ಬೆಂಗಳೂರು : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ,ಹಿರಿಯ ಗಾಂಧಿವಾದಿ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಅವರು ಗುರುವಾರ ಬೆಳಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿಧವಶ ರಾಗಿದ್ದಾರೆ.
93 ವರ್ಷ ಪ್ರಾಯದ ಅವರು ಕಳೆದ ಕೆಲದಿನಗಳಿಂದ ತೀವ್ರ ಆನಾರೋಗ್ಯಕ್ಕೆ ತುತ್ತಾಗಿ ತೀವ್ರವಾಗಿ ಬಳಲಿದ್ದರು.
ಶ್ರೀನಿವಾಸಯ್ಯ ಅವರು ಓರ್ವ ಪುತ್ರಿ ಮತ್ತು ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.
ಇಂದು ಬೆಳಗ್ಗೆ 10.30 ರಿಂದ ಕರ್ನಾಟಕ ಗಾಂಧಿ ಭವನದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ.
ಸಾವಿರಾರು ಶಾಲಾ ಕಾಲೇಜುಗಳಲ್ಲಿ ಗಾಂಧಿ ಕುರಿತಾಗಿನ ಪ್ರವಚನ ನೀಡಿ ಯುವ ಮನಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. 200ಕ್ಕೂ ಹೆಚ್ಚು ಗಾಂಧಿ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಶ್ರಮವಹಿಸಿದ್ದರು. ಸಹಕಾರ ತತ್ವದ ಮೇಲೆ ಸಹಕಾರಿ ಬ್ಯಾಂಕ್‌ಗಳನ್ನು ಪ್ರಾರಂಭಿಸಿದ್ದರು. ಗಾಂಧೀಜಿಯವರ ಕುರಿತು ಹಲವಾರು ಕೃತಿ ರಚಿಸಿ, ಗಾಂಧಿಜೀಯವರ ಚಿಂತನೆಯನ್ನು ಯುವ ಪೀಳಿಗೆ ತಪಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದರು. ನಾ ಕಂಡ ಜರ್ಮನಿ’ ಎಂಬ ಪ್ರವಾಸಕಥನ ಪುಸ್ತಕ ಅಪಾರ ಮೆಚ್ಚಗೆಗೆ ಪಾತ್ರವಾಗಿದೆ.
ಶ್ರೀನಿವಾಸಯ್ಯ ನಿಧನಕ್ಕೆ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.