“ಸೂರ್ಯ ಮುಳುಗದ ಸಾಮ್ರಾಜ್ಯದ ನಕ್ಷತ್ರ ವೊಂದು ಇಂದು ಕಳಚಿತು’ ಎಂದು ಉದ್ಗರಿಸಿದವರು ಆಗಿನ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್. ಅಂದು 1943 ಎಪ್ರಿಲ್ 4, ಸಿಂಗಾಪುರ ದಲ್ಲಿ ಸುಭಾಶ್ಚಂದ್ರ ಬೋಸರು “ಸ್ವತಂತ್ರ ಭಾರತ’ದ ಚತುಃವರ್ಣ ಧ್ವಜ ಹಾರಿಸಿದ ದಿನ! ಅದರಲ್ಲಿ ಪರಾಕ್ರಮದ ಸಂಕೇತವಾಗಿ ಪಶ್ಚಿಮಕ್ಕೆ ಮುಖ ಮಾಡಿ ಗರ್ಜಿಸುವ ಹುಲಿಯಿತ್ತು! “ದಿಲ್ಲಿ ಚಲೋ’, “ಜೈ ಹಿಂದ್’ ಎಂಬ ಘೋಷಣೆಯೊಂದಿಗೆ “ಆಜಾದ್ ಹಿಂದ್ ಫೌಜ್’ (Indian National Army or INA) ಬರ್ಮಾದ ಗಡಿದಾಟಿ ಬಂದಿತು. 9 ರಾಷ್ಟ್ರಗಳು ಈ ಘೋಷಿತ ಸ್ವತಂತ್ರ ಭಾರತ ಸರಕಾರಕ್ಕೆ ಮನ್ನಣೆಯನ್ನು ನೀಡಿತು.
1897, ಜನವರಿ 23, ಜಾನಕೀನಾಥ್ ಬೋಸ್ ಹಾಗೂ ಪ್ರಭಾದೇವಿಯವರ 12 ಮಕ್ಕಳ ಪೈಕಿ ಓರ್ವರಾಗಿ ಕಟಕ್‌ನಲ್ಲಿ ಜನಿಸಿದವರು ಸುಭಾಶ್ಚಂದ್ರ ಬೋಸ್. ವಿದ್ಯಾವಂತ ಕುಲೀನ ಮನೆತನದ ಭೋಸರು ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜು, ಸ್ಕಾಟಿಷ್ ಚರ್ಚ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಪಡೆದವರು. ತಂದೆಯ ಒತ್ತಾಯದ ಮೇರೆಗೆ ಐ.ಸಿ.ಎಸ್. ಉತ್ತೀರ್ಣರಾದರೂ ಆ ಕಾಲದಲ್ಲಿ ಕೈತುಂಬಾ ಸಂಬಳ, ಅಧಿಕಾರ ಎಲ್ಲವನ್ನೂ ಹೊಂದುವ ಅವಕಾಶವಿದ್ದರೂ ಅವೆಲ್ಲವನ್ನು “ಪಾರತಂತ್ರ್ಯದ ಸಂಕೇತ” ಎಂಬುದಾಗಿ ತ್ಯಾಗ ಮಾಡಿದ ಧೀಮಂತ ಎನಿಸಿದರು; ಸ್ವಾತಂತ್ರ್ಯಹೋರಾಟದ ವೀರ ಭೂಮಿಗೆ ಧುಮುಕಿದರು. ರಾಷ್ಟ್ರದ ಬಿಡುಗಡೆಯ ಹೋರಾಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ತೊಡಗಿಕೊಂಡಿದ್ದ ದಿನಗ ಳವು. ಇನ್ನೊಂದೆಡೆ ಇಡೀ ಜಗತ್ತಿನ ಮೇಲೆ ದ್ವಿತೀಯ “ವಿಶ್ವ ಸಮರ’ದ ಕಾರ್ಮೋಡ ಪಸರಿಸುತ್ತಿತ್ತು. ಆ ಸಂಧಿ ಕಾಲದಲ್ಲಿ 1938 ಹಾಗೂ 1939 ಈ ಎರಡು ಅವಧಿಗೆ ಕಾಂಗ್ರೆಸಿನ ಅಧ್ಯಕ್ಷರಾಗಿ ಬೋಸ್ ಆಯ್ಕೆಯಾದರು. ಗಾಂಧೀಜಿಯ ಪೂರ್ಣ ಬೆಂಬಲ ಹೊಂದಿದ್ದ ಪಟ್ಟಾಭಿ ಸೀತಾರಾಮಯ್ಯ ರವರನ್ನೂ ಸೋಲಿಸಿ ಆ ಸಂಘ ಟನೆಯ ನೇತಾರರಾದರು. ಆದರೆ ನಾಯಕರ ಮೃದು ಧೋರಣೆಯಿಂದ ರೋಸಿಹೊಗಿ ಹುದ್ದೆಗೆ ರಾಜೀನಾಮೆ ಇತ್ತು, ಬ್ರಿಟಿಷರು ವಿಧಿಸಿದ “ಗೃಹ ಬಂಧನ’ ದಿಂದ ರೋಮಾಂಚಕ ರೀತಿ ಯಲ್ಲಿ ಪಾರಾಗಿ, ಸ್ವತಂತ್ರ ಪಡೆಯ ಸೇನಾನಿಯಾಗಿ ಇತಿಹಾಸದ ಪುಟದಲ್ಲಿ ಸುಭಾಶ್ಚಂದ್ರ ಬೋಸ್ ಮಿಂಚಿದ್ದರು.
ನೇತಾಜಿ ಅವರು 1945 ಆಗಸ್ಟ್ 18 ರಂದು ತೈವಾನ್‌ನ ತೈಪೆಯಲ್ಲಿ ವಿಮಾನ ದುರಂತದಲ್ಲಿ ಅಸು ನೀಗಿದರು ಎಂಬುದನ್ನು ಅವರ ಸಂಬಂಧಿ ಗಳು, ಸಹಚರರು ಇಂದಿಗೂ ಒಪ್ಪುತ್ತಿಲ್ಲ.
ನೇತಾಜಿ ಸುಭಾಶ್ಚಂದ್ರ ಬೋಸರ ಜನ್ಮದಿನವನ್ನು “ಪರಾಕ್ರಮ ದಿನ’ವಾಗಿ ಆಚರಿಸುತ್ತಿರುವ ಈ ಶುಭ ಅವಸರದಲ್ಲಿ ಅವರೊಂದಿಗೆ ನೇರ ಸಂಪರ್ಕ ಹೊಂದಿದ ನಮ್ಮದೇ ಪರಿಸರದ ಸ್ವಾತಂತ್ರ್ಯ ಯೋಧರನ್ನೂ ನೆನಪಿಸುವುದೂ ಸಮಯೋಚಿತ. ತುಳುನಾಡಿನ ಮಂಗಳೂರಿನಲ್ಲಿ ಜನಿಸಿ, ಬಾರ್.ಎಟ್.ಲಾ. ವರೆಗೆ ಉನ್ನತ ವ್ಯಾಸಂಗ ಪಡೆದು ವಿದೇಶಿ ರಾಯಭಾರಿಯಾಗಿಯೂ ಎತ್ತರದ ಸ್ತರ ಏರಿದವರು ಅತ್ತಾ ವರ ಎಲ್ಲಪ್ಪ ಅವರು. ಆದರೆ ನೇತಾಜಿಯವರ “ಜೈ ಹಿಂದ್’ ಕರೆಗೆ ಓಗೊಟ್ಟು ಧರ್ಮಪತ್ನಿ ಸೀತಮ್ಮರೊಂದಿಗಿನ ದಾಂಪತ್ಯ ಜೀವನವನ್ನು ತ್ಯಾಗ ಮಾಡಿ “ಆಜಾದ್ ಹಿಂದ್ ಸರಕಾರ’ ದ ಸಚಿವರಾಗಿ, ಮಲಯಾದಲ್ಲಿ ದೇಶಪ್ರೇಮಿ ಶ್ರೀಮಂತರ ಸಹಕಾರದಿಂದ “ಆಜಾದ್ ಹಿಂದ್ ಬ್ಯಾಂಕ್’ ಸ್ಥಾಪಿಸಿ 5 ಮಿಲಿ ಯನ್ ಬಂಡವಾಳವನ್ನು ಪಡೆದರು. ಅದೇ ರೀತಿ ಐಎನ್‌ಎ ಯೋಧರ ಖರ್ಚು ಭರಿಸುವಲ್ಲಿ ಪೂರ್ತಿ ಸಹಕರಿಸಿದರು. ತನ್ಮೂಲಕ ನೇತಾಜಿಯವರ ನೆಚ್ಚಿನ ಸಂಗಾತಿಯಾದವರು ಇವರು. “ಝಾನ್ಸಿ ರೆಜಿಮೆಂಟಿನ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ 1997 ಫೆಬ್ರವರಿ 13ರಂದು ಬರೆದ ಪತ್ರದಲ್ಲಿ ‘Yellappa Saheb was a great man, he gave his unflinching loyalty and dedication ‘ ಎಂಬುದಾಗಿ ಎಲ್ಲಪ್ಪರ ಅಳಿಯ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಯ ಪ್ರಭಾಕರ ದಾಸ್ ಅವರಿಗೆ ತಿಳಿಸಿದ್ದರು. ಅದೇ ರೀತಿ ಬೆಳ್ತಂಗಡಿಯ ಕ| ಸುಂದರ ರಾಯರನ್ನು ನೇತಾಜಿ ಜನ್ಮ ಶತಾಬ್ಧಿ ಸಂದರ್ಭದಲ್ಲಿ 1997 ಜನವರಿ 23ರಂದು ಮಂಗಳೂರಿನಲ್ಲಿ ಸಮ್ಮಾನಿಸಲಾಯಿತು. ಆ ಸಂದರ್ಭ ಗದ್ಗದಿತರಾಗಿ ಸುಂದರ ರಾಯರು ನೇತಾಜಿ ಅವರೊಂದಿಗಿನ ತಮ್ಮ ಒಡನಾಟದ ದಿನ ಗಳನ್ನು ಮೆಲುಕು ಹಾಕಿದ್ದರು.
ಸುಮಾರು ಹತ್ತು ವರ್ಷಗಳ ಕಾಲ ನೇತಾಜಿ ಅವರ ಅಂಗರಕ್ಷಕರಾಗಿದ್ದವರು ಕೆ.ಎನ್. ರಾವ್ ದಾಂಡೇಲಿ (ನಿಜನಾಮ ನರಸಿಂಹ ಬಾಬಣ್ಣ ಕಾಮತ್) ನೇತಾಜಿ ವಿಮಾನ ಅಪಘಾತದಲ್ಲಿ ಮಡಿದಿಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದ್ದರು. ಮಂಗಳೂರಿನ ವೀರ ನಗರದಲ್ಲಿ ವಾಸಿಸುತ್ತಿದ್ದ ಗೋಪಾಲ ಶೆಟ್ಟಿ 1941ರಲ್ಲಿ ಬ್ರಿಟಿಷ್ ಸೈನ್ಯ ಸೇರಿ, ಆ ಬಳಿಕ ಪ್ರಖರ ರಾಷ್ಟ್ರೀಯತೆಯಿಂದ ಐ.ಎನ್.ಎ. ಸೇರಿದ ಇನ್ನೋರ್ವ ಗೌರವಾನ್ವಿತ ಸ್ವಾತಂತ್ರ್ಯ ಯೋಧ. ಅದೇ ರೀತಿ ತುಮಕೂರಿನ ಹಳ್ಳಿ ರೈತ ಲಿಂಗಯ್ಯ ಬ್ರಿಟಿಷ್ ಸೇನೆ ತ್ಯಜಿಸಿ “ಆಜಾದ್ ಹಿಂದ್ ಫೌಜ್’ ಸೇರಿ 1948ರಲ್ಲಿ ಯುದ್ಧ ಕೈದಿಯಾಗಿಯೇ ಜಪಾನಿನಲ್ಲಿ ಅಮರ ರಾದವರು. ಹೀಗೆ “ಪರಾಕ್ರಮ ದಿವಸ’ ಆಚರಣೆ ಮುಂದಿನ ಪೀಳಿಗೆಗೂ ನೇತಾಜಿ ಮತ್ತವರ ಸಂಗಾತಿಗಳ ಸಾಹಸಮಯ ಬದುಕು, ಅದಮ್ಯ ಸಾಹಸ ಹಾಗೂ ತ್ಯಾಗದ ಮೇಲೆ ಬೆಳಕು ಚೆಲ್ಲುವಂತಹದು.
– ಡಾ| ಪಿ.ಅನಂತಕೃಷ್ಣ ಭಟ್ ಮಂಗಳೂರು