Advertisement

ಸ್ವಾತಂತ್ರ್ಯ ಹೋರಾಟಗಾರ ಶಂಕ್ರೆಪ್ಪ ನಿಧನ

06:12 PM Mar 02, 2021 | Team Udayavani |

ಜೇವರ್ಗಿ: ಹೈದರಾಬಾದ-ಕರ್ನಾಟಕ ವಿಮೋಚನೆಗಾಗಿ ನಿಜಾಮರ ವಿರುದ್ಧ ಹೋರಾಟ ನಡೆಸಿದ್ದ ಪಟ್ಟಣದ ಪ್ರತಿಷ್ಠಿತ ಹುಗ್ಗಿ ಮನೆತನದ ಶಂಕ್ರೆಪ್ಪ ರಾಮಶೆಟ್ಟೆಪ್ಪ ಸಾಹು (92) ಸೋಮವಾರ ನಸುಕಿನ ಜಾವ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ.

Advertisement

1947ರಲ್ಲಿ ಭಾರತ ಅಧಿಕೃತವಾಗಿ ಸ್ವಾತಂತ್ರ್ಯಘೋಷಣೆ ಆಗಿದ್ದರೂ ಹೈದರಾಬಾದ ಕರ್ನಾಟಕ ಪ್ರದೇಶ ಮಾತ್ರ ಮತ್ತೇ ಒಂದು ವರ್ಷ 1948 ಸೆ.17ರ ವರೆಗೆ ಸ್ವಾತಂತ್ರ್ಯಕ್ಕಾಗಿ ಕಾಯಬೇಕಾಯಿತು. ಹೈದರಾಬಾದ ಪ್ರಾಂತ ನಿಜಾಮರ ಹಿಡಿತದಲ್ಲಿತ್ತು. ನಿಜಾಮರ ಕಪಿಮುಷ್ಠಿಯಲ್ಲಿ ಅನುಭವಿಸಿದ ಕಷ್ಟ ನೋವು ದೌರ್ಜನ್ಯ ಅಷ್ಟಿಷ್ಟಲ್ಲ. ಸ್ವಾತಂತ್ರ್ಯಕ್ಕಾಗಿ ನೂರಾರು ಜನ ಹೋರಾಟಗಾರರು ನಿಜಾಮರ ವಿರುದ್ಧ ದಂಗೆ ಎದ್ದು ಪ್ರಾಣ ತೆತ್ತಿದ್ದಾರೆ. ಅದರಲ್ಲಿ ಈ ಭಾಗದ ದಿಟ್ಟ ಹೋರಾಟಗಾರ ಸರದಾರ ಶರಣಗೌಡ ಇನಾಮದಾರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಶಂಕ್ರೆಪ್ಪ ಸಾಹು ಹುಗ್ಗಿ ಮುಂಚೂಣಿಯಲ್ಲಿದ್ದರು. ರಜಾಕರು ನಡೆಸುತ್ತಿದ್ದ
ಕೊಲೆ, ಲೂಟಿ, ದೌರ್ಜನ್ಯದ ವಿರುದ್ಧ ಸೆಟ್ಟೆದು ನಿಂತು ಪ್ರತಿಭಟಿಸುತ್ತಿದ್ದ ಹುಗ್ಗಿ ಅವರ ಅಗಲಿಕೆಯಿಂದ ಕಲ್ಯಾಣ ಕರ್ನಾಟಕ ಭಾಗದ ಹೋರಾಟದ ಹಿರಿಯ
ಕೊಂಡಿಯೊಂದು ಕಳಚಿದಂತಾಗಿದೆ.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ತಾತಾ ಶಂಕ್ರೆಪ್ಪ ಹುಗ್ಗಿ ಅವರು 5 ಜನ ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂಗಡಿ, ಮುಂಗಟ್ಟು ಬಂದ್‌: ಮೃತರ ಗೌರವಾರ್ಥ ಪಟ್ಟಣದ ವರ್ತಕರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಬಂದ್‌ ಮಾಡುವ ಮೂಲಕ ಗೌರವ ಸೂಚಿಸಿದರು.
ಗಣ್ಯರು ಭಾಗಿ: ಸ್ವಾತಂತ್ರ್ಯ ಹೋರಾಟಗಾರ ಶಂಕ್ರೆಪ್ಪ ಸಾಹು ಹುಗ್ಗಿ ಅಂತ್ಯಕ್ರಿಯೆಯಲ್ಲಿ ಅಬ್ಬೆತುಮಕೂರಿನ ಡಾ| ಗಂಗಾಧರ ಶಿವಾಚಾರ್ಯ ಸ್ವಾಮೀಜಿ,
ಸೊನ್ನದ ಡಾ| ಶಿವಾನಂದ ಸ್ವಾಮೀಜಿ, ಶಖಾಪುರದ ಡಾ| ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಆಂದೋಲಾದ
ಸಿದ್ಧಲಿಂಗ ಸ್ವಾಮೀಜಿ, ಯಲಗೋಡದ ಗುರುಲಿಂಗ ಸ್ವಾಮೀಜಿ, ಯಡ್ರಾಮಿಯ ಸಿದ್ಧಲಿಂಗ ಸ್ವಾಮೀಜಿ, ನೆಲೋಗಿಯ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ
ಡಾ| ಅಜಯಸಿಂಗ್‌, ಬಿ.ಜಿ. ಪಾಟೀಲ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ ನೆಲೋಗಿ, ರಮೇಶಬಾಬು ವಕೀಲ, ಹಳ್ಳೆಪ್ಪಚಾರ್ಯ ಜೋಶಿ, ಸೋಮಣ್ಣ ಕಲ್ಲಾ, ಶಿವರಾಜ ಪಾಟೀಲ ರದ್ದೇವಾಡಗಿ, ಗುರುಲಿಂಗಪ್ಪಗೌಡ ಮಾಲಿ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಜಯಕುಮಾರ ಪಾಟೀಲ ಕಲ್ಲಹಂಗರಗಿ,
ರಾಜಶೇಖರ ಸೀರಿ, ಬಸವರಾಜ ಪಾಟೀಲ ನರಿಬೋಳ, ಸುನೀಲ ಸಜ್ಜನ, ಬಾಪುಗೌಡ ಪಾಟೀಲ ಬಿರಾಳ, ಬಸವರಾಜ ಸಾಸಾಬಾಳ, ಸಿದ್ಧರಾಮ ಯಳಸಂಗಿ,
ಈರಣ್ಣಗೌಡ ಅವರಾದ, ಅನಿಲ ರಾಂಪೂರ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದರು.

ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ
ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ್‌ ಸಿದರಾಯ ಭೋಸಗಿ ಸ್ವಾತಂತ್ರ್ಯ ಹೋರಾಟಗಾರ ಶಂಕ್ರಪ್ಪ ಸಾಹು ಹುಗ್ಗಿ ಅವರ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ಅಂತಿಮ ದರ್ಶನ ಪಡೆದರು. ನಂತರ ಪೊಲೀಸ್‌ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದ ನಂತರ ವೀರಶೈವ ವಿಧಿ-ವಿಧಾನಗಳ ಪ್ರಕಾರ ಕಲಬುರ್ಗಿ ರಸ್ತೆಯಲ್ಲಿರುವ ಅವರ ಸ್ವಂತ ತೋಟದಲ್ಲಿ ಸಂಜೆ 4:30ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next