ಶಿಕಾರಿಪುರ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ- ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ- ಬಲಿದಾನ ಮಾಡಿದವರ ಸ್ಮರಣೆ ಮಾಡಬೇಕು ಎಂದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯುವಶಕ್ತಿ ಸದೃಢ ದೇಶ ನಿರ್ಮಾಣಕ್ಕೆ ಮುಂದಾಗಬೇಕು. ಸಂಸದನಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹಕಾರದಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ರೈಲ್ವೆ ಮಾರ್ಗದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ.
ಈ ರೈಲ್ವೇ ಮಾರ್ಗದಿಂದ ಮಲೆನಾಡಿನಿಂದ ಬಯಲುಸೀಮೆ ಹಾಗೂ ಇತರೆ ರಾಜ್ಯಗಳಿಗೆ ಸಂಪರ್ಕ ದೊರೆಯಲಿದೆ. ಜಿಲ್ಲೆ ಹಾಗೂ ತಾಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಯಡಿಯೂರಪ್ಪ ಆದ್ಯತೆ ನೀಡಿದ್ದಾರೆ ಎಂದರು. ತಹಶೀಲ್ದಾರ್ ಎಂ.ಪಿ. ಕವಿರಾಜ್ ಧ್ವಜಾರೋಹಣ ನೆರವೇರಿಸಿದರು.
ಪುರಸಭೆ ಅಧ್ಯಕ್ಷೆ ರೇಖಾಬಾಯಿಸಿಂಗ್, ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಹಾಲಿಂಗಪ್ಪ, ಮುಖ್ಯಾ ಧಿಕಾರಿ ಭರತ್, ಸದಸ್ಯರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ತಾಪಂ ಇಒ ಪರಮೇಶ್, ಕರ್ನಾಟಕ ಮೂಲ ಸೌಕರ್ಯಭಿವೃದ್ಧಿ ನಿಗಮ ನಿರ್ದೇಶಕಿ ಸಿ.ಎನ್. ಗಾಯತ್ರಿದೇವಿ, ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿರ್ದೇಶಕ ವಿಜಯಭಾಸ್ಕರ್, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ವೃತ್ತ ನಿರೀಕ್ಷಕ ಲಕ್ಷ್ಮಣ್ ಇದ್ದರು.