ್‌ ಮುಟ್ಟಿದರು. 3ನೇ ಸುತ್ತಿನಲ್ಲಿ ಅವರಿಗೆ ಎದುರಾದ ಆಟಗಾರ ಗಿಲ್ಲೆಸ್‌ ಸಿಮೋನ್‌. ಜಪಾನಿ ಟೆನಿಸಿಗನ ಗೆಲುವಿನ ಅಂತರ 6-3, 6-1, 6-3. 4ನೇ ಶ್ರೇಯಾಂಕದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ 7-6 (7-4), 6-2, 6-4 ಅಂತರದಿಂದ ಮಣಿಸಿದರು. 

ಕೇಯ್ಸ, ಪುಟಿನ್ಸೇವಾ ಮುನ್ನಡೆ
ವನಿತಾ ಸಿಂಗಲ್ಸ್‌ನಲ್ಲಿ ಅಮೆರಿಕದ 13ನೇ ಶ್ರೇಯಾಂಕಿತೆ ಮ್ಯಾಡಿಸನ್‌ ಕೇಯ್ಸ ಜಪಾನಿನ ನವೋಮಿ ಒಸಾಕಾ ವಿರುದ್ಧ 6-1, 7-6 (9-7) ಅಂತರದ ಜಯ ಸಾಧಿಸಿ ಪ್ರಿ-ಕ್ವಾರ್ಟರ್‌ ಫೈನಲ್‌ ಮುಟ್ಟಿದರು. ಇವರ ಮುಂದಿನ ಎದುರಾಳಿ ರೊಮೇನಿಯಾದ ಮಿಹಲ್‌ ಬುಝರ್ನೆಸ್ಕಾ. ದಿನದ ಇನ್ನೊಂದು ಪಂದ್ಯದಲ್ಲಿ ಅವರು ಉಕ್ರೇನಿನ 4ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾಗೆ 6-3, 7-5 ಅಂತರದ ಸೋಲುಣಿಸಿದರು.

ರಶ್ಯದ ಯುಲಿಯಾ ಪುಟಿನ್ಸೇವಾ ಚೀನದ ಕ್ವಿಯಾಂಗ್‌ ವಾಂಗ್‌ ವಿರುದ್ಧ ಸಂಭಾವ್ಯ ಆಘಾತದಿಂದ ಪಾರಾಗಿ 1-6, 7-5, 6-4 ಅಂತರದಿಂದ ಜಯ ಸಾಧಿಸಿದರು. ರಶ್ಯದ ಮತ್ತೋರ್ವ ಆಟಗಾರ್ತಿ ದರಿಯಾ ಕಸತ್ಕಿನಾ ಗ್ರೀಸ್‌ನ ಮರಿಯಾ ಸಕ್ಕರಿ ಅವರನ್ನು  6-1, 1-6, 6-3ರಿಂದ ಮಣಿಸಿ ಪ್ರಿ-ಕ್ವಾರ್ಟರ್‌ ಫೈನಲಿಗೆ ಏರಿದರು.

Advertisement

3ನೇ ಸುತ್ತಿನಲ್ಲಿ ನಡಾಲ್‌, ಸೆರೆನಾ
ಗುರುವಾರ ರಾತ್ರಿಯ ಪ್ರಮುಖ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌, ವನಿತಾ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್‌ 3ನೇ ಸುತ್ತಿಗೆ ಓಟ ಬೆಳೆಸಿದ್ದಾರೆ. ಆವೆಯಂಗಳದಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿರುವ ನಡಾಲ್‌ ಆರ್ಜೆಂಟೀನಾದ ಗಿಡೊ ಪೆಲ್ಲ ಅವರನ್ನು 6-2, 6-1, 6-1ರಿಂದ ಸುಲಭದಲ್ಲಿ ಸೋಲಿಸಿದರು. ಕೊನೆಯ 2 ಸೆಟ್‌ ವಶಪಡಿಸಿಕೊಳ್ಳಲು ನಡಾಲ್‌ಗೆ ಕೇವಲ 65 ನಿಮಿಷ ಸಾಕಾಯಿತು. ಸಿಮೋನ್‌ ಬೊಲೆಲ್ಲಿ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ತುಸು ತಿಣುಕಾಡಿದ ನಡಾಲ್‌, ಸೆಕೆಂಡ್‌ ರೌಂಡ್‌ ಹಣಾಹಣಿಯಲ್ಲಿ ದಿಟ್ಟ ಪ್ರದರ್ಶನವಿತ್ತರು. ನಡಾಲ್‌ ಅವರ ಮುಂದಿನ ಎದುರಾಳಿ ಫ್ರಾನ್ಸ್‌ನ ರಿಚರ್ಡ್‌ ಗಾಸ್ಕ್ವೆಟ್‌.

ಸೆರೆನಾ 3 ಸೆಟ್‌ ಸೆಣಸಾಟ
ವನಿತಾ ಸಿಂಗಲ್ಸ್‌ ಹಣಾಹಣಿಯಲ್ಲಿ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯದ 17ನೇ ಶ್ರೇಯಾಂಕದ ಆಟಗಾರ್ತಿ ಆ್ಯಶ್ಲೀ ಬಾರ್ಟಿ ಅವರನ್ನು 3 ಸೆಟ್‌ಗಳ ಕಾದಾಟದ ಬಳಿಕ 3-6, 6-3, 6-4ರಿಂದ ಗೆದ್ದು ಬಂದರು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್‌ ವಿರುದ್ಧ ಆಡಲಿದ್ದಾರೆ.

7ನೇ ಶ್ರೇಯಾಂಕದ ಫ್ರಾನ್ಸ್‌ ಆಟಗಾರ್ತಿ ಕ್ಯಾರೋಲಿನ್‌ ಗಾರ್ಸಿಯಾ ಚೀನದ ಶುಯಿ ಪೆಂಗ್‌ ಆಟವನ್ನು 6-4, 3-6, 6-3 ಅಂತರದಿಂದ ಮುಗಿಸಿದರು. ಜೆಕ್‌ ಗಣರಾಜ್ಯದ 6ನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾ ತಮ್ಮದೇ ದೇಶದ ಲೂಸಿ ಸಫ‌ರೋವಾ ಅವರೆದುರು 3-6, 6-4, 6-1 ಅಂತರದ ಜಯ ಒಲಿಸಿಕೊಂಡರು. ಚೀನಾದ ಶುಯಿ ಜಾಂಗ್‌ ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಸೋತು ಹೊರಬಿದ್ದರು. ರೊಮೇನಿಯಾದ ಐರಿನಾ ಕೆಮೆಲಿಯಾ ಬೆಗು ಈ ಪಂದ್ಯವನ್ನು 6-3, 6-4 ಅಂತರದಿಂದ ಗೆದ್ದರು.

ಜೊಕೋ, ವೋಜ್ನಿಯಾಕಿ ಜಯ
ಶುಕ್ರವಾರದ 3ನೇ ಸುತ್ತಿನ ಪಂದ್ಯದಲ್ಲಿ ನೊವಾಕ್‌ ಜೊಕೋವಿಕ್‌ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ ವಿರುದ್ಧ ಭಾರೀ ಹೋರಾಟ ಸಂಘಟಿಸಿ 6-4, 6-7 (6-8), 7-6, 6-2 ಅಂತರದ ಜಯ ಸಾಧಿಸಿದರು. ವನಿತಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕದ ಕ್ಯಾರೋಲಿನ್‌ ವೋಜ್ನಿಯಾಕಿ 6-0, 6-3ರಿಂದ ಫ್ರಾನ್ಸ್‌ನ ಪೌಲಿನ್‌ ಪರ್ಮೆಂಟೀರ್‌ ಅವರಿಗೆ 6-0, 6-3ರಿಂದ ಸೋಲುಣಿಸಿ ಪ್ರಿ-ಕ್ವಾರ್ಟರ್‌ ಫೈನಲ್‌ಗೆ ಪಯಣಿಸಿದರು.

ಬೋಪಣ್ಣ-ಬಬೋಸ್‌ ನಿರ್ಗಮನ
ಮಿಕ್ಸೆಡ್‌ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಟೈಮಿಯಾ ಬಬೋಸ್‌ ಮೊದಲ ಸುತ್ತಿನಲ್ಲೇ ಶುಯಿ ಜಾಂಗ್‌ (ಚೀನ)-ಜಾನ್‌ ಪೀರ್ (ಆಸ್ಟ್ರೇಲಿಯ) ಜೋಡಿ ವಿರುದ್ಧ 6-2, 6-3ರಿಂದ ಸೋತು ಹೊರಬಿದ್ದರು.

ಯೂಕಿ-ದಿವಿಜ್‌ ಜೋಡಿಗೆ ಸೋಲು
ಭಾರತದ ಯೂಕಿನ ಭಾಂಬ್ರಿ-ದಿವಿಜ್‌ ಶರಣ್‌ ಜೋಡಿ ಪುರುಷರ ಡಬಲ್ಸ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ಶುಕ್ರವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರಿಯಾದ ಒಲಿವರ್‌ ಮರಾಕ್‌-ಕ್ರೊವೇಶಿಯಾದ ಮೇಟ್‌ ಪಾವಿಕ್‌ ಸೇರಿಕೊಂಡು ಭಾರತೀಯ ಆಟಗಾರರನ್ನು 7-5, 6-3 ಅಂತರದಿಂದ ಮಣಿಸಿದರು. ಯೂಕಿ ಭಾಂಬ್ರಿ ಸಿಂಗಲ್ಸ್‌ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಎಡವಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next