Advertisement
ಪೂರ್ಣ ಹೆಸರು ಡಾ.ಶ್ರವಣ್ ಕುಂಬಗೌಡನ. ಈಗ 33 ವರ್ಷ. ಮೂಲತಃ ಕೊಡಗಿನ ಮಡಿಕೇರಿಯವರು. ರಾಜ್ಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹಾಲಿ ಕ್ರಿಕೆಟಿಗರ ಅಚ್ಚು ಮೆಚ್ಚಿನ ಫಿಸಿಯೋ. ಶ್ರವಣ್ ಅಂದರೆ ವಿದೇಶಿ ಕ್ರಿಕೆಟಿಗರಿಗೂ ಅಚ್ಚುಮೆಚ್ಚು. ಎಬಿಡಿ ವಿಲಿಯರ್, ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್‌ನ ಕ್ರೀಸ್ ಗೇಲ್ ಇವರಿಂದ ಚಿಕಿತ್ಸೆ ಪಡೆದಿದ್ದಾರೆ. ಶ್ರವಣ್ ಕೈಚಳಕದಿಂದ ಬೇಗ ಚೇತರಿಸಿಕೊಂಡಿದ್ದಾರೆ. ಶ್ರವಣ್ ತಮ್ಮ ಅಮೃತ ಹಸ್ತದಿಂದಲೇ ವಿಶ್ವ ಕ್ರಿಕೆಟಿಗರ ಮನಸ್ಸನ್ನೂ ಸೆಳೆದಿದ್ದಾರೆ.
Related Articles
Advertisement
ರಾಜ್ಯ ರಣಜಿ ತಂಡಕ್ಕೆ ಲಕ್ಕಿ ಫಿಸಿಯೋ: ವೃತ್ತಿ ಜೀವನದ ಆರಂಭದಲ್ಲಿ ಗೋವಾ ರಣಜಿ ತಂಡಕ್ಕೆ ಫಿಸಿಯೋ ಆದೆ. ಬಳಿಕ ರಾಜ್ಯ ರಣಜಿ ತಂಡಕ್ಕೆ ಮುಖ್ಯ ಫಿಸಿಯೋ ಆಗಿ ಆಯ್ಕೆಯಾದೆ. ರಣಜಿ, ಇರಾನಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಯನ್ನು ಸತತ 2 ವರ್ಷ ಗೆದ್ದೆವು. ನಾನು ರಣಜಿ ತಂಡಕ್ಕೆ ಫಿಸಿಯೋ ಆಗಿದ್ದಾಗ 6 ಬಾರಿ ಕರ್ನಾಟಕ ರಣಜಿ ಟ್ರೋಫಿ ಗೆದ್ದಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. 2011ರಿಂದ ಆರ್‌ಸಿಬಿ ಜತೆ ಕೆಲಸ ಆರಂಭಿಸಿದೆ. ಕಳೆದ 2 ವರ್ಷದಿಂದ ಈಚೆಗೆ ಬೆಂಗಳೂರಿನ ಜಕ್ಕೂರಿನಲ್ಲಿ ನನ್ನದೇ ಕ್ಲಿನಿಕ್ ಕೂಡ ತೆರೆದಿದ್ದೇನೆ. ರಾಬಿನ್ ಉತ್ತಪ್ಪ, ಕೆ.ಎಲ್.ರಾಹುಲ್, ವರುಣ್ ಏರಾನ್, ಎಸ್.ಅರವಿಂದ್, ಅಭಿಮನ್ಯು ಮಿಥುನ್ ಸೇರಿದಂತೆ ಹಲವು ಕ್ರಿಕೆಟಿಗರು ನಮ್ಮಲ್ಲಿಗೆ ಆಗಮಿಸುತ್ತಾರೆ. ಜತೆಗೆ ಐಪಿಎಲ್‌ನತ್ತ ಕೂಡ ಹೆಚ್ಚು ಗಮನ ವಹಿಸಿದ್ದೇನೆ.
ಶ್ರವಣ್‌ಗೆ ಹರಿಣಗಳ ನಾಡಿನ ಗುರು ಮಾರ್ಗದರ್ಶನ: ಆರ್‌ಸಿಬಿ ಮುಖ್ಯ ಫಿಸಿಯೋ ಇವೆನ್ಸ್ ಸ್ಪೀಚ್‌ಲಿ ನನ್ನ ಗುರು. ಅವರು ಆಫ್ರಿಕಾ ಮೂಲದವರು. ಅವರಿಂದ ನಾನು ಬಹಳ ಕಲಿತೆ. ಆಟಗಾರನ ಗಾಯವನ್ನು ಅಳೆದು ತೂಗುವ, ಚಿಕಿತ್ಸೆ ನೀಡುವ ನನ್ನ ದೃಷ್ಟಿಕೋನವೇ ಬದಲಾಯಿತು. ಯಾವ ಆಯಾಮಗಳಲ್ಲಿ ಚಿಕಿತ್ಸೆ ನೀಡಿದರೆ ಒಳಿತು ಎನ್ನುವುದನ್ನು ಅವರೇ ಹೇಳಿಕೊಟ್ಟಿದ್ದಾರೆ. ಅವರು ಹೇಳಿದ ದಾರಿಯಲ್ಲಿಯೇ ಸಾಗುತ್ತಿದ್ದೇನೆ.
ಶ್ರವಣ್ ಚಿಕಿತ್ಸೆ ಎನ್‌ಸಿಎಗಿಂತ ಹೇಗೆ ಭಿನ್ನ?: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಹೆಚ್ಚು ಭಾರವಾದ ಪರಿಕರಗಳಿಂದ ವ್ಯಾಯಾಮ ಮಾಡಿಸುತ್ತಾರೆ. ಕೆಲವೊಂದು ಸಲ ದೊಡ್ಡ ಯಂತ್ರಗಳನ್ನೂ ಬಳಸಿ ತರಬೇತಿ ನೀಡುತ್ತಾರೆ. ನಮ್ಮಲ್ಲಿ ಹಾಗಲ್ಲ. ಎನ್‌ಸಿಎಗೂ ಮೊದಲು ಗಾಯಾಳುಗಳು ನಮ್ಮಲ್ಲಿ ಚಿಕಿತ್ಸೆ ಪಡೆದುಕೊಂಡರೆ ಚೇತರಿಕೆಗೆ ಮತ್ತಷ್ಟು ಸಹಾಯಕವಾಗಲಿದೆ. ಸದ್ಯ 5 ಮಂದಿ ನುರಿತ ತಜ್ಞರು ನಮ್ಮಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಗಾಲ#ರ್, ಹಾಕಿ, ಫುಟ್‌ಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ಆಟಗಾರರು ಇಲ್ಲಿ ನಮ್ಮಲ್ಲಿ ಚಿಕಿತ್ಸೆಗೆಂದು ಬರುತ್ತಾರೆ.
ಬಡ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉಚಿತ ಚಿಕಿತ್ಸೆದೇಶ, ವಿದೇಶದ ಅಗ್ರ ಕ್ರಿಕೆಟಿಗರು ಶ್ರವಣ್ ಬಳಿ ಚಿಕಿತ್ಸೆಗೆಂದು ಬರುತ್ತಾರೆ. ದಿನವೊಂದರ 1 ಗಂಟೆಯ ಸೆಷನ್‌ಗೆ 1 ಸಾವಿರದಿಂದ 1.500 ರೂ.ವರೆಗೆ ಶುಲ್ಕ ನಿಗದಿಪಡಿಸಿದ್ದೇವೆ. ಆದರೆ ಆರ್ಥಿಕವಾಗಿ ಹಿಂದುಳಿದ ಶೇ.25ರಷ್ಟು ಕ್ರೀಡಾಪಟುಗಳು ನನ್ನ ಬಳಿಗೆ ಬರುತ್ತಾರೆ. ಅವರಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ಹಣದಿಂದಲೇ ಎಲ್ಲವನ್ನು ನೋಡಲು ಸಾಧ್ಯವಿಲ್ಲ. ದೇಶಕೋಸ್ಕರ ಸಿದ್ಧರಾಗುವ ಕ್ರೀಡಾಪಟುಗಳಿಗೆ ಖಂಡಿತ ಸಹಾಯ ಮಾಡುತ್ತೇನೆ ಎನ್ನುವುದು ಶ್ರವಣ್ . – ಹೇಮಂತ್ ಸಂಪಾಜೆ