Advertisement

ಬಿಎಂಟಿಸಿ ಸಿಬ್ಬಂದಿಗೆ ಉಚಿತ ಚಿಕಿತ್ಸೆ

12:38 AM Feb 04, 2020 | Lakshmi GovindaRaj |

ಬೆಂಗಳೂರು: ನರರೋಗ, ಮಾನಸಿಕ ಒತ್ತಡಕ್ಕೊಳಗಾದ ಬಿಎಂಟಿಸಿ ಸಿಬ್ಬಂದಿಗೆ ಪ್ರತಿ ತಿಂಗಳ ಕೊನೆಯ ಶನಿವಾರ ಉಚಿತ ಚಿಕಿತ್ಸೆ ನೀಡಲು ನಿಮ್ಹಾನ್ಸ್‌ ನಿರ್ಧರಿಸಿದೆ. ನಗರದಲ್ಲಿ ವಾಹನ ದಟ್ಟಣೆ ಸೇರಿ ವಿವಿಧ ಕಾರಣಗಳಿಂದ ಬಿಎಂಟಿಸಿ ಸಿಬ್ಬಂದಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ನರರೋಗ ಸಮಸ್ಯೆಯಿಂದ ಬಳಲುತ್ತಿರುವವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ.

Advertisement

ಈ ನಿಟ್ಟಿನಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲು ನಿಮ್ಹಾನ್ಸ್‌ ತೀರ್ಮಾನಿಸಿದೆ. ಪ್ರತಿದಿನ ನರರೋಗ, ಮಾನಸಿಕ ಒತ್ತಡ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಆಸ್ಪತ್ರೆಗೆ ಹೋಗುತ್ತಿದ್ದು, ಚಿಕಿತ್ಸೆಗಾಗಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಅಲೆಯಬೇಕಾಗುತ್ತದೆ. ಇದರಿಂದ ಅವರ ಕೆಲಸಕ್ಕೂ ತೊಂದರೆಯಾಗಲಿದ್ದು, ಎಲ್ಲಾ ಬಿಎಂಟಿಸಿ ಸಿಬ್ಬಂದಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡಲು ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಅವರು ನಿಮ್ಹಾನ್ಸ್‌ ನಿರ್ದೇಶಕರಿಗೆ ಮನವಿ ಮಾಡಿದ್ದರು.

ಅದರಂತೆ ತಿಂಗಳ ಕೊನೆಯ ಶನಿವಾರ ಚಿಕಿತ್ಸೆ ನೀಡಲು ತೀರ್ಮಾನಿಸಿ, ಜನವರಿ ತಿಂಗಳ ಕಡೆ ಶನಿವಾರ ಆರಂಭಿಕವಾಗಿ ಸುಮಾರು 12 ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗಿದೆ. ಯೋಗ, ಮಾನಸಿಕ ಸ್ಥೈರ್ಯ, ನರವಿಜ್ಞಾನ ವಿಭಾಗ ಸೇರಿ ನಾಲ್ಕು ವಿಭಾಗದ ವೈದ್ಯರು, ಸಿಬ್ಬಂದಿ ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದು ಚಿಕಿತ್ಸೆ, ಸಲಹೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ.

ಬಿಎಂಟಿಸಿಯಲ್ಲಿ 33 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದು, ಅಗತ್ಯ ಇರುವವರು ಚಿಕಿತ್ಸೆ ಪಡೆಯಬಹುದು ಎಂದು ನಿಮ್ಹಾನ್ಸ್‌ ಸಂಸ್ಥೆಯ ಪ್ರೊ.ಶೇಖರ್‌ ತಿಳಿಸಿದರು. “ಪ್ರತಿ ತಿಂಗಳ ಕೊನೆಯ ಶನಿವಾರ ಬಿಎಂಟಿಸಿ ಸಿಬ್ಬಂದಿಗೆ ನರರೋಗ, ಮಾನಸಿಕ ಒತ್ತಡ ನಿವಾರಣೆಗೆ ವಿಶೇಷ ಚಿಕಿತ್ಸೆ ನೀಡಲಾಗುವುದು. ಸಿಬ್ಬಂದಿ ಸಂಖ್ಯೆ ಹೆಚ್ಚಾದರೆ ತಿಂಗಳಲ್ಲಿ ಎರಡು ದಿನ ಚಿಕಿತ್ಸೆಗೆ ಅನುವು ಮಾಡಿಕೊಡಲಾಗುವುದು’ ಎಂದು ನಿಮ್ಹಾನ್ಸ್ ನಿರ್ದೇಶಕ ಪ್ರೊ.ಬಿ.ಎನ್‌.ಗಂಗಾಧರ್‌ ಹೇಳಿದರು.

ಒತ್ತಡ ನಿವಾರಿಸಲು ಸೈನಿಕರಿಗೂ ತರಬೇತಿ: ಭಾರತ-ಟಿಬೆಟ್‌ ಗಡಿಯಲ್ಲಿ 90 ಸಾವಿರ ಸೈನಿಕರು ಕೆಲಸ ನಿರ್ವಹಿಸುತ್ತಿದ್ದು, ಅದರಲ್ಲಿ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇವರಿಗೆ ಆತ್ಮಸ್ಥೈರ್ಯ ತುಂಬಲು 450 ಕೌನ್ಸಲಿಂಗ್‌ ಸಿಬ್ಬಂದಿ ಇದ್ದು, ಅದರಲ್ಲಿ 90 ಜನ ನಿಮ್ಹಾನ್ಸ್‌ಗೆ ಬಂದಿದ್ದಾರೆ. ಅವರನ್ನು 3 ತಂಡಗಳಾಗಿ ವಿಂಗಡಿಸಿ, ಮಾನಸಿಕ ಒತ್ತಡಕ್ಕೆ ಒಳಗಾದರೆ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬಕುರಿತು ಈಗಾಗಲೇ 2 ತಂಡಗಳಿಗೆ ತರಬೇತಿ ನೀಡಲಾಗಿದೆ. ಪ್ರಸ್ತುತ 3ನೇ ತಂಡದ ಕೌನ್ಸಲಿಂಗ್‌ ಸಿಬ್ಬಂದಿ ತರಬೇತಿ ಪಡೆಯುತ್ತಿದ್ದಾರೆ. 10 ದಿನ ತರಬೇತಿ ಪಡೆಯಲಿದ್ದು, ಇವರು ಗಡಿಯಲ್ಲಿರುವ 90 ಸಾವಿರ ಸೈನಿಕರಿಗೂ ತರಬೇತಿ ನೀಡಲಿದ್ದಾರೆ ಎಂದು ನಿಮ್ಹಾನ್ಸ್ ಸಂಸ್ಥೆಯ ಪ್ರೊ. ಡಾ.ಶೇಖರ್‌ ತಿಳಿಸಿದರು.

Advertisement

12ರಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ವತಿಯಿಂದ ಫೆ.12 ಮತ್ತು 13ರಂದು ನಿಮ್ಹಾನ್ಸ್‌ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ಬಿ.ಎನ್‌.ಗಂಗಾಧರ್‌ ಹೇಳಿದರು.

ನಿಮ್ಹಾನ್‌ನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ರಾಷ್ಟ್ರೀಯ ವಿಜ್ಞಾನ ದಿನ, ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ನರವಿಜ್ಞಾನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಜನರಿಗೆ ಅರ್ಥೈಸಲು, ವೈದ್ಯಕೀಯ ವಿದ್ಯಾರ್ಥಿಗಳಿಗೆ ನರ ವಿಜ್ಞಾನದಲ್ಲಿ ಕುತೂಹಲ ಹೆಚ್ಚಿಸಲು ಪ್ರದರ್ಶನ ಆಯೋಜಿಸಲಾಗಿದೆ. ಕಳೆದ ವರ್ಷ 5 ಸಾವಿರ ಜನರು ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದ್ದರು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಟಿವಿಎಸ್‌ ಗ್ರೂಪ್‌ ಸಹಯೋಗದಲ್ಲಿ ನ್ಯುರೋ ಸೈನ್ಸ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಎರಡು ದಿನಗಳ ಕಾರ್ಯಾಗಾರದಲ್ಲಿ ಪಾರ್ಶ್ವವಾಯು (ಸ್ಟ್ರೋಕ್‌) ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.‌ ಪ್ರತಿ ವರ್ಷ ಫೆ.14ರಂದು ನಿಮ್ಹಾನ್ಸ್‌ ಸಂಸ್ಥಾಪನಾ ದಿನ ಆಚರಿಸುತ್ತಾ ಬಂದಿದ್ದು, ಈ ಬಾರಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಜತೆಗೆ ಆಚರಿಸಲಾಗುವುದು. ಇದೇ ವೇಳೆ ನಿಮ್ಹಾನ್‌ನ ಸಾಧಕ ಸಿಬ್ಬಂದಿಗೆ ಪಾರಿತೋಷಕ ನೀಡಿ ಗೌರವಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ನಿಮ್ಹಾನ್ಸ್‌ನಲ್ಲಿ 2018-19ನೇ ಸಾಲಿನಲ್ಲಿ 5.65 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. 307 ಸಂಶೋಧನಾ ಯೋಜನೆಗಳು, 857 ಸಂಶೋಧನಾ ವರದಿಗಳನ್ನು ಮಂಡಿಸಲಾಗಿದೆ. 543 ಕಾರ್ಯಾಗಾರ ಮತ್ತು ಶಿಬಿರಗಳನ್ನು ನಡೆಸಲಾಗಿದೆ. ಪ್ರವಾಹದಲ್ಲಿ ತೊಂದರೆಗೆ ಒಳಗಾದ ಸಂತ್ರಸ್ತರಿಗೆ ಮಾನಸಿಕ ಸ್ವಾಸ್ಥ್ಯಕ್ಕೆ ಬೇಕಿರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಸ್ಪತ್ರೆಯಲ್ಲಿ ಇಂಗ್ಲಿಷ್‌ ಮೆಡಿಸಿನ್‌ ಬದಲು ಯೋಗ, ಆಯುರ್ವೇದ ಚಿಕಿತ್ಸೆ ನೀಡಲು “ಇಂಟಿಗ್ರೇಟೆಡ್‌ ಮೆಡಿಸಿನ್‌’ ಎಂಬ ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಪ್ರಾಧ್ಯಾಪಕ ಗಿರೀಶ್‌ ಕುಲಕರಣಿ, ಡಾ.ಸಂತೋಷ್‌ ಚರ್ತುವೇದಿ, ಡಾ.ಶೇಖರ್‌ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next