ಜೂನ್ 21ರಿಂದ ದೇಶಾದ್ಯಂತ 18 ವರ್ಷ ತುಂಬಿದ ಎಲ್ಲ ನಾಗರಿಕರಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಕೊಡುವ ಸಂಬಂಧ ಸೋಮವಾರ ಘೋಷಣೆ ಮಾಡಿದ್ದಾರೆ.
ಇಡೀ ದೇಶದ ನಾಗರಿಕರ ಹಿತದೃಷ್ಟಿಯಿಂದ ಹೇಳುವುದಾದರೆ ಇದೊಂದು ಸಕಾಲಿಕ ಮತ್ತು ಅತ್ಯುತ್ತಮವಾದ ಕ್ರಮ. ಕಳೆದ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಲಸಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಹಾಗೆಯೇ ಮೇ 1ರಿಂದ 18 ವರ್ಷ ತುಂಬಿದ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರಕಾರವೇ ಘೋಷಣೆ ಮಾಡಿತ್ತು. ಆದರೆ ಲಸಿಕೆ ಖರೀದಿ ಹಾಗೂ ವಿತರಣೆ ವ್ಯವಸ್ಥೆಯಲ್ಲಿ ರಾಜ್ಯ ಮಟ್ಟಗಳಲ್ಲಾದ ಗೊಂದಲದಿಂದಾಗಿ ಕೇಂದ್ರದ ಉದ್ದೇಶ ಫಲ ನೀಡಿರಲಿಲ್ಲ. ಹೀಗಾಗಿ ನೇರವಾಗಿ ಕೇಂದ್ರವೇ ಮಧ್ಯಪ್ರವೇಶಿಸಿ ಲಸಿಕೆ ವಿತರಣೆಗೆ ಕ್ರಮ ಕೈಗೊಂಡಿರುವುದು ಸ್ತುತ್ಯರ್ಹ ಕ್ರಮ.
ಆರಂಭ ದಲ್ಲಿ ಆರೋಗ್ಯ ಕಾರ್ಯ ಕ ರ್ತರು ಮತ್ತು ಮುಂಚೂಣಿ ಕಾರ್ಯ ಕ ರ್ತ ರಿಗೆ, ಬಳಿಕ 60 ವರ್ಷ ಮೇಲ್ಪಟ್ಟ ಮತ್ತು
ಇತರ ರೋಗಗಳಿರುವವರಿಗೆ ಹಾಗೂ ಅನಂತರದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಆರಂಭದ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದರಾದರೂ, ಹೆಚ್ಚಿನ ಉತ್ಸಾಹ ತೋರಿರಲಿಲ್ಲ. ಇದಾದ ಬಳಿಕ 60 ವರ್ಷ ಮೇಲ್ಪಟ್ಟವರು ಹಾಗೂ ಇತರ ರೋಗಗಳಿರುವವರೂ ಸರಿಯಾಗಿ ಹಾಕಿಸಿಕೊಂಡಿರಲಿಲ್ಲ. 45 ವರ್ಷ ಮೇಲ್ಪಟ್ಟವರಿಗೆ ಘೋಷಿಸಿದಾಗಲೂ ಹೆಚ್ಚು ಉತ್ಸಾಹ ಕಂಡು ಬಂದಿರಲಿಲ್ಲ. ಆದರೆ ಕೊರೊನಾ ಎರಡನೇ ಅಲೆ ಶುರುವಾದ ಮೇಲೆ ದೇಶಾದ್ಯಂತ ಲಸಿಕೆಗಾಗಿ ದಿಢೀರ್ ಬೇಡಿಕೆ ಬಂದಿತ್ತು. ಇದರ ನಡುವೆಯೇ ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ಘೋಷಿಸಲಾಗಿತ್ತು. ಹಾಗೆಯೇ ಶೇ.50ರಷ್ಟನ್ನು ಕೇಂದ್ರ ಸರಕಾರ ಖರೀದಿಸುವುದು, ಶೇ.25 ಅನ್ನು ರಾಜ್ಯ ಸರಕಾರಗಳೇ ನೇರವಾಗಿ ಖರೀದಿಸುವುದು ಹಾಗೂ ಉಳಿದ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳು ಖರೀದಿಸುವುದು ಎಂಬ ನೀತಿ ರೂಪಿಸಲಾಗಿತ್ತು. ಆದರೆ ಈ ಲಸಿಕೆ ನೀತಿಯಲ್ಲಿ ಕೊಂಚ ಅದಲು ಬದಲಾಗಿದ್ದರಿಂದ ಎಲ್ಲೋ ಒಂದು ಕಡೆ ಲಸಿಕೆ ಲಭ್ಯತೆ ಕಡಿಮೆಯಾಗಿತ್ತು. ಹಾಗೆಯೇ ದೇಶಕ್ಕೊಂದು ದರ ಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಸುಪ್ರೀಂ ಕೋರ್ಟ್ ಕೂಡ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ಈಗ ಕೇಂದ್ರ ಸರಕಾರವೇ ರಾಜ್ಯ ಸರಕಾರಗಳು ಮೂಡಿಸುತ್ತಿದ್ದ ಗೊಂದಲ, ಖಾಸಗಿ ಆಸ್ಪತ್ರೆಗಳು ಪಡೆಯುತ್ತಿದ್ದ ಹೆಚ್ಚಿನ ದರಕ್ಕೆ ಕಡಿವಾಣ ಹಾಕಿದೆ. ಇನ್ನು ಮುಂದೆ ತಾನೇ ಶೇ.75ರಷ್ಟು ಲಸಿಕೆಯನ್ನು ಖರೀದಿಸಿ ರಾಜ್ಯ ಸರಕಾರಗಳಿಗೆ ಹಂಚುವ ಕೆಲಸ ಮಾಡುವುದಾಗಿ ಹೇಳಿದೆ. ಅಂದರೆ ಇನ್ನು ಮುಂದೆ ರಾಜ್ಯ ಸರಕಾರಗಳು ಲಸಿಕೆಗಾಗಿ ಉತ್ಪಾದಕರ ಮನೆ ಬಾಗಿಲಿಗೆ ಹೋಗಿ ನಿಲ್ಲಬೇಕಾಗಿಲ್ಲ. ಉಳಿದ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿ ಜನರಿಗೆ ನೀಡಬಹುದಾಗಿದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳು 150 ರೂ.ನಷ್ಟು ಸೇವಾ ತೆರಿಗೆ ಹಾಕಬಹುದು ಅಷ್ಟೇ.
ಇದರ ಜತೆಗೆ ನವೆಂಬರ್ ವರೆಗೆ ದೇಶದ ಎಲ್ಲ ಬಡವರಿಗೂ ಉಚಿತ ಆಹಾರ ಧಾನ್ಯ ನೀಡುವ ಕ್ರಮವೂ ಸ್ವಾಗತಾರ್ಹವೇ. ಸದ್ಯ ಲಾಕ್ ಡೌನ್ ಮಾದರಿಯ ನಿರ್ಬಂಧಗಳಿಂದಾಗಿ ಬಡವರು ಕೂಲಿಯೂ ಇಲ್ಲದೇ ಕಷ್ಟ ಪಡುತ್ತಿದ್ದು ಅಂಥವರಿಗೆ ನೆರವಾಗಲಿದೆ.