Advertisement
1919ರಿಂದ ಉಡುಪಿ ರಥಬೀದಿಯು ಸ್ವಾತಂತ್ರ್ಯ ಸಂಗ್ರಾಮ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿತ್ತು. ಆ. 14ರ ಸಂಜೆಯಿಂದ ಮರುದಿನ ಸಂಜೆವರೆಗೆ 24 ಗಂಟೆ ಕಾಲ ಉಡುಪಿ ನಗರದಲ್ಲಿ ಪ್ರಥಮ ಸ್ವಾತಂತ್ರ್ಯೋತ್ಸವ ಆಚರಣೆ. ಪ್ರಾಯಃ ಅನಂತರ ಇಷ್ಟು ದೀರ್ಘ ಕಾಲದ ಆಚರಣೆ ನಡೆದಿರಲಾರದು. ಎಲ್ಲ ದೇವಸ್ಥಾನಗಳು, ಮಠಗಳು, ಮನೆಗಳು, ರಸ್ತೆಗಳು ಅಲಂಕೃತಗೊಂಡಿದ್ದವು. ಆ. 14 ರ ರಾತ್ರಿ ಪತ್ರಕರ್ತ ಎಂ.ವಿ.ಹೆಗ್ಡೆ ಅವರು ರಚಿಸಿದ “ಸ್ವರಾಜ್ಯ ವಿಜಯ’ ಯಕ್ಷಗಾನ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತಪಡಿಸಿದರು. ಸಂಭ್ರಮದ ಸಂಕೇತವಾಗಿ ಶ್ರೀಕೃಷ್ಣಮಠ ಮತ್ತು ದೇವಸ್ಥಾನಗಳ ನಗಾರಿ ಬಾರಿಸಲಾಯಿತು, ಘಂಟಾನಿನಾದ ಕೇಳಿಬಂತು. ಕದೊನಿ ಗಳನ್ನು (ಬೆಡಿ) ಸಿಡಿಸಲಾಯಿತು. ಆಗಿನ ಪರ್ಯಾಯ ಪೀಠಸ್ಥ ರಾಗಿದ್ದ ಶೀರೂರು ಮಠದ ಶ್ರೀಲಕ್ಷ್ಮೀಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀಭಂಡಾರಕೇರಿ ಮಠದ ಸ್ವಾಮೀಜಿ, ಇತರ ಅಷ್ಟಮಠಗಳ ಸ್ವಾಮೀಜಿಗಳು, ಸ್ವಾತಂತ್ರ್ಯ ಹೋರಾಟ ಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜ ಅರಳಿಸಿದರು..
Related Articles
Advertisement
ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿ ಗಿಣಿ ಯೊಂದು ರಾಷ್ಟ್ರಧ್ವಜಾರೋಹಣ ಮಾಡಿತ್ತು. ಒಂದೆಡೆ ದೇಶ ಭಕ್ತರು ಧ್ವಜಾ ರೋಹಣ ಮಾಡಿದರೆ ಇನ್ನೊಂದೆಡೆ ಸಾಕು ಗಿಣಿಯೊಂದು ಅದಕ್ಕೆ ತಕ್ಕುದಾದ ರಾಷ್ಟ್ರಧ್ವಜದ ಪ್ರತೀಕವನ್ನು ಅರಳಿಸಿತು. ಗಿಣಿ ಯೊಂದು ಧ್ವಜಾರೋಹಣ ಮಾಡುತ್ತದೆ ಎಂದು ಕರಪತ್ರದಲ್ಲಿ ತಿಳಿಸಲಾಗಿತ್ತು. ಇದು ಕಾರ್ಯ ಕ್ರಮದ ಆಕರ್ಷಣೆ. ಇದೇ ರೀತಿ ಹಲ ವೆಡೆ ಸಾಕು ಗಿಣಿಗಳು ಧ್ವಜಾ ರೋಹಣ ಮಾಡಿದ್ದವಂತೆ.
ಪೇಜಾವರ ಶ್ರೀಗಳ ಪ್ರಥಮ- ಕೊನೆಯ ಸ್ವಾತಂತ್ರ್ಯ ಸಂದೇಶ :
ರಥಬೀದಿಯಲ್ಲಿ 1947ರಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ 16 ವರ್ಷ. ಅಂದು ಶ್ರೀಪಾದರು “ಅನೇಕರ ಬಲಿ ದಾನ ದಿಂದ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿದೆ. ಇದನ್ನು ಮುಂದಿನ ಪೀಳಿಗೆ ಯವರು, ಆಡಳಿತಾರೂಢರು ಉಳಿಸಿ ಕೊಂಡು ದೇಶ ವನ್ನು ಸದೃಢ ಗೊಳಿಸ ಬೇಕು. ಬಂದ ಜವಾಬ್ದಾರಿಯನ್ನು ಸರಕಾರ ಉಳಿಸಿಕೊಳ್ಳುವುದು ಮುಖ್ಯ’ ಎಂದಿದ್ದರು. 2019ರ ಆ. 14ರಂದು “ಉದಯವಾಣಿ’ ಜತೆ ಮಾತನಾಡಿದ 89ರ ಶ್ರೀಗಳು “1947ರಲ್ಲಿ ಗಾಂಧೀಜಿ ಪ್ರಭಾವದಿಂದ ರಾಜ ಕಾರಣಿಗಳು ಭ್ರಷ್ಟರಾಗಿರ ಲಿಲ್ಲ. ಆಗ ಮುಂದೊಂದು ದಿನ ಇಷ್ಟು ಅಗಾಧ ಪ್ರಮಾಣದಲ್ಲಿ ಅಪ್ರಾಮಾಣಿಕತೆ, ಅಧಿಕಾರ ಸ್ವಾರ್ಥ ನಡೆಯುತ್ತದೆಂದು ಕಲ್ಪಿಸಿಕೊಂಡಿರಲೂ ಇಲ್ಲ. ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಆರಂಭವಾಯಿತು. ಈಗ ಪ್ರಜಾಪ್ರಭುತ್ವ ಅಪಮೌಲ್ಯಕ್ಕೆ ಒಳಗಾಗುತ್ತಿದೆ. ಜನಪ್ರತಿನಿಧಿಗಳು ಭ್ರಷ್ಟಾಚಾರಕ್ಕೆ ಒಳಗಾಗದೆ ದೇಶಭಕ್ತಿ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು’ ಎಂದಿದ್ದರು.2019ರ ಡಿ. 29ರಂದು ಶ್ರೀಗಳು ಇಹಲೋಕ ತ್ಯಜಿಸಿದರು.