Advertisement

ಸೋಂಕಿತರಿಗೆ ಖಾಸಗಿ ವೈದ್ಯರ ಉಚಿತ ಚಿಕಿತ್ಸೆ

10:51 AM Aug 03, 2020 | mahesh |

ಹಾವೇರಿ: ಕೋವಿಡ್ ಸೋಂಕಿಗೆ ಚಿಕಿತ್ಸೆ ನೀಡಲು ರಾಜ್ಯದ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರು ಹೆಚ್ಚಿನ ದರ ವಿಧಿ ಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲೆಯ ಖಾಸಗಿ ವೈದ್ಯರು ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರು ರೋಗಿಗಳಿಂದ ಯಾವುದೇ ಸಂಭಾವನೆ ಹಾಗೂ ಸೌಕರ್ಯ ನಿರೀಕ್ಷಿಸದೇ ಚಿಕಿತ್ಸೆ ನೀಡುತ್ತಿದ್ದು, ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 14 ವೈದ್ಯರು ಪಾಳಿ ಪ್ರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಆಯುಷ್‌ ವೈದ್ಯರು ಸೇರಿ 570ಕ್ಕೂ ಹೆಚ್ಚು ವೈದ್ಯರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಯೋಜನೆ (ಕೆಪಿಎಂಇ) ಅಡಿ ನೋಂದಾಯಿಸಿಕೊಂಡಿದ್ದು, ಇವರೆಲ್ಲರೂ ಕೋವಿಡ್ ಸೋಂಕಿತರಿಗೆ ಉಚಿತ ಸೇವೆ ನೀಡಲು ಸಿದ್ಧರಾಗಿದ್ದಾರೆ.

Advertisement

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಖಾಸಗಿ ವೈದ್ಯರ ಜತೆ ಚರ್ಚಿಸಿದ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದರಿಂದ ಆಸ್ಪತ್ರೆಯ ಬೇರೆ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಅಲ್ಲದೆ, ಅನೇಕ ವೈದ್ಯರು ತಮ್ಮ ಆಸ್ಪತ್ರೆಯ ಮೇಲಂತಸ್ತು ಗಳಲ್ಲಿಯೇ ಮನೆ ಮಾಡಿಕೊಂಡಿದ್ದು, ಕುಟುಂಬಕ್ಕೂ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಕೇರ್‌ ಸೆಂಟರ್‌ ಸ್ಥಾಪಿಸಿದರೆ ಅಲ್ಲಿಗೆ ಬಂದು ಸೇವೆ ನೀಡುವುದಾಗಿ ಖಾಸಗಿ ವೈದ್ಯರು ತಿಳಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಜಿಲ್ಲಾಡಳಿತ ಸದ್ಯ ಜಿಲ್ಲಾ ಕೋವಿಡ್‌-19 ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ತಿಳಿಸಿತ್ತು.

ಉಚಿತ ಸೇವೆಗೆ ಮೆಚ್ಚುಗೆ: ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಸೋಂಕಿ ತರಿಗೆ ಉಚಿತ ಸೇವೆ ನೀಡುವ ಮೂಲಕ ಕೊರೊನಾ ಪ್ರಕರಣಗಳನ್ನು ತಡೆಗಟ್ಟುವ ಜಿಲ್ಲಾ ಡಳಿತದ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ಪಾವತಿ ಸಬೇಕಾಗಿರುವುದರಿಂದ ಜನರು ಸಂಕಷ್ಟಕ್ಕೆ ತುತ್ತಾಗಿದ್ದರು. ಇಂತಹ ಸಂದರ್ಭದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಮುಂದಾಗಿರುವುದಕ್ಕೆ ಜಿಲ್ಲೆ ಯಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಡಾ| ಸುಧಾಕರ್‌ ಮೆಚ್ಚುಗೆ
ಜಿಲ್ಲೆಯ ಖಾಸಗಿ ವೈದ್ಯರ ಉಚಿತ ಸೇವೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸುಧಾಕರ್‌, ಕೋವಿಡ್‌ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿ ರುವ ಹಾವೇರಿ ಜಿಲ್ಲೆಯ 570 ಖಾಸಗಿ ವೈದ್ಯರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿರುವ ಈ ವೈದ್ಯರ ವೃತ್ತಿಪರತೆ ಹಾಗೂ ಸೇವಾ ಮನೋಭಾವ ಅತ್ಯಂತ ಶ್ಲಾಘನೀಯ ಎಂದಿದ್ದಾರೆ.

ಜಿಲ್ಲೆಯ ಖಾಸಗಿ ವೈದ್ಯರ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ. ಸದ್ಯ ಜಿಲ್ಲಾಸ್ಪತ್ರೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಅವರು ಸೇವೆ ಸಲ್ಲಿಸುತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದರೆ ತಾಲೂಕು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೂ ಖಾಸಗಿ ವೈದ್ಯರ ಸೇವೆ ಬಳಸಿಕೊಳ್ಳಲಾಗುವುದು.
●ಎಸ್‌.ಯೋಗೀಶ್ವರ, ಅಪರ ಜಿಲ್ಲಾಧಿಕಾರಿ, ಹಾವೇರಿ

Advertisement

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸುವ ಬದಲು ಸರ್ಕಾರಿ ಕೋವಿಡ್‌ ಕೇರ್‌ ಆಸ್ಪತ್ರೆಗಳು ಅಥವಾ ಕೇಂದ್ರಗಳಲ್ಲಿ ನಮ್ಮ ಸೇವೆ ಬಳಸಿಕೊಳ್ಳುವುದು ಉತ್ತಮ.
●ಡಾ| ಮೃತ್ಯುಂಜಯ ತುರ್ಕಾಣಿ, ಅಧ್ಯಕ್ಷರು, ಐಎಂಎ ಹಾವೇರಿ ಘಟಕ

ಕೋವಿಡ್ ಸಂಕಷ್ಟದ ನಡುವೆ ಸರ್ಕಾರಕ್ಕೆ ಸಹಕಾರ ನೀಡುವುದು ನಮ್ಮ ಪ್ರಮುಖ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದೇವೆ. ನಮಗೆ ಯಾವುದೇ ಸಂಭಾವನೆ ಬೇಡ. ಸರ್ಕಾರ ಈ ಹಣವನ್ನು ವೈದ್ಯಕೀಯ ಅವಶ್ಯಕತೆಗಳಿಗೆ ಬಳಸಲಿ.
●ಡಾ| ಬಸವರಾಜ ವೀರಾಪೂರ, ವೀರಾಪೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next