Advertisement

15 ದಿನದಲ್ಲಿ ಅರ್ಹರಿಗೆ ಉಚಿತ ನಿವೇಶನ   

07:36 AM Feb 26, 2019 | |

ಮಾಲೂರು: ಪಟ್ಟಣದ  ವಸತಿ ರಹಿತರಿಗೆ ಮನೆಗಳನ್ನು ನೀಡುವ ಉದ್ದೇಶದಿಂದ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರ ಮಂಜೂರು ಮಾಡಿರುವ 16 ಎಕರೆ ಭೂಮಿ ಜೊತೆಗೆ ಪುರಸಭೆಯು ಈ ಹಿಂದೆ ಖರೀದಿ ಮಾಡಿರುವ ಭೂಮಿಯಲ್ಲಿ ಮುಂದಿನ 15 ದಿನಗಳ ಒಳಗಾಗಿ ನಿವೇಶನಗಳನ್ನು ಅಭಿವೃದ್ಧಿಪಡಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.

Advertisement

ಪಟ್ಟಣದ ದೊಡ್ಡಕಡತೂರು ಗ್ರಾಮದ ಸರ್ವೆ ನಂಬರ್‌ 94ರಲ್ಲಿ ಆಶ್ರಯ ಬಡಾವಣೆಗಾಗಿ ಸರ್ಕಾರ ಮಂಜೂರು ಮಾಡಿರುವ 6.20 ಎಕರೆ ಪ್ರದೇಶದ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು. ಮಾಲೂರು ಪಟ್ಟಣದ ಜತೆಗೆ ಕಳೆದ 16ವರ್ಷಗಳ ಹಿಂದೆ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿ ಪ್ರಥಮ ಹಂತವಾಗಿ 5ಸಾವಿರ ಮತ್ತು 2ನೇ ಹಂತವಾಗಿ 35ಸಾವಿರ ರೂ,ಗಳನ್ನು ಪುರಸಭೆಗೆ ಪಾವತಿಸಿದ್ದರು.

ಮೊದಲ ಕಂತಿನಲ್ಲಿ ವಸೂಲಿ ಮಾಡಿದ್ದ ಹಣದ ಪೈಕಿ ಪಟ್ಟಣದ ಮಾರುತಿ ಬಡಾವಣೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಮತ್ತು ರೈಲ್ವೆ ನಿಲ್ದಾಣದ ಶುಭಾಷ್‌ನಗರಕ್ಕೆ ಹೊಂದಿಕೊಂಡಿರುವ ಸ್ಥಳ ಗುರುತಿಸಿ ಒಟ್ಟು 15 ಎಕರೆ ಭೂಮಿ ಖರೀದಿಸಿ 647 ನಿವೇಶನ ಅಭಿವೃದ್ಧಿ ಪಡಿಸಿತ್ತು.

ಇದೇ ಭೂಮಿಯಲ್ಲಿ 2.5 ಎಕರೆ ಭೂಮಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಿದ್ದ ಪುರಸಭೆ, ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದ ಒಟ್ಟು 1320 ಮಂದಿಗೆ ನಿವೇಶನ ನೀಡಲು ವಿಫ‌ಲವಾಗಿದ್ದರು. ಹೀಗಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು ಎಂದರು. ಈ ಕುರಿತು ಅನೇಕ ಹೋರಾಟಗಳು ನಡೆದು ಕೆಲವು ರಾಜಕೀಯ ಪಕ್ಷಗಳು ವಿಳಂಬವಾಗಿರುವ ಇದೇ ಯೋಜನೆಯನ್ನು ರಾಜಕೀಯ ದಾಳವನ್ನಾಗಿಸಿಕೊಂಡು ಹೋರಾಟ ರೂಪಿಸಿದ್ದವು ಎಂದು ತಿಳಿಸಿದರು. 

ಪಟ್ಟಣದ ಸಾರ್ವಜನಿಕರು ಕಳೆದ 16ವರ್ಷಗಳ ಹಿಂದೆ ಸಲ್ಲಿಸಿದ್ದ 5ಸಾವಿರ ಮತ್ತು ಎರಡನೇ ಹಂತದಲ್ಲಿ ಸಲ್ಲಿಸಿದ್ದ 35 ಸಾವಿರ ರೂ.,ಗಳನ್ನು ಪಾವತಿದಾರರಿಗೆ ವಾಪಸು ನೀಡುವ ಮೂಲಕ ಅರ್ಹರಿಗೆ ಉಚಿತವಾಗಿ ನಿವೇಶನ ನೀಡುವುದಾಗಿ ತಿಳಿಸಿದರು.

Advertisement

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ವಸತಿ ಖಾತೆ ಸಚಿವರಾಗಿ ನೆರೆ ಹೊಸಕೋಟೆ ಕ್ಷೇತ್ರದ ಶಾಸಕರಾಗಿರುವ ಎಂಟಿಬಿ ನಾಗರಾಜು ಅವರು ವಹಿಸಿಕೊಂಡಿರುವುದರಿಂದ ನಿವೇಶನದ ಜೊತೆಗೆ ಪ್ರತಿಯೊಬ್ಬ ಅರ್ಹರಿಗೆ ಉಚಿತವಾಗಿ ಮನೆ ನಿರ್ಮಾಣಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.

ಸ್ಥಳದಲ್ಲಿ ತಹಶೀಲ್ದಾರ್‌ ವಿ.ನಾಗರಾಜು ಸರ್ವೆ ಇಲಾಖೆ ಎಡಿಎಲ್‌ ಅರ್‌ ರಮೇಶ್‌, ಪುರಸಭಾ ಅಧ್ಯಕ್ಷ ಸಿ.ಪಿ.ನಾಗರಾಜು, ಉಪಾಧ್ಯಕ್ಷೆ ಗೀತಾರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಲಕ್ಷ್ಮಿ,  ಸದಸ್ಯರಾದ ಸಿ.ಲಕ್ಷ್ಮಿನಾರಾಯಣ್‌, ಹನುಮಂತರೆಡ್ಡಿ, ಸಿ.ಪಿ.ವೆಂಕಟೇಶ್‌,  ಶ್ರೀವಳ್ಳಿ ರಮೇಶ್‌, ಗೀತಾವೆಂಕಟೇಶ್‌, ಪಚ್ಚಪ್ಪ, ಹುಂಗೇನಹಳ್ಳಿ ಗ್ರಾಪಂ ಅಧ್ಯಕ್ಷ ಲಿಂಗಾಪುರ ಕೃಷ್ಣಪ್ಪ,(ಕಿಟ್ಟಿ),ಮುಖಂಡರಾದ ಬೋರ್‌ರಮೇಶ್‌, ಅಶ್ವತ್ಥರೆಡ್ಡಿ ಇದ್ದರು.

16 ಎಕರೆ ಭೂಮಿ ಮಂಜೂರು: ಸಂಘಟನೆಗಳ ಹೋರಾಟದ ವೇಳೆ ಸ್ಥಳಕ್ಕೆ ಧಾವಿಸಿದ ಅಂದಿನ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಭೂಮಿ ಗುರುತಿಸಿ ಆಶ್ರಯ ನಿವೇಶನ ವಿತರಿಸುವ ಕ್ರಮವಹಿಸುವುದಾಗಿ ಭರವಸೆ ನೀಡಿ ಪ್ರಥಮ ಹಂತವಾಗಿ ಮಾಲೂರು ಪಟ್ಟಣದ ಸರ್ವೆ ನಂಬರ್‌ 112ರಲ್ಲಿ 3 ಎಕರೆ ಭೂಮಿ ಗುರುತು ಮಾಡಿದ್ದರು.

ಪ್ರಕ್ರಿಯೆ ಮುಂದುವರೆದು ಪ್ರಸ್ತುತ ದೊಡ್ಡಕಡತೂರು ಗ್ರಾಮದ ಸರ್ವೆ ನಂಬರ್‌ 94ರಲ್ಲಿ 6.20 ಎಕರೆ, ಲಿಂಗಾಪುರದ ಸರ್ವೆ ನಂಬರ್‌ 49ರಲ್ಲಿ 5.20 ಎಕರೆ, ಚವ್ವೆನಹಳ್ಳಿ ಸರ್ವೆನಂಬರ್‌10ರಲ್ಲಿ 1ಎಕರೆ ಭೂಮಿ ಸೇರಿ 16 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಭೂಮಿಯನ್ನು ನಿವೇಶನಗಳಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಆರಂಭವಾಗಿದ್ದು ಮುಂದಿನ 15ದಿನಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಅರ್ಹರಿಗೆ ಉಚಿತವಾಗಿ ನೀಡುವುದಾಗಿ ಶಾಸಕ ನಂಜೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next