Advertisement
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ದಶಕಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಮತ್ತು ನಗದು ಹಣ ನೀಡುವುದು ಸೇರಿದಂತೆ ಇನ್ನಿತರ ಸಮಸ್ಯೆ ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ಅಧಿಕಾರಿಗೆ ಲಿಖೀತ ಪತ್ರ ನೀಡುವುದಾಗಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದರ ತಿಳಿಸಿದ್ದಾರೆ.
Related Articles
Advertisement
ಕಾಟಾಚಾರದ ಸಭೆ ಬೇಡ: ಪಟ್ಟಣದ ತರಕಾರಿ ಮಾರುಕಟ್ಟೆಗೆ ನಿತ್ಯ ತರಕಾರಿ ತರುವ ತಾಲೂಕಿನ ಯನಗುಂದಾ, ತೇಗಂಪೂರ, ಮರಪಳ್ಳಿ, ಸುಂಧಾಳ, ಖಾಂಶೆಪೂರ ಗ್ರಾಮದ ರೈತರು, ಅಧಿಕಾರಿಗಳು ಸೋಮವಾರ ಸಭೆ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಆದರೆ ಸಭೆ ಹಾಗೂ ಅಧಿಕಾರಿಗಳು ನೀಡುವ ಭರವಸೆಗಳು ಕೇವಲ ಒಂದು ದಿನಕ್ಕೆ ಸಿಮೀತವಾಗದೆ ನಿರಂತರವಾಗಿ ಅವು ಕಾರ್ಯರೂಪಕ್ಕೆ ಬರಬೇಕು. ನಾವು ಬೆಳೆಸಿ ಮಾರುಕಟ್ಟೆಗೆ ತಂದ ತರಕಾರಿಗೆ ಅಂದೇ ನಮ್ಮ ಹಣ ನೀಡುವಂತೆ ಮಾಡಿ ನಮ್ಮ ಆರ್ಥಿಕ ಸಂಕಟ ದೂರ ಮಾಡಬೇಕು. ಇಲ್ಲವಾದಲ್ಲಿ ನಮ್ಮ ರೈತರು, ವ್ಯಾಪಾರಿಗಳು ಹೇಳಿದಂತೆ ಕೇಳಿಕೊಂಡು ವಾರಪೂರ್ತಿ ಅವರ ಅಂಗಡಿಗೆ ಅಲೆಯಬೇಕಾಗುತ್ತದೆ ಎನ್ನುವುದು ರೈತರ ಮಾತು.
ನಾವು ಬೆಳೆದ ತರಕಾರಿಗೆ ನಮ್ಮ ತಾಲೂಕಿನಲ್ಲೇ ಉತ್ತಮ ಬೆಲೆ ಸಿಗುತ್ತಿಲ್ಲ. ನೆರೆ ರಾಜ್ಯದಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಹೋಗಿ ಬರುವುದರಲ್ಲಿ ಸಾಕಾಗುತ್ತಿದೆ. ಇನ್ನೂ ಸಣ್ಣ ರೈತರು ತಮ್ಮಲ್ಲಿರುವ ತರಕಾರಿಗಳನ್ನು ತೆಗೆದುಕೊಂಡು ನೆರೆ ರಾಜ್ಯಕ್ಕೆ ಹೋದರೂ ಹಾನಿಯಾಗುತ್ತಿದೆ. ವರ್ಷಪೂರ್ತಿ ಹೊಲದಲ್ಲಿ ಕಷ್ಟಪಟ್ಟು ಬೆಳೆಸಿದ ತರಕಾರಿಯನ್ನು ಮಾರುಕಟ್ಟೆಗೆ ತಂದು ದಲ್ಲಾಳಿಗಳು ಹೇಳಿದ ಬೆಲೆಗೆ ನೀಡಿ ವಾರಪೂರ್ತಿ ಅಲೆದು, ನಕಲಿ ಬಿಲ್ ಪಡೆದುಕೊಂಡು ಹೋಗುವ ಸ್ಥಿತಿ ಗಡಿ ನಮ್ಮದಾಗಿದೆ ಎಂಬುದು ರೈತರ ಅಳಲು.
ಲಿಂಗಾಯತ ಸಮಾಜದಿಂದ ಹೋರಾಟ: ಪಟ್ಟಣದ ತರಕಾರಿ ವ್ಯಾಪಾರಿಗಳು ಹಲವು ದಶಕಗಳಿಂದ ರೈತರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳುವ ತನಕ ಹಾಗೂ ತಪ್ಪಿತಸ್ಥರನ್ನು ಅಧಿಕಾರಿಗಳು ದಂಡಿಸುವ ತನಕ ರೈತರ ಪರವಾಗಿ ಲಿಂಗಾಯತ ಸಮಾಜದಿಂದ ಹೋರಾಟ ಮಾಡಲಾಗುತ್ತದೆ. ಅಧಿಕಾರಿಗಳು ಕೂಡಲೆ ಜಾಗೃತರಾಗಬೇಕು. ಇಲ್ಲವಾದಲ್ಲಿ ತಮ್ಮ ಕುರ್ಚಿ ಬಿಟ್ಟು ಹೋಗಲಿ ಎಂದು ಲಿಂಗಾಯತ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
•ರವೀಂದ್ರ ಮುಕ್ತೇದಾರ