ಲಕ್ನೋ: ಉತ್ತರ ಪ್ರದೇಶ ಚುನಾವಣಾ ಕಣ ರಂಗೇರುತ್ತಿದೆ. ಭಾರೀ ಚರ್ಚೆಯ ಬಳಿಕ ಬಿಜೆಪಿಯು ಲಕ್ನೋ ಸೀಟುಗಳ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಲಕ್ನೋನ ಎಲ್ಲಾ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಅಪರ್ಣಾ ಯಾದವ್ ಗೆ ಶಾಕ್ ನೀಡಿದೆ.
ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇತ್ತೀಗಷ್ಟೇ ಬಿಜೆಪಿ ಸೇರಿದ್ದರು. ಇವರು ಲಕ್ನೋ ಕಂಟೋನ್ಮೆಂಟ್ ನಲ್ಲಿ ಟಿಕೆಟ್ ಬಯಸಿದ್ದರು. ಇದೇ ಕ್ಷೇತ್ರದಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಕೂಡಾ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿ ಸಚಿವ ಬ್ರಿಜೇಶ್ ಪಾಠಕ್ ಗೆ ಟಿಕೆಟ್ ನೀಡಿದೆ.
ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರ ಸ್ವಯಂ ನಿವೃತ್ತಿಯನ್ನು ಇಂದು ಕೇಂದ್ರ ಸರ್ಕಾರ ಅಂಗೀಕರಿಸಿದ್ದು, ಅವರಿಗೆ ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಟಿಕೆಟ್ ನೀಡಿದೆ. ರಾಜ್ಯದ ಮಹಿಳಾ ಕಲ್ಯಾಣ ಖಾತೆ ರಾಜ್ಯ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಇಬ್ಬರೂ ಈ ಸೀಟಿನ ಮೇಲೆ ಕಣ್ಣಿಟ್ಟಿದ್ದರು.
ಇದನ್ನೂ ಓದಿ:ಸ್ಮಾರ್ಟ್‌ಸಿಟಿ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣ ; ಸಚಿವ ಬೈರತಿ ಬಸವರಾಜ್ ಸೂಚನೆ
ಅಪರ್ಣಾ ಯಾದವ್ ಸಮಾಜವಾದಿ ಪಕ್ಷವನ್ನು ಬಿಟ್ಟು ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಅಪರ್ಣಾ ಯಾದವ್ ಬಿಜೆಪಿ ಸೇರಲು ಪ್ರಮುಖ ಕಾರಣ ಎಸ್‌ಪಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎನ್ನುವುದೇ ಕಾರಣ ಎನ್ನಲಾಗಿತ್ತು. ಆದರೆ ಅಪರ್ಣಾ ಯಾದವ್ ಈ ವಿಚಾರವನ್ನು ತಳ್ಳಿ ಹಾಕಿದ್ದರು. “ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೆ” ಎಂದಿದ್ದರು.
ಬಿಜೆಪಿ ಸಂಸದೆ ರೀಟಾ ಬಹುಗುಣ ಪುತ್ರ ಮಯಾಂಕ್ ಜೋಶಿ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದೆ.