ಹೊಸದಿಲ್ಲಿ : ದಿಲ್ಲಿ ವಿಶ್ವ ವಿದ್ಯಾಲಯದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳ ವಿರುದ್ಧ ಪ್ರತಿಭಟನೆ ಸಾಗುತ್ತಿರುವಂತೆಯೇ ಇದೀಗ ಜವಾಹರ್‌ಲಾಲ್ ಯುನಿವರ್ಸಿಟಿಯ ಕ್ಯಾಂಪಸ್‌ನಲ್ಲಿ “ಆಜಾದಿ ಫಾರ್ ಕಾಶ್ಮೀರ್’ ಗೆ ಕರೆ ನೀಡುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಸಮಾಜ ವಿಜ್ಞಾನ ವಿದ್ಯಾಲಯದ ಗೋಡೆಯ ಮೇಲೆ “ಆಜಾದಿ ಫಾರ್ ಕಾಶ್ಮೀರ್’ ಪೋಸ್ಟರ್‌ಗಳು ಕಾಣಿಸಿಕೊಂಡಿರುವುದನ್ನು ಗಮನಿಸಿದ ಕೆಲವು ವಿದ್ಯಾರ್ಥಿಗಳು ಒಡನೆಯೇ ಈ ವಿಷಯವನ್ನು ವಿಶ್ವ ವಿದ್ಯಾಲಯದ ಆಡಳಿತ ವರ್ಗದ ಗಮನಕ್ಕೆ ತಂದರು.
ಎಡ ಪಂಥೀಯ ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಡಿಎಸ್‌ಯು) ಹೆಸರಿನಲ್ಲಿ ಕಾಣಿಸಿಕೊಂಡಿರುವ ಈ ಪೋಸ್ಟರ್ ನಲ್ಲಿ “ಫ್ರೀಡಂ ಫಾರ್ ಕಾಶ್ಮೀರ್ ! ಫ್ರೀ ಪ್ಯಾಲೆಸ್ತೀನ್ ! ರೈಟ್ ಟು ಸೆಲ್ಫ್ ಡಿಟರ್ಮಿನೇಶನ್ ಲಾಂಗ್ ಲಿವ್’ ಎಂಬ ಘೋಷಣೆ ಕಂಡು ಬಂದಿದೆ.
ಜೆಎನ್‌ಯು ಆಡಳಿತ ವರ್ಗದವರು ಒಡನೆಯೇ ಈ ಪೋಸ್ಟರ್ ತೆಗೆಯುವಂತೆ ವಿವಿ ಭದ್ರತಾ ದಳಕ್ಕೆ ಆದೇಶ ನೀಡಿದರು.
“ಈ ಬಗೆಯ ಅನಗತ್ಯ ವಿವಾದಗಳಲ್ಲಿ ವಿಶ್ವವಿದ್ಯಾಲಯವು ತನ್ನ ಅಮೂಲ್ಯ ಸಮಯವನ್ನು ಈಗಾಗಲೇ ಬಹಳಷ್ಟಾಗಿ ಕಳೆದುಕೊಂಡಿದೆ; ಯಾವುದೋ ಸಣ್ಣ ಗುಂಪು ಈ ಬಗೆಯ ಕೀಟಲೆ, ವಿವಾದನ್ನು ಸೃಷ್ಟಿಸಲು ಯತ್ನಿಸುತ್ತಿರುವುದು ದುರದೃಷ್ಟಕರವಾಗಿದೆ; ಇದೀಗ ಈ ವಿವಾದಾತ್ಮಕ ಪೋಸ್ಟರ್ ತೆಗೆಯುವಂತೆ ಭದ್ರತಾ ದಳಕ್ಕೆ ಸೂಚಿಸಿದ್ದೇವೆಉ’ ಎಂದು ವಿಶ್ವ ವಿದ್ಯಾಲಯದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.