Advertisement

ಬಡವರಿಗೆ ಉಚಿತ ಪಡಿತರ; ಕೇಂದ್ರ ಸರ್ಕಾರದ ಹೊಸ ವರ್ಷದ ಕೊಡುಗೆ

10:50 PM Dec 23, 2022 | Team Udayavani |

ನವದೆಹಲಿ:ಹೊಸ ವರ್ಷದ ಉಡುಗೊರೆ ಎಂಬಂತೆ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ, ದೇಶದ ಅತ್ಯಂತ ಕಡು ಬಡವರಿಗೆ ಉಚಿತ ಪಡಿತರ ನೀಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

Advertisement

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್ಎಸ್‌ಎ)ಯ ಅನ್ವಯ ಈ ಯೋಜನೆ ಪ್ರಕಟವಾಗಿದ್ದು, ಇದರಡಿ ದೇಶದ 81.35 ಕೋಟಿ ಮಂದಿ ಆಹಾರ ಧಾನ್ಯಕ್ಕೆ ಒಂದು ರೂಪಾಯಿಯನ್ನೂ ಕೊಡಬೇಕಾಗಿಲ್ಲ. ಈವರೆಗೆ ರಿಯಾಯಿತಿ ದರದಲ್ಲಿ ಆಹಾರಧಾನ್ಯವನ್ನು ನೀಡಲಾಗುತಿತ್ತು.

ಈ ಮಹತ್ವದ ನಿರ್ಧಾರವನ್ನು ಶುಕ್ರವಾರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದಕ್ಕಾಗಿ 2 ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ ಮತ್ತು ಅದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಆಹಾರ ಸಚಿವ ಪಿಯೂಷ್‌ ಗೋಯಲ್‌ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.

ಇದೇ ವೇಳೆ, 2020ರ ಏಪ್ರಿಲ್‌ನಿಂದ ಶುರು ಮಾಡಲಾಗಿದ್ದ ಪ್ರಧಾನಮಂತ್ರಿ ಗರೀಬ್‌ ಅನ್ನ ಕಲ್ಯಾಣ್‌ ಯೋಜನೆಯನ್ನು ಡಿ.31ರ ಬಳಿಕ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಸದ್ಯ ಆಹಾರ ಭದ್ರತಾ ಕಾಯ್ದೆಯ ಅಡಿ ಪ್ರತಿ ಕುಟುಂಬಕ್ಕೆ 5 ಕೆಜಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಪ್ರತಿ ಕೆಜಿ ಅಕ್ಕಿಗೆ 2 ರೂ.ಗಳಿಂದ 3 ರೂ. ಮತ್ತು ಪ್ರತಿ ಕೆಜಿ ಗೋಧಿಗೆ 2 ರೂ ವಿಧಿಸಲಾಗುತ್ತಿದೆ.

Advertisement

ಕೊಬ್ಬರಿಗೆ ಬೆಂಬಲ ಬೆಲೆ:
ಮುಂದಿನ ವರ್ಷಕ್ಕೆ ಸಂಬಂಧಿಸಿದಂತೆ ಪ್ರತಿ ಕ್ವಿಂಟಲ್‌ ಸಾಮಾನ್ಯ ಕೊಬ್ಬರಿಗೆ 270 ರೂ. ಬೆಂಬಲ ಬೆಲೆ ಪರಿಷ್ಕರಿಸಿದೆ. ಇದರಿಂದಾಗಿ ಪ್ರತಿ ಕ್ವಿಂಟಲ್‌ಗೆ 10, 860 ರೂ., ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ 750 ರೂ. ಬೆಲೆ ಪರಿಷ್ಕರಿಸಿದೆ. ಹೀಗಾಗಿ, ಬೆಂಬಲ ಬೆಲೆ 11,750 ರೂ. ಗೆ ಹೆಚ್ಚಲಿದೆ

ಪಿಂಚಣಿ ಪರಿಷ್ಕರಣೆ:
“ಸಮಾನ ಶ್ರೇಣಿ; ಸಮಾನ ಪಿಂಚಣಿ’ ಯೋಜನೆಯ ಅನ್ವಯ ದೇಶದ ಸೇನಾಪಡೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನೀಡುವ ಪಿಂಚಣಿ ಮೊತ್ತ ಪರಿಷ್ಕರಿಸಲಾಗಿದೆ.

2019ರ ಜು.1ರಿಂದ ಈ ವರ್ಷದ ಜು.30ರ ವರೆಗೆ ಬಾಕಿ ಇರುವ 23, 638 ಕೋಟಿ ರೂ. ಬಾಕಿ ಮೊತ್ತ ನೀಡಲೂ ತೀರ್ಮಾನಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 8,450 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಇದರಿಂದಾಗಿ ಒಟ್ಟು 25.13 ಲಕ್ಷ ಮಂದಿ ನಿವೃತ್ತ ಯೋಧರು, ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು.

ನಿವೃತ್ತರಾಗಿರುವ ಯೋಧರಿಗೆ ಪ್ರತಿ ತಿಂಗಳು 20, 394 ರೂ. ನಾಯ್ಕ ಶ್ರೇಣಿಗೆ 21, 930 ರೂ., ಹವಾಲ್ದಾರ್‌ಗೆ 22, 294 ರೂ. ಬ್ರಿಗೆಡಿಯರ್‌ ಶ್ರೇಣಿಯ ನಿವೃತ್ತ ಅಧಿಕಾರಿಗೆ 1,12, 596 ರೂ. ಪಿಂಚಣಿ ಸಿಗಲಿದ್ದು, ಜತೆಗೆ ಹಿಂಬಾಕಿ ಮೊತ್ತವೂ ಸಿಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next