Advertisement

ಕಾಶ್ಮೀರಿಗರ ಸಂಭ್ರಮಕ್ಕೆ ಸ್ವಾತಂತ್ರ್ಯದ ಮೆರುಗು

01:49 AM Aug 15, 2019 | Team Udayavani |

ಸಂವಿಧಾನದ 370ನೇ ವಿಧಿಯನ್ವಯ ಜಾರಿಯಲ್ಲಿದ್ದ ವಿಶೇಷ ಸ್ಥಾನಮಾನದಿಂದಾಗಿ ಇತರೆ ರಾಜ್ಯಗಳ ಮಾದರಿಯ ಸೌಲಭ್ಯಗಳನ್ನು ಪಡೆಯದೇ, ಅಭಿವೃದ್ಧಿಯಿಂದ ವಂಚಿತವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ಇಂದಿನ ಸ್ವಾತಂತ್ರ್ಯೋತ್ಸವವು ಹೊಸ ಹುರುಪಿನ ಸಂಭ್ರಮವನ್ನು ನೀಡಿದೆ. ವಿಶೇಷ ಸ್ಥಾನಮಾನ ರದ್ದಾಗಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲ್ಪಟ್ಟ ಬಳಿಕ ಕಣಿವೆ ರಾಜ್ಯವು ಮೊದಲ ಸ್ವಾತಂತ್ರ್ಯದಿನವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ.

Advertisement

ಶ್ರೀನಗರ/ ಹೊಸದಿಲ್ಲಿ: ಜಮ್ಮು, ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಣಿವೆ ರಾಜ್ಯವು ಗುರುವಾರ ಮೊದಲ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗಲಿದೆ.

ರಾಜ್ಯಾದ್ಯಂತ ಶಾಂತಿಯುತವಾಗಿ ಸ್ವಾತಂತ್ರ್ಯ ದಿನ ಆಚರಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕನ್ಸಲ್ ತಿಳಿಸಿದ್ದು, ಎಲ್ಲರೂ ಅತ್ಯಂತ ಅದ್ದೂರಿ ಹಾಗೂ ಸಂಭ್ರಮದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕು ಎಂದು ನಾಗರಿಕರಿಗೆ ಕರೆ ನೀಡಿದ್ದಾರೆ.

ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಭದ್ರತೆಯ ದೃಷ್ಟಿಯಿಂದ ಗುರುವಾರ ಕೆಲವು ನಿರ್ಬಂಧಗಳನ್ನು ಮುಂದುವರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಗುರುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶ್ರೀನಗರಕ್ಕೆ ಭೇಟಿ ನೀಡಿ, ಲಾಲ್ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇವರ ಹೇಳಿಕೆ ಮಹತ್ವ ಪಡೆದಿದೆ.

ಜಮ್ಮು ನಿರ್ಬಂಧ ತೆರವು: ಈ ನಡುವೆ, ಜಮ್ಮುವಿನಲ್ಲಿ ಎಲ್ಲ ರೀತಿಯ ನಿರ್ಬಂಧಗಳನ್ನೂ ತೆರವು ಮಾಡಲಾಗಿದ್ದು, ಕಾಶ್ಮೀರದ ಕೆಲವು ಪ್ರದೇಶಗಳನ್ನು ಇನ್ನೂ ಕೆಲವು ದಿನಗಳ ಕಾಲ ನಿರ್ಬಂಧ ಮುಂದುವರಿಯಲಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮುನೀರ್‌ ಖಾನ್‌ ಹೇಳಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀನಗರ ಮತ್ತು ಇತರೆ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕೆಲವೊಂದು ಪ್ರತಿಭಟನೆಗಳು ನಡೆದಿವೆ. ಪ್ರತಿಭಟನಕಾರರನ್ನು ಚದುರಿಸುವಾಗ ಕೆಲವರಿಗೆ ಸಣ್ಣಪುಟ್ಟ ಪೆಲ್ಲೆಟ್ ಗಾಯಗಳಾಗಿವೆ. ಯಾವೊಬ್ಬ ನಾಗರಿಕನೂ ಸಾಯಬಾರದು ಎಂಬುದೇ ನಮ್ಮ ಉದ್ದೇಶ ಎಂದೂ ಖಾನ್‌ ತಿಳಿಸಿದ್ದಾರೆ. ಇದೇ ವೇಳೆ, ಎಷ್ಟು ಸಂಖ್ಯೆಯ ಜನರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

ಗಡಿಯಲ್ಲಿ ಬಿಗಿಭದ್ರತೆ: ಸ್ವಾತಂತ್ರ್ಯದಿನದ ಹಿನ್ನೆಲೆಯಲ್ಲಿ ಭಾರತ-ಪಾಕ್‌ ಗಡಿಯಲ್ಲಿ ಸೇನೆ ಮತ್ತು ಬಿಎಸ್‌ಎಫ್ ಕಟ್ಟೆಚ್ಚರ ವಹಿಸಿದೆ. ಜಮ್ಮು ಭಾಗದಲ್ಲೂ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಭದ್ರತಾ ಪಡೆಗಳು ಪ್ರತಿಯೊಬ್ಬರನ್ನೂ ನಿಗಾ ವಹಿಸಿ ತಪಾಸಣೆ ನಡೆಸುತ್ತಿದೆ.

ಗೋಡ್ಸೆ ಪುತ್ರ ನನ್ನನ್ನು ಕೊಲ್ಲಬಹುದು: ವಿಶೇಷ ಸ್ಥಾನಮಾನ ರದ್ದು ಕುರಿತು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಒವೈಸಿ, ಸರಕಾರವು ಐತಿಹಾಸಿಕ ತಪ್ಪನ್ನು ಮಾಡಿದೆ ಎಂದಿದ್ದಾರೆ. ಜತೆಗೆ, ನಟ ರಜನಿಕಾಂತ್‌ ಅವರು ಮೋದಿ-ಶಾರನ್ನು ಕೃಷ್ಣ-ಅರ್ಜುನರಿಗೆ ಹೋಲಿ ಸಿದ್ದನ್ನು ಪ್ರಸ್ತಾವಿಸಿದ ಅವರು, ‘ಈ ಸನ್ನಿವೇಶದಲ್ಲಿ ಪಾಂಡವರು ಮತ್ತು ಕೌರವರು ಯಾರು? ನೀವು ದೇಶದಲ್ಲಿ ಮತ್ತೂಂದು ಮಹಾಭಾರತ ನಡೆಯ ಬೇಕೆಂದು ಬಯಸುತ್ತಿ ದ್ದೀರಾ’ ಎಂದು ಪ್ರಶ್ನಿಸಿ ದ್ದಾರೆ. ಅಷ್ಟೇ ಅಲ್ಲ, ಮಹಾತ್ಮ ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಯ ಪುತ್ರ ಇನ್ನೂ ನಮ್ಮ ದೇಶದಲ್ಲೇ ಇದ್ದಾನೆ. ಆತ ಒಂದಲ್ಲ ಒಂದು ದಿನ ನನ್ನನ್ನೂ ಕೊಲ್ಲ ಬಹುದು ಎಂದಿದ್ದಾರೆ ಒವೈಸಿ.

ಕಾಶ್ಮೀರದಲ್ಲಿ ಮಲಿಕ್‌ರಿಂದ ಧ್ವಜಾರೋಹಣ

ಜಮ್ಮು ಕಾಶ್ಮೀರದ ಶ್ರೀನಗರದ ಶೇರ್‌-ಎ-ಕಾಶ್ಮೀರ್‌ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ ಜರುಗಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಜಮ್ಮು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕನ್ಸಲ್ ತಿಳಿಸಿದ್ದಾರೆ. ಜಮ್ಮುವಿನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದ ಉಸ್ತುವಾರಿಯನ್ನು ರಾಜ್ಯಪಾಲರ ಸಲಹೆಗಾರರು ನಿರ್ವಹಿಸಲಿದ್ದಾರೆ. ಇನ್ನು, ಜಮ್ಮು ಕಾಶ್ಮೀರದ ಎಲ್ಲ ಪ್ರಾಂತೀಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲೆಡೆಯೂ ಕಾರ್ಯ ಕ್ರಮಗಳ ಪೂರ್ವಭಾವಿ ಪ್ರದರ್ಶನವನ್ನು ಪರೀಕ್ಷಾರ್ಥವಾಗಿ ನಡೆಸಲಾಗಿದೆ ಎಂದಿದ್ದಾರೆ.

ಶಾ ಫೈಜಲ್ಗೆ ಗೃಹಬಂಧನ?

ಇತ್ತೀಚೆಗಷ್ಟೇ ರಾಜಕೀಯ ಸಂಘಟನೆಯೊಂದನ್ನು ಹುಟ್ಟುಹಾಕಿದ್ದ ಜಮ್ಮು-ಕಾಶ್ಮೀರದ ಮಾಜಿ ಐಎಎಸ್‌ ಅಧಿಕಾರಿ ಶಾ ಫೈಜಲ್ರನ್ನು ಬುಧವಾರ ದೆಹಲಿ ವಿಮಾನನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಸ್ತಾಂಬುಲ್ಗೆ ಹೊರಟಿದ್ದ ಅವರನ್ನು ವಶಕ್ಕೆ ಪಡೆದ ಪೊಲೀಸರು, ಕಾಶ್ಮೀರಕ್ಕೆ ವಾಪಸ್‌ ಕಳುಹಿಸಿದ್ದಾರೆ. ಸಾರ್ವಜನಿಕ ಸುರಕ್ಷತೆ ಕಾಯ್ದೆ(ಪಿಎಸ್‌ಎ)ಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶ್ರೀನಗರಕ್ಕೆ ಬಂದಿಳಿಯುತ್ತಿದ್ದಂತೆ ಮತ್ತೆ ಅವರನ್ನು ಪಿಎಸ್‌ಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಗೃಹಬಂಧನದಲ್ಲಿ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಾಲಿವುಡ್‌ ಗೀತನಮನ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ರೂಪದ ವೀಡಿಯೋ ಹಾಡಿನಲ್ಲಿ ಬಾಲಿವುಡ್‌ನ‌ ಹಿರಿಯ ನಟ ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌, ಅಮೀರ್‌ ಖಾನ್‌, ಐಶ್ವರ್ಯಾ ರೈ, ರಣಬೀರ್‌ ಕಪೂರ್‌ ಮುಂತಾದವರು ಅಭಿನಯಿಸಿದ್ದಾರೆ. ‘ತೂ ದೇಶ್‌ ಮೇರಾ’ ಎಂದು ಶುರುವಾಗುವ ಈ ಹಿಂದಿ ಹಾಡನ್ನು ಸ್ವಾತಂತ್ರ್ಯೋತ್ಸವ ಸಂದರ್ಭಕ್ಕಾಗಿಯೇ ರಚಿಸಲಾಗಿದ್ದು, ಗಾಯಕರಾದ ಜಾವೇದ್‌ ಅಲಿ, ಜುಬಿನ್‌ ನೌಟಿಯಾಲ್, ಶಬಾಬ್‌ ಸಬ್ರಿ, ಕಬೀರ್‌ ಸಿಂಗ್‌ ಧ್ವನಿ ನೀಡಿದ್ದಾರೆ.

ಯೋಧರ ಮನೆಯವರ ತಲ್ಲಣಗಳು ಪುಸ್ತಕದಲ್ಲಿ

ಯೋಧರು ಹಾಗೂ ಸೇನಾಧಿಕಾರಿಗಳ ಮನೆಗಳ ಸದಸ್ಯರ ಸುಖ-ದುಃಖಗಳು, ಅನುಭವಿಸುವ ಮಾನಸಿಕ ಒತ್ತಡಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಮೂರು ಪುಸ್ತಕಗಳ ಸರಣಿ ಬುಧವಾರ ಬಿಡುಗಡೆಯಾಗಿದೆ. ‘ಅವರ್‌ ಅಮೇಜಿಂಗ್‌ ಆಮ್ರ್ಡ್ ಫೋರ್ಸಸ್‌’ ಎಂಬ ಪುಸ್ತಕ ಸರಣಿಯಡಿ, ‘ಮೈ ಮದರ್‌ ಈಸ್‌ ಇನ್‌ ದ ಇಂಡಿಯನ್‌ ಏರ್‌ಫೋರ್ಸ್‌’, ‘ಮೈ ಫಾದರ್‌ ಈಸ್‌ ಇನ್‌ ದ ಇಂಡಿಯನ್‌ ಆರ್ಮಿ’ ಹಾಗೂ ‘ಮೈ ಸಿಸ್ಟರ್‌ ಈಸ್‌ ಇನ್‌ ದ ಇಂಡಿಯನ್‌ ನೇವಿ’ ಎಂಬ ಮೂರು ಪುಸ್ತಕಗಳನ್ನು ಪಫಿನ್‌ ಸಂಸ್ಥೆ ಹೊರತಂದಿದೆ. ಯೋಧರ ಮನೆಯ ಸದಸ್ಯರ ನೋವು, ಸಂಭ್ರಮಗಳನ್ನು ಮಕ್ಕಳು ನೋಡುವ ರೀತಿಯಲ್ಲಿ ವಿವರಿಸಲಾಗಿದೆ ಎಂದು ಈ ಪುಸ್ತಕ ಸರಣಿಯ ಲೇಖಕಿಯರಾದ ಆರತಿ ಮುತ್ತಣ್ಣ ಸಿಂಗ್‌ ಹಾಗೂ ಮಮತಾ ನೈನಿ ತಿಳಿಸಿದ್ದಾರೆ.

ಮೀಕಾ ಸಿಂಗ್‌ಗೆ ಬ್ಯಾನ್‌

ಭಾರತ ಮತ್ತು ಪಾಕ್‌ ನಡುವೆ ಬಿಗು ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಪಾಕಿಸ್ಥಾನದ ಕರಾಚಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದ ಗಾಯಕ ಮೀಕಾ ಸಿಂಗ್‌ಗೆ ನಿಷೇಧ ಹೇರಿ ಅಖೀಲ ಭಾರತ ಸಿನಿ ನೌಕರರ ಸಂಘ(ಎಐಸಿಡಬ್ಲ್ಯುಎ) ಆದೇಶ ಹೊರಡಿಸಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಗಳು, ಸಂಗೀತ ಕಂಪೆನಿಗಳು, ಆನ್‌ಲೈನ್‌ ಮ್ಯೂಸಿಕ್‌ ಕಂಟೆಂಟ್ ಪ್ರೊವೈಡರ್‌ಗಳು ಇನ್ನು ಮುಂದೆ ಮೀಕಾ ಸಿಂಗ್‌ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರುವ ಮೂಲಕ ಅವರಿಗೆ ನಿಷೇಧ ಹೇರಲು ನಿರ್ಧರಿಸಿವೆ. ಯಾರಾದರೂ ಮೀಕಾ ಜತೆ ಕೆಲಸ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡಿದೆ.

ಆಡ್ವಾಣಿ ಮನೆಯಲ್ಲಿ ಧ್ವಜಾರೋಹಣವಿಲ್ಲ
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ವೈರಾಣು ಜ್ವರದಿಂದ ಬಳಲು ತ್ತಿರುವ ಕಾರಣ ಅವರ ನಿವಾಸದಲ್ಲಿ ಈ ಬಾರಿ ಧ್ವಜಾರೋಹಣ ನೆರವೇರುತ್ತಿಲ್ಲ. ಈ ಕುರಿತು ಅವರ ಕಚೇರಿ ಪ್ರಕಟನೆ ಹೊರಡಿಸಿದೆ. 5 ದಿನಗಳಿಂದ ಆಡ್ವಾಣಿ ಅವರು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಧ್ವಜಾರೋಹಣ ಹಮ್ಮಿ ಕೊಳ್ಳುತ್ತಿಲ್ಲ ಎಂದು ತಿಳಿಸಲಾಗಿದೆ. ಪ್ರತಿ ವರ್ಷವೂ ಆಡ್ವಾಣಿ ನಿವಾಸದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾ ರೋಹಣ ನಡೆಸಲಾಗುತ್ತಿತ್ತು.
Advertisement

Udayavani is now on Telegram. Click here to join our channel and stay updated with the latest news.

Next