ಚೆನ್ನೈ: ನಟ ವಿಜಯ್ ಅಭಿನಯದ ಮೆರ್ಸಲ್ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ನೀಡಿದ್ದ ಸರ್ಟಿಫಿಕೇಟ್ ಅನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಶುಕ್ರವಾರ ವಾಕ್ ಸ್ವಾತಂತ್ರ್ಯ ಎಲ್ಲರ ಹಕ್ಕು ಎಂಬುದಾಗಿ ತಿಳಿಸಿದ್ದು, ಇದೊಂದು ಸಿನಿಮಾ, ನಿಜ ಜೀವನ ಅಲ್ಲ ಎಂದು ಹೇಳಿದೆ.
ನಟ ವಿಜಯ್ ಅಭಿನಯದ ಮೆರ್ಸಲ್ ಸಿನಿಮಾದಲ್ಲಿ ಭಾರತ ವಿರುದ್ಧ ತಪ್ಪು ಮಾಹಿತಿ ನೀಡಲಾಗಿದೆ ಮತ್ತು ಸುಳ್ಳು ಡೈಲಾಗ್ ನಿಂದ ಕೂಡಿದೆ. ಅಷ್ಟೇ ಅಲ್ಲ ಭಾರತದ ನೂತನ ತೆರಿಗೆ(ಜಿಎಸ್ ಟಿ) ನೀತಿ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಸಿನಿಮಾಕ್ಕೆ ನೀಡಿರುವ ಸೆನ್ಸಾರ್ ಸರ್ಟಿಫಿಕೇಟ್ ಅನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.
ಅಕ್ಟೋಬರ್ 18ರಂದು ತೆರೆಕಂಡಿರುವ ಮೆರ್ಸಲ್ ಸಿನಿಮಾ ಪ್ರದರ್ಶನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು.
ಮೆರ್ಸಲ್ ಸಿನಿಮಾದಲ್ಲಿ ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ತಮಿಳುನಾಡು ಬಿಜೆಪಿ ಘಟಕ ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ನಮಗೆ ದೇಗುಲಗಳು ಬೇಕಾಗಿಲ್ಲ, ನಮಗೆ ಆಸ್ಪತ್ರೆಗಳು ಬೇಕು’ ಎಂಬರ್ಥ ಬರುವ ಡೈಲಾಗ್ ನಿಂದಾಗಿ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಧುರೈ ಪೊಲೀಸರ ಬಳಿ ದೂರು ದಾಖಲಿಸಿದ್ದರು.
ಏತನ್ಮಧ್ಯೆ ಮೆರ್ಸಲ್ ಸಿನಿಮಾಕ್ಕೆ ನಟರಾದ ಕಮಲ್ ಹಾಸನ್, ರಜನಿಕಾಂತ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಬೆಂಬಲ ವ್ಯಕ್ತಪಡಿಸಿ, ಮೆರ್ಸಲ್ ಸೆನ್ಸಾರ್ ಸರ್ಟಿಫಿಕೇಟ್ ರದ್ದುಪಡಿಸಬೇಕೆಂಬ ಬಿಜೆಪಿ ಬೇಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.