ನವದೆಹಲಿ:ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ಆರಂಭಿಸಿದ್ದಾರೆ.
ಎಲ್ಲರ ಸಹಕಾರದೊಂದಿಗೆ ಅಂತಿಮ ಪರಿಹಾರ ದೊರೆಯಲಿದೆ ಎಂದು ವಕೀಲ ಸಂಜಯ್ ಹೆಗ್ಡೆ ಅವರು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ನಾವು ಪ್ರತಿಯೊಬ್ಬರ ಜತೆಯೂ ಮಾತನಾಡುತ್ತೇವೆ. ಅಲ್ಲದೇ ಎಲ್ಲರ ಸಹಕಾರದೊಂದಿಗೆ ಈ ವಿಷಯಕ್ಕೆ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೆಗ್ಡೆ ತಿಳಿಸಿದ್ದಾರೆ.
“ನಿಮ್ಮ ಪ್ರತಿಭಟನೆಯ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೆ ಉಳಿದ ಜನರಿಗೂ ಅವರ ಹಕ್ಕು ಇದೆ. ಅದನ್ನು ಕೂಡಾ ನಾವು ಗಮನಿಸಬೇಕಾಗಿದೆ ಎಂದು ಶಾಹೀನ್ ಬಾಗ್ ನಲ್ಲಿ ರಾಮಚಂದ್ರನ್ ಮಾತನಾಡಿದರು.
ಈ ಸಮಸ್ಯೆಗೆ ನಾವು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾವು ಪ್ರತಿಯೊಬ್ಬರ ಮಾತನ್ನು ಆಲಿಸುತ್ತೇವೆ ಎಂದು ಹಿಂದಿಯಲ್ಲಿ ತಿಳಿಸಿದರು.
ಮಾಜಿ ಅಧಿಕಾರಿ ವಾಜಾಹತ್ ಹಬಿಬುಲ್ಲಾ ಅವರನ್ನು ಕೂಡಾ ಶಾಹೀನ್ ಬಾಗ್ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಲು ಸುಪ್ರೀಂಕೋರ್ಟ್ ನೇಮಕ ಮಾಡಿದೆ. ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಂವಹನಕಾರರನ್ನು ನಾನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹಬಿಬುಲ್ಲಾ ಹೇಳಿದರು.