Advertisement
ಒಂದು ಬಂಗುಡೆ ಮೀನಿಗೆ ಇಪ್ಪತ್ತೈದು ರೂಪಾಯಿ ಆದರೆ ನೂರು ರುಪಾಯಿಗೆ ನಾಲ್ಕು ಬಂಗುಡೆ ಮೀನು ಸಿಗುತ್ತದೆ ಎನ್ನುವುದು ಲೆಕ್ಕ, ಆದರೆ ಮೀನಿನ ವ್ಯಾಪಾರಿ ಒಳ್ಳೆಯ ಮೂಡಿನಲ್ಲಿದ್ದರೆ ಅಥವಾ ನೀವು ದಿನಾಲೂ ಅವನಲ್ಲೇ ವ್ಯಾಪಾರ ಮಾಡುವವರಾಗಿದ್ದರೆ, ಹತ್ತು-ಹದಿನೈದು ಬೂತಾಯಿ ಮೀನುಗಳೂ ಹೆಚ್ಚು ಸಿಗುತ್ತವೆ ಅನ್ನೋದನ್ನ ಲೆಕ್ಕಕ್ಕೆ ಹಿಡಿದಿಡಲು ಸಾಧ್ಯವಿಲ್ಲ!
Related Articles
Advertisement
ದಿ ಇಮಿಟೇಶನ್ ಗೇಮ್ ಎಂಬ ಚಲನಚಿತ್ರದಲ್ಲಿ ಒಂದು ಪ್ರಸಂಗ ಬರುತ್ತದೆ. ಬ್ರಿಟನ್‌ನ ಗಣಿತಶಾಸ್ತ್ರಜ್ಞ ಅಲೆನ್ ಟರ್ನಿಂಗ್ ತನ್ನ ತಂಡದವರೊಡನೆ ಸೇರಿಕೊಂಡು ಜರ್ಮನ್ನರಿಂದ ಬರುವ ರಹಸ್ಯ ಸಂಕೇತಗಳನ್ನು ಭೇದಿಸುವ ಕೆಲಸದಲ್ಲಿ ತೊಡಗಿರುತ್ತಾನೆ. ಮನುಷ್ಯ ಪ್ರಯತ್ನದಿಂದ ಈ ಸಂಕೇತಗಳನ್ನು ಬೇಧಿಸುವುದು ಅಸಾಧ್ಯ. ಟರ್ನಿಂಗ್ ತನ್ನ ತಂಡದೊಡನೆ ಸೇರಿ, ಎರಡು ವರ್ಷ ಕಷ್ಟಪಟ್ಟು, ತನ್ನೆಲ್ಲÉ ಜ್ಞಾನ ಹಾಗೂ ಚಾತುರ್ಯವನ್ನು ಬಳಸಿ ಸಂಕೇತಗಳ ರಹಸ್ಯ ಒಡೆಯುವ ಯಂತ್ರ ಕಂಡುಹಿಡಿಯುತ್ತಾನೆ. ಜರ್ಮನ್‌ನಿಂದ ಆಗತಾನೆ ಬಂದ ಸಂಕೇತವನ್ನು ಯಂತ್ರಕ್ಕೆ ಕೊಟ್ಟಾಗ ಜರ್ಮನ್ನರು ಬ್ರಿಟಿಷ್ ಯುದ್ಧನೌಕೆಯೊಂದರ ಮೇಲೆ ಆ ದಿನ ದಾಳಿ ನಡೆಸುವ ಸನ್ನಾಹದಲ್ಲಿರುವುದು ತಿಳಿಯುತ್ತದೆ.
ಆದರೆ, ಈ ವಿಚಾರ ತಿಳಿದು ಬ್ರಿಟಿಷ್ ಸೈನ್ಕಕ್ಕೆ ತಿಳಿದು ನೌಕೆಯ ರಕ್ಷಣೆಗೆ ಧಾವಿಸಿದರೆ, ಮರುದಾಳಿ ನಡೆಸಿದರೆ ತಮ್ಮ ಸಂಕೇತಗಳ ರಹಸ್ಯ ಬಯಲಾಗಿರುವುದು ಜರ್ಮನರಿಗೆ ತಿಳಿದು ಅವರು ಅವುಗಳ ವಿನ್ಯಾಸ ಬದಲಿಸುವ ಸಂಭವವಿದೆ. ಹಾಗೇನಾದರೂ ನಡೆದರೆ ಟರ್ನಿಂಗ್ ಮತ್ತವನ ತಂಡದ ಎರಡು ವರ್ಷಗಳ ಶ್ರಮ ವ್ಯರ್ಥವಾಗುವುದು. ಟರ್ನಿಂಗ್ ಕೆಲವು ಕಾಲ ಜರ್ಮನ್ ತಂಡದ ನಡೆಗಳನ್ನು ಗಮನಿಸಿ, ಅವರ ಮುಖ್ಯ ಸಂದೇಶಗಳ ಜಾಡು ಹಿಡಿದು, ಅವರ ಯುದ್ಧತಂತ್ರವನ್ನು ಊಹಿಸಿ ನಂತರ ಬ್ರಿಟಿಷ್ ಅಧಿಕಾರಿಗಳಿಗೆ ವಿಚಾರ ತಿಳಿಸುವ ಯೋಚನೆಯಲ್ಲಿ ಇರುತ್ತಾನೆ, ಆದರೆ ತಂಡದಲ್ಲಿದ್ದ ಪೀಟರ್ ಅಳಲು ಶುರು ಮಾಡುತ್ತಾನೆ. ಕಾರಣ- ಅವನ ಪ್ರೀತಿಯ ದೊಡ್ಡಣ್ಣ ಈಗ ತಾನೆ ದಾಳಿ ನಡೆಯಲಿರುವ ಯುದ್ಧನೌಕೆಯಲ್ಲಿ ಇದ್ದಾನೆ. ಸೈನ್ಯಕ್ಕೆ ತಿಳಿಸಿದರೆ ಆ ನೌಕೆ ಪಾರಾಗಬಹುದು. ಅವನು ಪರಿಪರಿಯಾಗಿ ಟರ್ನಿಂಗ್‌ನನ್ನು ಬೇಡುತ್ತಾನೆ. ಈಗ ಟರ್ನಿಂಗ್ ಏನು ಮಾಡಬೇಕು? ಅದನ್ನು ಅವನ ಲೆಕ್ಕ ಹೇಳುವುದಿಲ್ಲ.
ಹೌದು! ಲೆಕ್ಕಕ್ಕೆ ಸಿಗದ ಸಂಗತಿಗಳು ಹಲವು ಇವೆ. ಮಾಲ್‌ಗಳಲ್ಲಿ ಲೆಕ್ಕ ಮಾಡಿ ಅವರು ಹೇಳಿದಷ್ಟು ಕೊಟ್ಟು ಬಂದಾಗ ಬೇಸರವಾಗುವುದು ಹಣ ಖರ್ಚಾದ ಬಗೆಗಲ್ಲ, ಲೆಕ್ಕವಷ್ಟೇ ಆಗಿ ಹೋದ ವ್ಯವಹಾರದ ಬಗ್ಗೆ. ಮನುಷ್ಯರ ನಡುವಿನ ಸಂಬಂಧ-ಗುಣ-ದೋಷಗಳನ್ನು ಸಂಖ್ಯೆಗಳ ಮೂಲಕ ಅಳೆದು ಅವುಗಳ ಭವಿಷ್ಯವನ್ನು ಊಹಿಸುವುದನ್ನು ಎಮ್‌ಎಸ್‌ಸಿಯಲ್ಲಿ ಕಲಿತಿದ್ದೇನೆ. ಮನುಷ್ಯನೊಬ್ಬನ ಆದಾಯ-ಉದ್ಯೋಗ- ವಿದ್ಯಾರ್ಹತೆ- ವಾಸಸ್ಥಳ ಇತ್ಯಾದಿ ಇನ್ನಿತರ ವಿವರಗಳಿದ್ದರೆ ಬ್ಯಾಂಕ್‌ನವರು ಆತ ಮೋಸಗಾರ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಬಹುದಾದ ಒಂದು ಟೆಕ್ನಿಕ್ ಇದೆ. ಪಕ್ಕಾ ಲೆಕ್ಕದ ಟೆಕ್ನಿಕ್ ಅದು. ಸಾಮಾನ್ಯರು ತಮ್ಮ ಮೂಗಿನ ನೇರಕ್ಕೆ ಎದುರಿಗಿರುವವರನ್ನು ಅಳೆಯುವುದನ್ನೇ ನಾವು ಲೆಕ್ಕದ ಕನ್ನಡಕ ಇಟ್ಟು ಮಾಡಬೇಕಾಗಿ ಬಂದಾಗ ಅಸಹನೆ ಉಂಟಾಗುತ್ತದೆ- ಲೆಕ್ಕ ಇಷ್ಟೊಂದು ಪಫೆìಕ್ಟಾ?- ಅನ್ನುವ ಗುಮಾನಿ ಏಳುತ್ತದೆ, ಇಲ್ಲದಿದ್ದರೆ ಇಂತಹುದೇ ಹಲವು ವಿಧದ ಲೆಕ್ಕವನ್ನು ನಂಬಿ ಕಂಪೆನಿ-ಬ್ಯಾಂಕ್‌ಗಳು ಸಹಸ್ರ ಕೋಟಿ ರೂಪಾಯಿ ಹೂಡಿಕೆ ಮಾಡೋದೇಕೆ? ಲೆಕ್ಕವನ್ನು ನಂಬಿ ಮುನ್ನಡೆದರೆ ಲಾಭ ಸಿಗೋದು ಗ್ಯಾರಂಟಿ. ಆದರೆ, ಹೃದಯದ ಗತಿಯೇನು? ಅದನ್ನು ಲೆಕ್ಕದಿಂದ ಹೊರಗಿಡಬೇಕಾಗುತ್ತದೆ!
ಟರ್ನಿಂಗ್ ಪೀಟರ್‌ನ ಕೋರಿಕೆಯನ್ನು ಮನ್ನಿಸಲಿಲ್ಲ. ಆ ಪ್ರಸಂಗವನ್ನು ಅಲ್ಲಿಯೇ ನಿಲ್ಲಿಸಿ ಚಲನಚಿತ್ರ ಮುಂದುವರೆಯುತ್ತದೆ. ತನ್ನ ಲೆಕ್ಕಾಚಾರದಿಂದ ಆ ದೀರ್ಘ ಯುದ್ಧವನ್ನು ಎರಡು ವರ್ಷ ಬೇಗ ಮುಗಿಯುವಂತೆ ಮಾಡಿ, ಹಲವು ಜನರ ಪ್ರಾಣ ಉಳಿಸಿದ ಶ್ರೇಯಸ್ಸು ಟರ್ನಿಂಗ್‌ಗೆ ಇದೆ. ಹಲವರ ಪ್ರಾಣ ಉಳಿಸಲು ಕೆಲವರ ಪ್ರಾಣ ತೆಗೆಯೋದು ಲೆಕ್ಕ ಬಲ್ಲವರಿಗೆ ಸಾಧನೆ, ಸಾಹಿತಿಗೆ ಗೊಂದಲ-ದುರಂತ! ಸರಿ-ತಪ್ಪು ಅಂತ ಬೇರೆ ಬೇರೆ ಮಾಡಿ ಇಡೋದು ಕಷ್ಟ. ಬುದ್ಧಿ ಹಾಗೂ ಹೃದಯದ ನಡುವಿನ ತಿಕ್ಕಾಟಕ್ಕೆ ಎದೆಗೊಡುವ ಸಮಯ ಹಾಗೂ ತಾಳ್ಮೆ ಇದ್ದರೆ ಲೆಕ್ಕದಲ್ಲಿ ಸಾಹಿತ್ಯದ ಮಾನವೀಯತೆ ಬಂದೀತು, ಬರವಣಿಗೆಯಲ್ಲಿ ಲೆಕ್ಕದ ನಿಖರತೆ ಬಂದೀತು!
(ಲೇಖಕಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ. ಎಸ್ಸಿ. ವಿದ್ಯಾರ್ಥಿನಿ)
-ಯಶಸ್ವಿನಿ ಕದ್ರಿ