Advertisement

ಬೆಳ್ತಂಗಡಿ ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ನಿಧನ

08:35 PM Nov 09, 2021 | Team Udayavani |

ಬೆಳ್ತಂಗಡಿ: ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ 98 ವರ್ಷದ ಹಿರಿಯ ದೇಶಾಭಿಮಾನಿ ಪಡಂಗಡಿ ಭೋಜರಾಜ ಹೆಗ್ಡೆ ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ನೇರ ನಡೆ-ನುಡಿ, ಅಪ್ಪಟ ಗಾಂಧಿವಾದಿ, ಸದಾ ಖಾದಿ ವಸ್ತ್ರದಾರಿ, ಸರಳ ಜೀವನ, ಉನ್ನತಚಿಂತನೆ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಭೋಜರಾಜ ಹೆಗ್ಡೆ ಅವರು 1923ರ ಫೆಬ್ರವರಿ 13 ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿ ಮಗನಾಗಿ ಜನಿಸಿದ್ದರು.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ 1942 ರಲ್ಲಿ ಆಯೋಜಿಸಿದ ಭಾರತ ಬಿಟ್ಟುತೊಲಗಿ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

ಮಂಗಳೂರಿನಲ್ಲಿ ಗಾಂಧಿಪಾರ್ಕ್‌ನಲ್ಲಿ ನಡೆದ ಚಳುವಳಿಗೆ ಪಡಂಗಡಿಯಿಂದ ತನ್ನ ಶಿಕ್ಷಕ ಕುಂಞಣ್ಣ ರೈ ಅವರ ಸೈಕಲ್‌ನಲ್ಲಿ ಏರಿ ಮಂಗಳೂರಿಗೆ ತೆರಳಿ ಧರಣಿ ಕುಳಿತಿದ್ದರು.

ಪೊಲೀಸರು ಲಾಠಿ ಬೀಸಿದಾಗ ಅಂಜದೆ ಬ್ರಿಟಿಷರ ವಿರುದ್ಧ ಮತ್ತು ಅವರ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

Advertisement

ಈ ವೇಳೆ ಹೋರಾಟದಲ್ಲಿ ಧೋತಿ ಹರಿದಾಗ ಅಂದು ಖಾದಿ ಬಟ್ಟೆ ಖರೀದಿಸಿ ಧರಿಸಿದವರು ಇಂದಿನವರೆಗೆ ಖಾದಿ ದಿರಿಸನ್ನೇ ತೊಡುತ್ತಿದ್ದರು.

ಅಹ್ಮದಾಬಾದ್‌ನಲ್ಲಿ ಮೊರಾರ್ಜಿ ದೇಸಾಯಿ ಅವರ ಸೇವೆಯನ್ನು ಗುರುತಿಸಿ ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ಓರ್ವ ಪುತ್ರ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ವಯೋಸಹಜವಾಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.

ಹೆಗ್ಡೆಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮೂಡಬಿದ್ರಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next