ಪ್ರಸಂಗ,ಅರ್ಥಗಾರಿಕೆ,ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ ನೀಡಲಾಯಿತು
ಯಕ್ಷಗುರು ಮಹಾವೀರ ಪಾಂಡಿ ಅವರ ಯಕ್ಷದೇಗುಲ (ರಿ.) ಈ ಬಾರಿ ಹದಿನೈದು ದಿನಗಳ ಪರ್ಯಂತ ಉಚಿತ ಯಕ್ಷ ಶಿಕ್ಷಣದ ಶಿಬಿರ ನಡೆಸಿ ಯಶಸ್ಸು ಕಂಡಿದ್ದಾರೆ. ಶಿಬಿರಕ್ಕೆ 87 ಮಕ್ಕಳು ನೋಂದಣಿ ಮಾಡಿಕೊಂಡಿದ್ದರು.ನಿರೀಕ್ಷೆಗಿಂತ ದುಪ್ಪಟ್ಟು ಮಂದಿ ಇರುವುದನ್ನು ಗಮನಿಸಿ ಕಿರಿಯ, ಹಿರಿಯ ಹಾಗೂ ಪ್ರೌಢ ವಿಭಾಗ ಎಂಬ ತಂಡಗಳನ್ನಾಗಿ ರೂಪಿಸುವುದು ಅನಿವಾರ್ಯವಾಯಿತು.
ಶಿಬಿರದಲ್ಲಿ ಬರೀ ನಾಟ್ಯ ಹೇಳಿಕೊಟ್ಟಿಲ್ಲ. ಬದಲಾಗಿ, ಪ್ರಸಂಗ ಮಾಹಿತಿ, ಅರ್ಥಗಾರಿಕೆ, ಅಭಿನಯ ಸಿದ್ಧಾಂತ, ಯಕ್ಷಗಾನ ಮತ್ತು ಮಾಧ್ಯಮ ಸಂಬಂಧ, ಯಕ್ಷಗಾನ ಮತ್ತು ಮಹಿಳೆ, ಪಾತ್ರಗಳ ಮೌಲ್ಯ ವಿವೇಚನೆ, ಕಲಾಭಿರುಚಿ, ಕಲಾವಿದರ ವ್ಯಕ್ತಿತ್ವ ಕುರಿತು ಮಾಹಿತಿ, ಪರಿಜ್ಞಾನವೊದಗಿಸಲಾಯಿತು.ಮಹೇಶ್ ಕನ್ಯಾಡಿ, ರವಿರಾಜ್ ಜೈನ್, ಚಿದಾ ನಂದ ಕುತ್ಲೂರು ಇವರ ಹಿಮ್ಮೇಳ ದೊಂದಿಗೆ ದಿವಾಣ ಶಿವಶಂಕರ ಭಟ್ ಪರಂಪರೆಯ ಪೂರ್ವರಂಗ , ಹರಿರಾಜ್ ಶೆಟ್ಟಿಗಾರ್ ಯೋಗದೊಂದಿಗೆ ಸಭಾ ಕ್ಲಾಸು, ತೆರೆಕ್ಲಾಸು, ದೀವಿತ್ ಎಸ್.ಕೆ. ಪೆರಾಡಿ, ಗಣೇಶ್ ಶೆಟ್ಟಿ ಸಾಣೂರು ಇವರು ಪರಂಪರೆಯ ಒಡ್ಡೋಲಗ, ನಾಟ್ಯ ಹೇಳಿಕೊಟ್ಟರು.
ಕಿನ್ನಿಗೋಳಿಯ ಶ್ರೀಧರ ಡಿ.ಎಸ್. , ಉಜಿರೆ ಅಶೋಕ ಭಟ್, ಕೆರೆಗದ್ದೆ ವೆಂಕಟರಮಣ ಭಟ್, ಗಾಳಿಮನೆ ವಿನಾಯಕ ಭಟ್ ಪ್ರಸಂಗ ಮಾಹಿತಿ, ಅರ್ಥಗಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಹೀಗೆಯೇ ಭಾಗವತ ರಾಮಕೃಷ್ಣ ಮಯ್ಯ (ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ), ಚಂದ್ರನಾಥ ಬಜಗೋಳಿ (ಅಭಿನಯ ಸಿದ್ದಾಂತ), ಎಂ. ನಾ. ಚಂಬಲ್ತಿಮಾರ್ (ಯಕ್ಷಗಾನ ಮತ್ತು ಮಾಧ್ಯಮ), ದೇವಾನಂದ ಭಟ್ (ಪಾತ್ರಗಳ ಮೌಲ್ಯ ವಿವೇಚನೆ), ಕಾರ್ಕಳದ ವಕೀಲ ಸುಗಂಧ ಕುಮಾರ್ (ಯಕ್ಷಗಾನ ಮತ್ತು ಕಾನೂನು), ಶಶಿಕಲಾ ಹೆಗ್ಡೆ ಕಾರ್ಕಳ, ಪೂರ್ಣಿಮಾ (ಯಕ್ಷಗಾನ ಮತ್ತು ಮಹಿಳೆಯರು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕಿನ್ನಿಗೋಳಿಯ ಮೋಹಿನಿ ಕಲಾ ಸಂಪದದ ಮನೋಜ್ ಶೆಟ್ಟಿಗಾರ್ ಮೂರು ದಿನ ಇದ್ದು ಬಣ್ಣಗಾರಿಕೆ, ವೇಷಗಾರಿಕೆಯ ಬಗ್ಗೆ ಕಲಿಸಿಕೊಟ್ಟರು. ಹಿಮ್ಮೇಳದವರು (ದಿವಾಕರ ಆಚಾರ್ಯ, ಆನಂದ ಗುಡಿಗಾರ ಮತ್ತು ರವಿರಾಜ್ ಜೈನ್) ಇದ್ದು, ಯಾವುದೇ ಹೆಚ್ಚಿನ ತಯಾರಿ ಇಲ್ಲದೆ, ವೇಷ ಕಟ್ಟದೆ “ಸುದರ್ಶನ ವಿಜಯ’ ಯಕ್ಷಗಾನವನ್ನು (ಈ ಹಿಂದೆ ವೇಷ ಹಾಕಿ ಅನುಭವ ಇದ್ದ) ಶಿಬಿರಾರ್ಥಿಗಳು ಕೊನೆಯ ದಿನ ಪ್ರಸ್ತುತಪಡಿಸಿದರು. ಸ್ವಪರಿಚಯದಿಂದ ತೊಡಗಿ ತರಗತಿಯ ಪಾಠಗಳ ಕುರಿತಾಗಿ , ಯಾವುದೇ ಜಿಜ್ಞಾಸೆಯನ್ನು ಸ್ಪಷ್ಟ , ಸುಲಲಿತ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತಿಸುವ ಧೈರ್ಯ, ಸಾಮರ್ಥ್ಯವನ್ನು ಉದ್ದೀಪಿಸುವಲ್ಲೂ ಮಹಾವೀರ ಪಾಂಡಿ ಬಹಳಷ್ಟು ಪರಿಶ್ರಮವಹಿಸಿದರು. ಪಾಂಡಿಯವರೊಂದಿಗೆ ಅಧ್ಯಕ್ಷ ಶ್ರೀಪತಿ ರಾವ್, ಕೋಶಾಧಿಕಾರಿ ಧರ್ಮರಾಜ ಕಂಬಳಿ ಇವರೇ ಮೊದಲಾದವರು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದ್ದರು.
ಧನಂಜಯ ಮೂಡಬಿದಿರೆ