Advertisement
ತೃತೀಯ ಶ್ರೇಯಾಂಕದ ಸ್ಟಾನಿಸ್ಲಾಸ್ ವಾವ್ರಿಂಕ 6-2, 7-6 (8-6), 6-3 ಅಂತರದಿಂದ ಸ್ಲೊವಾಕಿಯಾದ ಜೊಝೆಫ್ ಕೊವಾಲಿಕ್ ಅವರನ್ನು ಮಣಿಸಿದರು. 2015ರ ಕ್ವಾರ್ಟರ್ ಫೈನಲಿಸ್ಟ್, ಉಕ್ರೇನಿನ 5ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಕಜಾಕ್‌ಸ್ಥಾನದ ಯರೋಸ್ಲಾವಾ ಶ್ವೆಡೋವಾ ಅವರನ್ನು 6-4, 6-3ರಿಂದ ಮಣಿಸಿ ಮೊದಲ ಸುತ್ತು ದಾಟಿದರು.
ಫ್ರಾನ್ಸ್‌ನ ಪ್ರತಿಭಾನ್ವಿತ ಆಟಗಾರ್ತಿ ಕ್ರಿಸ್ಟಿನಾ ಲಡೆನೋವಿಕ್ ಮ್ಯಾರಥಾನ್ ಹೋರಾಟದ ಮೂಲಕ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು ಮಣಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು. 2 ಗಂಟೆ, 59 ನಿಮಿಷಗಳ ಈ ಕಾದಾಟವನ್ನು ಅವರು 3-6, 6-3, 8-6 ಅಂತರದಿಂದ ಗೆದ್ದರು. 2000ದ ಬಳಿಕ ಮೇರಿ ಪಿಯರ್ ಚಾಂಪಿಯನ್ ಆದ ಬಳಿಕ ತವರಿನ ಆಟಗಾರ್ತಿಗೆ “ರೊಲ್ಯಾಂಡ್ ಗ್ಯಾರೋಸ್’ ನಲ್ಲಿ ಪ್ರಶಸ್ತಿ ಒಲಿದಿಲ್ಲ. ಹೀಗಾಗಿ ಲಡೆನೋವಿಕ್ ಮೇಲೆ ಫ್ರಾನ್ಸ್ ಟೆನಿಸ್ ಆಭಿಮಾನಿಗಳು ವಿಶೇಷ ನಿರೀಕ್ಷೆ ಇರಿಸಿ ಕೊಂಡಿದ್ದಾರೆ. ರೊಮೆನಿಯಾದ ಸೊರಾನಾ ಕಿಸ್ಟಿì ಕೂಡ ಮೊದಲ ಸುತ್ತಿನ ಗೆಲುವು ಸಾಧಿಸಿದ್ದಾರೆ. ಅವರು ಚೀನದ ಶುಯಿ ಪೆಂಗ್ ವಿರುದ್ಧ 6-3, 6-1 ಅಂತರದ ಸುಲಭ ಜಯ ಒಲಿಸಿಕೊಂಡರು. ಅಮೆರಿಕದ ಟಯ್ಲರ್ ಟೌನ್‌ಸೆಂಡ್, ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ, ಸ್ಪೇನಿನ ಕಾರ್ಲಾ ಸೂರೆಜ್ ನವಾರೊ ಸುಲಭ ಜಯದೊಂದಿಗೆ ದ್ವಿತೀಯ ಸುತ್ತು ಪ್ರವೇಶಿಸಿದರು.
Related Articles
ಬ್ರಿಟನ್ನಿನ 7ನೇ ಶ್ರೇಯಾಂಕಿತೆ ಜೊಹಾನ್ನಾ ಕೊಂಟಾ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ. ಅವರನ್ನು ಚೈನೀಸ್ ತೈಪೆಯ ಸು ವೀ ಶೀ ಭಾರೀ ಹೋರಾಟದ ಬಳಿಕ 1-6, 7-6 (7-2), 6-4 ಅಂತರದಿಂದ ಉರುಳಿಸಿದರು. ಇದ ರೊಂದಿಗೆ ಕೊಂಟಾ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಆಡಿದ ಮೂರೂ ಸಂದರ್ಭಗಳಲ್ಲಿ ಮೊದಲ ಸುತ್ತಿನಲ್ಲೇ ಎಡವಿದಂತಾಯಿತು.ಫ್ರಾನ್ಸ್‌ನ ಅಲಿಸೆ ಕಾರ್ನೆಟ್, ಅಮೆರಿಕದ ಮ್ಯಾಡಿಸನ್ ಕೇಯ್ಸ ಕೂಡ ವನಿತಾ ಸಿಂಗಲ್ಸ್ ಮೊದಲ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಡೆಲ್ ಪೊಟ್ರೊ, ಕಿರ್ಗಿಯೋಸ್ ಜಯಪುರುಷರ ಸಿಂಗಲ್ಸ್ ಸ್ಪರ್ಧೆಯ ಇತರ ಪಂದ್ಯಗಳಲ್ಲಿ ಡೆಲ್ ಪೊಟ್ರೊ, ಕಿರ್ಗಿಯೋಸ್, ಇಸ್ತೋಮಿನ್ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. 2012ರ ಬಳಿಕ ಫ್ರೆಂಚ್ ಓಪನ್ ಆಡಲಿಳಿದ ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ತಮ್ಮದೇ ದೇಶದ ಗುಡೊ ಪೆಲ್ಲ ಅವರನ್ನು 6-2, 6-1, 6-4 ಅಂತರದಿಂದ ಮಣಿಸಿದರು. ಉಜ್ಬೆಕಿಸ್ಥಾನದ ಡೆನ್ನಿಸ್ ಇಸ್ತೋಮಿನ್ ಅಮೆರಿಕದ ಎರ್ನೆಸ್ಟೊ ಎಸ್ಕೊಬೆಡೊ ಅವರನ್ನು 7-6 (7-3), 6-3, 6-4ರಿಂದ; ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಜರ್ಮನಿಯ ಫಿಲಿಪ್ ಕೋಹ್ಲಶ್ರೀಬರ್ ಅವರನ್ನು 6-3, 7-6 (7-4), 6-3ರಿಂದ ಪರಾಭವಗೊಳಿಸಿ 2ನೇ ಸುತ್ತು ತಲುಪಿದರು. ಅಮೆರಿಕದ ಬಿಗ್ ಸರ್ವರ್ ಖ್ಯಾತಿಯ ಟೆನಿಸಿಗ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಅವರನ್ನು ಕೊರಿಯಾದ ಹಿಯೋನ್ ಚುಂಗ್ 6-4, 3-6, 6-3, 6-3 ಅಂತರದಿಂದ ಮಣಿಸಿದರು. ನಿಶಿಕೊರಿ, ವೆರ್ದಸ್ಕೊ ಗೆಲುವು
ಏಶ್ಯದ ಭರವಸೆಯ ಆಟಗಾರ, ಜಪಾನಿನ ಕೀ ನಿಶಿಕೊರಿ 4 ಸೆಟ್‌ಗಳ ಕಾದಾಟದ ಬಳಿಕ ಆಸ್ಟ್ರೇಲಿಯದ ತನಾಸಿ ಕೊಕಿನಾಕಿಸ್ ಅವರನ್ನು 4-6, 6-1, 6-4, 6-4 ಅಂತರದಿಂದ ಹಿಮ್ಮೆಟ್ಟಿಸಿದರು. ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಜರ್ಮನಿಯ 9ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ ಅವರಿಗೆ 6-4, 3-6, 6-4, 6-2ರಿಂದ ಆಘಾತವಿಕ್ಕಿದರು. ವನಿತಾ ಸಿಂಗಲ್ಸ್‌ನಲ್ಲಿ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ, ಜೆಕ್ ಆಟಗಾರ್ತಿ ಬಬೊìರಾ ಸ್ಟ್ರೈಕೋವಾ, ಫ್ರಾನ್ಸಿನ ಕ್ಯಾರೋಲಿನ್ ಗಾರ್ಸಿಯಾ ಮೊದಲ ಸುತ್ತಿನಲ್ಲಿ ಗೆಲುವಿನ ರುಚಿ ಅನುಭವಿಸಿದ್ದಾರೆ.