Advertisement

“ಇನ್‌ಸ್ಪೆಕ್ಟರ್‌ ಕರೆಯುತ್ತಿದ್ದಾರೆ’ಎಂದು ಕರೆದು ಜೈಲಿಗೆ ಅಟ್ಟಿದರು: ಶ್ರೀನಿವಾಸ ಕಾಮತ್‌

09:36 AM Aug 15, 2022 | Team Udayavani |

ಕಾರ್ಕಳ: ಆಗ ನಾನು ಎಸೆಸೆಲ್ಸಿಯಲ್ಲಿದ್ದೆ. ಎಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ಜೋರಾಗಿತ್ತು. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ ಭಾಗವಾಗಿ ಕಾರ್ಕಳದ ಅನಂತಶಯನ ಬಳಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ನಾನೂ ಭಾಗವಹಿಸಲು ತೆರಳಿದ್ದೆ.

Advertisement

ನಾನಲ್ಲಿಗೆ ತಲುಪುವಷ್ಟರಲ್ಲಿ ಪೊಲೀಸರು ಕೆಲವರಿಗೆ ಲಾಠಿಯಿಂದ ಹೊಡೆದು ಜೀಪಿನಲ್ಲಿ ತುರುಕಿ ಕರೆದೊಯ್ದಿದ್ದರು. ನಾನು ಮೆರವಣಿಗೆಯಲ್ಲಿ ಸೇರಿಕೊಂಡು ಘೋಷಣೆ ಕೂಗಿದೆ. ಕೋರ್ಟ್‌, ಬೋರ್ಡ್‌ ಹೈಸ್ಕೂಲ್‌ ಬಳಿ ಮೆರವಣಿಗೆಯಲ್ಲಿ ಸಾಗಿ ಬಳಿಕ ಮನೆಗೆ ವಾಪಸಾದೆ. ಮೂರು ದಿನ ಕಳೆದು ಕಾನ್‌ಸ್ಟೆಬಲ್‌ ಒಬ್ಬ ಮನೆಗೆ ಬಂದು “ಇನ್‌ಸ್ಪೆಕ್ಟರ್‌ ನಿನ್ನನ್ನು ಕರೆಯುತ್ತಿದ್ದಾರೆ ಬಾ’ ಎಂದು ಕರೆದೊಯ್ದು, ನನ್ನನ್ನು ಜೀಪಿಗೆ ಹತ್ತಿಸಿ ಜೈಲಿಗೆ ಕಳುಹಿಸಿದರು…

1942ರ ಆಗಸ್ಟ್‌ನಿಂದ 1943ರ ಜನವರಿಯ ವರೆಗೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, 98ರ ವಯಸ್ಸಿನ ಕಾರ್ಕಳದ ಶ್ರೀನಿವಾಸ ಕಾಮತ್‌ ಅಂದಿನ ಕ್ವಿಟ್‌ ಇಂಡಿಯಾ ಚಳವಳಿಯ ತಮ್ಮ ಅನುಭವಗಳನ್ನು ಬಿಚ್ಚಿಟ್ಟದ್ದು ಹೀಗೆ.

ಕಾರ್ಕಳ ಪಾಂಡುರಂಗ ಕಾಮತ್‌  - ಶಾರದಾ ದಂಪತಿಯ 2ನೇ ಪುತ್ರರಾಗಿ 1924ರಲ್ಲಿ ಜನಿ ಸಿದ ಶ್ರೀನಿವಾಸ ಕಾಮತ್‌ ಪ್ರೌಢ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ತೀವ್ರತೆಯಿಂದ ಕೂಡಿತ್ತು. ಕಾರ್ಕಳದ ವೆಂಕಟೇಶ್‌ ಪ್ರಭು ಅವರ ನೇತೃತ್ವದಲ್ಲಿ ಹಲವು ಮುಖಂಡರು ಸೇರಿ ಕಾರ್ಕಳದಲ್ಲಿ ಚಳವಳಿ ನಡೆಸಿದ್ದರು.

“ಮೆರವಣಿಗೆಯಲ್ಲಿ ಭಾಗವಹಿಸಿ ದ್ದಕ್ಕೆ ನನ್ನನ್ನು ಬಂಧಿಸಿ ತಾಲೂಕು ಆಫೀಸಿಗೆ ಕರೆದೊಯ್ದು ಕೇಸ್‌ ಹಾಕಿ ಅಲ್ಲಿಂದ ಉಡುಪಿ ಜೈಲಿಗೆ ಕಳುಹಿಸಿಕೊಟ್ಟಿದ್ದರು. ಮೂರು ದಿನ ಅಲ್ಲಿರಿಸಿ ಬಳಿಕ ಕುಂದಾಪುರಕ್ಕೆ ಕರೆದೊಯ್ದಿದ್ದರು. ಕುಂದಾಪುರದ ನ್ಯಾಯಾಲಯದಲ್ಲಿ ಹಿಯರಿಂಗ್‌ ನಡೆದು 6 ತಿಂಗಳ ಜೈಲು ಶಿಕ್ಷೆಗೆ ನೇರ ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಅಟ್ಟಿದ್ದರು. ಬಳ್ಳಾರಿ ಜೈಲಿನಲ್ಲಿ ಡಿಸ್ಟ್ರಿಕ್ಟ್ ಪ್ರಸಿಡೆಂಟ್‌ ಆಫ್ ಕಾಂಗ್ರೆಸ್‌ ಎಂ.ಡಿ. ಅಧಿಕಾರಿ ಇದ್ದರು. ವೆಂಕಟೇಶ್‌ ಪ್ರಭು ಸಹಿತ ಎಲ್ಲರೂ ಅದೇ ಜೈಲಿನಲ್ಲಿದ್ದರು. ಪೊಲೀಸರು ಸಾಕಷ್ಟು ಲಾಠಿ ಏಟುಗಳನ್ನು ನೀಡಿದ್ದರು.

Advertisement

ಅವರೆಲ್ಲರ ತಲೆ, ದೇಹದಲ್ಲಿ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಅಲ್ಲೇ ಇರಿಸಿದ್ದರು. ಬಾಲಕನಾಗಿದ್ದ ನನ್ನನ್ನು ಐರೋಪ್ಯರಾದ ಜೈಲು ಅಧಿಕಾರಿಗಳು ಚೆನ್ನಾಗಿಯೇ ನಡೆಸಿಕೊಂಡಿದ್ದರು. ಬಂಧಿಖಾನೆಯಲ್ಲಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಎಲ್ಲವನ್ನು ಕೊಡುತ್ತಿದ್ದರು. ಏನೂ ಕೆಲಸ ಕೊಡುತ್ತಿರಲಿಲ್ಲ. 6 ತಿಂಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿ ಕಾರ್ಕಳಕ್ಕೆ ಬಂದೆ’ ಎನ್ನುತ್ತಾರೆ ಅವರು.

ಮಂಗಳೂರಿನಲ್ಲಿ ಕೆನರಾ ಸ್ಕೂಲಿಗೆ ಸೇರಿ, ಸೈಂಟ್‌ ಅಲೋಶಿಯಸ್‌ನಲ್ಲಿ ಬಿಎ ಪೂರ್ಣಗೊಳಿಸಿ, ಮರಳಿ ಕಾರ್ಕಳಕ್ಕೆ ಬಂದು ಶಿಕ್ಷಕರಾಗಿ ವೃತ್ತಿ ಆರಂಭಿಸಿ, 1970ರಲ್ಲಿ ನಿವೃತ್ತಿಯಾದರು.

ಶ್ರೀನಿವಾಸ ಕಾಮತ್‌- ರೋಹಿಣಿ ಕಾಮತ್‌ ಅವರಿಗೆ ಇಬ್ಬರು ಪುತ್ರಿಯರು. ಪುತ್ರಿ ಶೋಭಾ ಕಾಮತ್‌ ಬೆಂಗಳೂರಿನಲ್ಲಿ ವೈದ್ಯರಾಗಿದ್ದು, ಇನ್ನೋರ್ವ ಪುತ್ರಿ ಮಂಗಳೂರಿನಲ್ಲಿ ವಾಸವಿದ್ದಾರೆ.

ಕಲ್ಲಿನ ಬ್ಲಾಂಕಟ್‌ ಮೇಲೆ ಮಲಗಬೇಕಿತ್ತು
ಜೈಲಿನಲ್ಲಿರು ವಾಗ ಆಹಾರವೊಂದನ್ನು ಬಿಟ್ಟು ಬೇರೆ ಯಾವುದೂ ದೈಹಿಕವಾಗಿ ಅಷ್ಟು ತೊಂದರೆ ಕೊಟ್ಟಿರಲಿಲ್ಲ. ಕಲ್ಲಿನ ಬ್ಲಾಂಕೆಟ್‌ ಮೇಲೆ ಮಲಗಬೇಕಿತ್ತು. ನೀರು ಕಡಿಮೆ ಬಳಸಬೇಕಿತ್ತು. ಸ್ನಾನಕ್ಕೂ ನೀರಿನ ಕೊರತೆಯಿತ್ತು. ಕಾರ್ಕಳ ಭಾಗದ ಸುಮಾರು 25 ಮಂದಿ, ಮೂಡುಬಿದಿರೆ, ಉಡುಪಿ, ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕರು ಜೈಲಿನಲ್ಲಿದ್ದರು. ಅಣ್ಣ ಕೃಷ್ಣ ಕಾಮತ್‌, ನರಸಿಂಹ ಕಾಮತ್‌ ಕೂಡ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರು 3 ತಿಂಗಳ ಶಿಕ್ಷೆಯನ್ನು ಸ್ಥಳೀಯ ಜೈಲುಗಳಲ್ಲಿ ಅನುಭವಿಸಿದ್ದರು ಎಂದು ಕಾಮತ್‌ ಅವರು ಸ್ಮರಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next