Advertisement

ಸ್ವಾತಂತ್ರ್ಯ-ಸಮಾನತೆ ಇನ್ನೂ ಕನಸು

06:21 AM Feb 11, 2019 | Team Udayavani |

ದಾವಣಗೆರೆ: ಭಾರತ ದೇಶವು ತಂತ್ರಜ್ಞಾನದಲ್ಲಿ ಉತ್ತುಂಗಕ್ಕೇರಿದರೂ ಸಹ ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಇನ್ನೂ ಕನಸಾಗಿಯೇ ಉಳಿದಿದೆ ಎಂದು ಎಐಎಂಎಸ್‌ಎಸ್‌ನ ರಾಜ್ಯಾಧ್ಯಕ್ಷೆ ಬಿ.ಆರ್‌. ಅಪರ್ಣ ಬೇಸರ ವ್ಯಕ್ತಪಡಿಸಿದರು. ಪಿ.ಜೆ. ಬಡಾವಣೆಯ ವನಿತಾ ಸಮಾಜ ಸಭಾಂಗಣದಲ್ಲಿ ಭಾನುವಾರ ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಹಿಳಾ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದರು.

Advertisement

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಅಪರಾಧಗಳು ಹೆಚ್ಚುತ್ತಲೇ ಇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಸಮಾನತೆ ನಿವಾರಣೆ ಆಗಿಲ್ಲ. ನಾಗಲೋಟದಲ್ಲಿ ತಂತ್ರಜ್ಞಾನ ಬೆಳವಣಿಗೆ ಹೊಂದಿದರೂ ಸಹ ಮಹಿಳೆಯರಿಗೆ ಸಮಾನ ಅವಕಾಶ, ಸ್ವಾತಂತ್ರ್ಯ, ಸಮಾನತೆ ದೊರಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಣಕ್ಕಾಗಿ ಈಶ್ವರ್‌ಚಂದ್ರ ವಿದ್ಯಾಸಾಗರ್‌, ರಾಜಾರಾಮ್‌ ಮೋಹನ್‌ರಾಯ್‌ರಂತಹ ಆದರ್ಶ ವ್ಯಕ್ತಿಗಳು ಹಾಕಿಕೊಟ್ಟ ಬುನಾದಿಯಿಂದಾಗಿ ಮಹಿಳೆಯರು ಇಂದು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಆದರೆ ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಸೂಕ್ತ ರೀತಿಯಲ್ಲಿ ದೊರೆತಾಗ ಮಾತ್ರ ಮಹಿಳೆಯರು ಏಳ್ಗೆ ಸಾಧಿಸಲು ಸಾಧ್ಯ ಎಂದರು.

ಸಮ್ಮೇಳನ ಉದ್ಘಾಟಿಸಿದ ಎ.ಆರ್‌.ಜಿ. ಕಾಲೇಜು ಪ್ರೊ| ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆದು ಸುಶಿಕ್ಷಿತರಾಗಬೇಕು. ಆಗ ಮಾತ್ರ ತಮ್ಮ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಹುದು. ಜೊತೆಗೆ ಪುರುಷರು ಕೂಡ ಇಂತಹ ಕಾರ್ಯಕ್ರಮಗಳಿಗೆ ಕೈ ಜೋಡಿಸಿದರೆ ಮಹಿಳಾ ಸಬಲೀಕರಣ ಸಾಧ್ಯ ಎಂದು ಹೇಳಿದರು.

1917ರಲ್ಲಿ ಸಮಾಜವಾದಿ ರಾಷ್ಟ್ರವಾದ ರಷ್ಯಾ ಮಹಿಳೆಯರಿಗೆ ಆರ್ಥಿಕ ಭದ್ರತೆ ಕೊಟ್ಟು, ಮಹಿಳೆಯರು ರಾಜಕೀಯವಾಗಿಯೂ ಭಾಗವಹಿಸುವಂತೆ ಪ್ರೇರೇಪಿಸಿತು. ವೇಶ್ಯಾವಾಟಿಕೆಗಳಂತಹ ಜಟಿಲ ಸಮಸ್ಯೆಗಳಿಗೆ ಸಂಪೂರ್ಣ ಅಂತ್ಯ ಹಾಡಿ ಮಹಿಳೆಯರಿಗೆ ಪರಿಪೂರ್ಣ ಸಮಾನತೆಯನ್ನು ಕೊಟ್ಟಿತು. ಆದರೆ ಇದು ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಭಾರತದಂತಹ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಇವೆಲ್ಲಾ ಅಸಾಧ್ಯ ಎಂದರು.

Advertisement

ಎ.ಐ.ಎಂ.ಎಸ್‌.ಎಸ್‌. ನ ರಾಜ್ಯ ಕಾರ್ಯದರ್ಶಿ ಎಸ್‌. ಶೋಭ ಮಾತನಾಡಿ, ಹೊಸ ಸಮಿತಿಗೆ ಕ್ರಾಂತಿಕಾರಿ ಶುಭಾಶಯಗಳನ್ನು ತಿಳಿಸುತ್ತಾ ಈ ಸಮಿತಿ ಮಹಿಳಾ ಚಳುವಳಿಯನ್ನು ಕೊಂಡೊಯ್ಯುವಲ್ಲಿ ಹೆಚ್ಚು ಸಮರ್ಥವಾಗಿದೆ. ಹಾಗೂ ಮಹಿಳೆಯರಲ್ಲಿ ಹೊಸ ಭರವಸೆ ತುಂಬಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಒಳಗೊಂಡತಹ ಮುಖ್ಯ ಗೊತ್ತುವಳಿ ಮಂಡಿಸಲಾಯಿತು. ನಂತರ ಪೂರಕವಾದ ಚರ್ಚೆಗಳು ನಡೆದವು.

ಜ್ಯೋತಿ ಕುಕ್ಕುವಾಡ ಅಧ್ಯಕ್ಷತೆ ವಹಿಸಿದ್ದರು. ಭಾರತಿ, ಸವಿತಾ, ಬನಶ್ರೀ, ಹೇಮ, ಸರಸ್ವತಿ, ನೇತ್ರ, ಮಮತಾ, ವಂದನಾ, ತೇಜು, ವೀಣಾ, ಶಾಂತಾ, ಗೀತಾ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next