Advertisement

ರೈಲು ಪ್ರಯಾಣಿಕರಿಗೆ ಉಚಿತ ವೈಫೈ

03:25 PM Jul 20, 2018 | Team Udayavani |

ಬಳ್ಳಾರಿ: ರೈಲು ಪ್ರಯಾಣಿಕರೇ…! ರೈಲು ತಡವಾಗಿ ಆಗಮಿಸಲಿದೆ ಎಂದು ನಿಲ್ದಾಣದಲ್ಲೇ ಕೂಡಲು ಬೇಸರವಾಗುತ್ತಿದೆಯೇ…? ತಾವು ಸಂಚರಿಸಬೇಕಾದ ರೈಲು ಇನ್ನು ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿಯಲು ಅಂತರ್ಜಾಲದ ಸೌಲಭ್ಯ ಬೇಕೆ…? ಹಾಗಿದ್ದರೆ, ಇನ್ನು ಚಿಂತೆ ಬಿಡಿ. ಪ್ರಯಾಣಿಕರಲ್ಲಿ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು. ಅದಕ್ಕೆ ನಿಲ್ದಾಣವೇ ವೈಫೈ ಸಂಪರ್ಕ ಕಲ್ಪಿಸಿಕೊಡಲಿದೆ. ಜತೆಗೆ ಸಮಯ ಕಳೆಯಲು ಮನೋರಂಜನೆಯನ್ನೂ ಪಡೆಯಬಹುದಾಗಿದೆ.

Advertisement

ಹೌದು….! ಬಡವರ ವಿಮಾನ ಎಂದು ಕರೆಯುವ ರೈಲು ಪ್ರಯಾಣಿಕರಿಗೆ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗವು ರೈಲು ಪ್ರಯಾಣಿಕರಿಗಾಗಿ ನೂತನ ವೈಫೈ ಯೋಜನೆಯನ್ನು ಜಾರಿಗೆ ತಂದಿದೆ. ನಿಲ್ದಾಣದಲ್ಲಿ ಸ್ಮಾರ್ಟ್‌ಫೋನ್‌ವುಳ್ಳ ಎಲ್ಲ ಪ್ರಯಾಣಿಕರಿಗೂ ಉಚಿತವಾಗಿ ವೈಫೈ ಸೌಲಭ್ಯ ದೊರೆಯಲಿದೆ. ಇದರಿಂದ ರೈಲಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳುವ ಪ್ರಯಾಣಿಕರು ವೈಫೈ ಸಂಪರ್ಕ ಪಡೆದು ಮೊಬೈಲ್‌ನಲ್ಲಿ ಮನೋರಂಜನೆ ವೀಕ್ಷಿಸಬಹುದಾಗಿದೆ. ಈ ಮೂಲಕ ನಿಲ್ದಾಣಕ್ಕೆ ರೈಲು ಆಗಮಿಸುವವರೆಗೂ ಸಮಯವನ್ನೂ ಕಳೆಯಬಹುದಾಗಿದೆ.

ಈ ವೈಫೈ ಸಂಪರ್ಕ ಪಡೆಯಲು ತಮ್ಮ ಮೊಬೈಲ್‌ ನಂಬರ್‌ ಒಮ್ಮೆ ಅದರಲ್ಲಿ ಲಾಗಿನ್‌ (ಪಾಸ್‌ ವರ್ಡ್‌) ಆದರೆ ಸಾಕು. ಉಚಿತವಾಗಿ ಅಂತರ್ಜಾಲ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಉಚಿತವಾಗಿ ಮನೋರಂಜನೆಯನ್ನೂ ಪಡೆಯುವ ಮೂಲಕ ಖುಷಿಯಿಂದಲೇ ರೈಲು ಪ್ರಯಾಣ ಮಾಡಬಹುದಾಗಿದೆ. 

ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಿರುವ ದಕ್ಷಿಣ ಪಶ್ಚಿತ ರೈಲ್ವೆ ಇಲಾಖೆಯು ಮೊದಲ ಹಂತದಲ್ಲಿ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಬೆಳಗಾವಿ, ಕಲುಬುರ್ಗಿ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನೌಕರರು, ಕಾರ್ಮಿಕರು, ಪ್ರಯಾಣಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ನಿಲ್ದಾಣಗಳಲ್ಲಿ ಸಂಚರಿಸುತ್ತಾರೆ. ಹೀಗಾಗಿ ಮೊದಲ ಹಂತದಲ್ಲಿ ಈ ಐದು ನಿಲ್ದಾಣಗಳನ್ನು ವೈಫೈ ಸಂಪರ್ಕ ಕಲ್ಪಿಸಲು ಆಯ್ಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ಹೆಚ್ಚು ಪ್ರಯಾಣಿಕರು ಸಂಚರಿಸುವ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎನ್ನುತ್ತಾರೆ ರೈಲ್ವೆ ಇಲಾಖೆಯ ಸಿಬ್ಬಂದಿಗಳು.

ಅರ್ಧ ಗಂಟೆ ವೇಗ: ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ದೊರೆಯುವ ವೈಫೈ ಸೌಲಭ್ಯವು ನಿಲ್ದಾಣದಿಂದ 100 ಮೀಟರ್‌ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಪ್ರಯಾಣಿಕರ ಮೊಬೈಲ್‌ಗೆ ಒಮ್ಮೆ ಸಂಪರ್ಕವಾದರೆ ಅರ್ಧ ಗಂಟೆ ವೇಗವಾಗಿ ವೈಫೈ ಸೌಲಭ್ಯ ಸಿಗಲಿದೆ. ನಂತರ ನಿಧಾನವಾಗಲಿದೆ. ಪುನಃ ವೇಗ ಪಡೆದುಕೊಳ್ಳಬಹುದು ಎಂದು ಹಾಗೆ ಮುಂದುವರೆದರೂ ಪ್ರಯೋಜನವಿಲ್ಲ. ಒಂದು ದಿನಕ್ಕೆ ಒಬ್ಬರಿಗೆ ಅರ್ಧ ಗಂಟೆ ಮಾತ್ರ ವೈಫೈಯನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದ್ದು, ಪುನಃ ಬೇಕು ಎಂದರೆ, ಮರುದಿನ ಪುನಃ ನಿಲ್ದಾಣಕ್ಕೆ ಆಗಮಿಸಬೇಕು.

Advertisement

ಏನೇನು ಸೌಲಭ್ಯ ಪಡೆಯಬಹುದು: ನಿಲ್ದಾಣದಲ್ಲಿ ಉಚಿತವಾಗಿ ದೊರೆಯುವ ವೈಫೈ ಸೌಲಭ್ಯದಿಂದ ನಿಲ್ದಾಣದಲ್ಲೇ ತತ್ಕಾಲ್‌ನಲ್ಲಿ ರೈಲುಗಳಲ್ಲಿ ಆಸನಗಳನ್ನು ಮೀಸಲಿರಿಸಬಹುದು. ಈಗಾಗಲೇ ರಿಜರ್ವೇಷನ್‌ ಆಗಿದ್ದ ಆಸನಗಳ ಸಂಖ್ಯೆ ಮತ್ತು ಬೋಗಿಗಳನ್ನು ಖಚಿತವಾಗಿದೆಯೇ ಎಂಬುದನ್ನು ತಿಳಿಯಬಹುದು. ಇದರೊಂದಿಗೆ ರೈಲ್ವೆ ಇಲಾಖೆಯ ಆಪ್‌ವುಳ್ಳ ಪ್ರಯಾಣಿಕರು ತಾವು ಸಂಚರಿಸಬೇಕಾದ ರೈಲು ನಿಲ್ದಾಣದಿಂದ ಎಷ್ಟು ದೂರದಲ್ಲಿದೆ? ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸಲಿದೆ? ಯಾವ ಪ್ಲಾಟ್‌ಫಾರ್ಮ್ನಲ್ಲಿ ಬಂದು ನಿಲ್ಲಲಿದೆ? ಎಂಬುದನ್ನೂ ಆನ್‌ಲೈನ್‌ ನಲ್ಲೇ ತಿಳಿದುಕೊಳ್ಳಬಹುದು. ಈಗಾಗಲೇ ಎಲ್ಲ ಪ್ರಯಾಣಿಕರ ಬಳಿ ಅಂತರ್ಜಾಲ ಸೌಲಭ್ಯವುಳ್ಳ ಸ್ಮಾರ್ಟ್‌ಫೋನ್‌ಗಳಿವೆಯಾದರೂ, ಪ್ರಯಾಣಿಕರ ಅನುಕೂಲಕ್ಕಾಗಿ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಈ ವೈಫೈ ಸೌಲಭ್ಯ ಕಲ್ಪಿಸಿಕೊಡುತ್ತಿದೆ
 
ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ವ್ಯಾಪ್ತಿಯ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಬೆಳಗಾವಿ, ಕಲುಬುರ್ಗಿಯಲ್ಲಿನ ನಿಲ್ದಾಣಗಳಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲ್‌ನಲ್ಲಿ ಸಂಚರಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ವೈಫೈ ಸಂಪರ್ಕ ಕಲ್ಪಿಸಲಾಗುತ್ತಿದೆ.

ಸ್ಮಾರ್ಟ್‌ಫೋನ್‌ವುಳ್ಳ ಪ್ರಯಾಣಿಕರು ಈ ವೈಫೈನ್ನು ಉಚಿತವಾಗಿ ಬಳಸಿಕೊಳ್ಳಬಹುದು. ನಿಲ್ದಾಣದಲ್ಲೇ ಆಸನ ರಿಜರ್ವೇಷನ್‌ ಸೇರಿ ಸೌಲಭ್ಯ ಪಡೆಯಬಹುದು ಎಂದು ಹೆಸರು ಹೆಳಲಿಚ್ಚಿಸದ ರೈಲು ಸಿಬ್ಬಂದಿ ಒಬ್ಬರು ಹೇಳುತ್ತಾರೆ. 

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next