Advertisement

ಉಚಿತ ಸಸಿ ವಿತರಣೆ ಯೋಜನೆಗೆ ಬ್ರೇಕ್‌?

07:23 AM Jan 27, 2019 | |

ಬೆಂಗಳೂರು: ಪ್ರಸಕ್ತ ಸಾಲಿನಿಂದ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸದಿರಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸಾಧ್ಯವಾದಷ್ಟು ಪಾಲಿಕೆಯಿಂದಲೇ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.

Advertisement

ಬೆಂಗಳೂರನ್ನು ಹಸಿರಾಗಿಸುವ ಉದ್ದೇಶದಿಂದ 2016-17ನೇ ಸಾಲಿನಲ್ಲಿ ಸಾರ್ವಜನಿಕರಿಗೆ 10 ಲಕ್ಷ ಸಸಿಗಳ ವಿತರಿಸುವ ಮಹತ್ತರ ಕಾರ್ಯಕ್ಕೆ ಪಾಲಿಕೆ ಮುಂದಾಗಿತ್ತು. ಅದಕ್ಕಾಗಿಯೇ ‘ಬಿಬಿಎಂಪಿ ಗ್ರೀನ್‌’ ಎಂಬ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಲಾಗಿತ್ತು. ಜತೆಗೆ ಜನರು ಲಕ್ಷಾಂತರ ಗಿಡಗಳನ್ನು ಪಡೆದಿದ್ದರೂ, ಅವುಗಳನ್ನು ಎಲ್ಲಿ ನೆಟ್ಟಿದ್ದಾರೆಂಬ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.

ಇದರೊಂದಿಗೆ ನಿರೀಕ್ಷಿತ ಮಟ್ಟದಲ್ಲಿ ಜನರಿಂದ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಬೆಳೆಸಿದ 5 ಲಕ್ಷಕ್ಕೂ ಹೆಚ್ಚಿನ ಗಿಡಗಳನ್ನು ನರ್ಸರಿಗಳಲ್ಲಿಯೇ ಉಳಿಯುವಂತಾಗಿತ್ತು. ಕನಿಷ್ಠ ಪಾಲಿಕೆಯ ಅಧಿಕಾರಿಗಳು ಸಹ ಸಾರ್ವಜನಿಕರು ಗಿಡಗಳನ್ನು ಎಲ್ಲಿ ನೆಟ್ಟಿದ್ದಾರೆಂದು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ವಿತರಣೆ ಮಾಡಿರುವಂತಹ 3.50 ಲಕ್ಷ ಸಸಿಗಳನ್ನು ಎಲ್ಲಿ ನಡೆಸಲಾಗಿದೆ. ಅವುಗಳನ್ನು ಪೋಷಿಸಲಾಗಿದೆಯೇ? ಅವುಗಳ ಸ್ಥಿತಿಗತಿಯ ಮಾಹಿತಿ ಪಾಲಿಕೆಯ ಬಳಿಯಿಲ್ಲ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ಸಾರ್ವಜನಿಕರಿಂದ ಸಸಿಗಳನ್ನು ನೀಡದಿರಲು, ಒಂದೊಮ್ಮೆ ಸಾರ್ವಜನಿಕರು ಗಿಡಗಳಿಗೆ ಮನವಿ ಸಲ್ಲಿಸಿದರೆ ಸಂಪೂರ್ಣ ಮಾಹಿತಿ ಪಡೆದು ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅದರಂತೆ ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಿಂದ 2.50 ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದ್ದು, ಈ ಬಾರಿ ಸಂಪೂರ್ಣವಾಗಿ ಪಾಲಿಕೆಯಿಂದಲೇ ಗಿಡಗಳನ್ನು ನೆಡಲು ಚಿಂತಿಸಲಾಗಿದೆ. ಅದರಂತೆ ಗಿಡಗಳನ್ನು ಬೆಳೆಸಿ, ನೆಟ್ಟು ಮೂರು ವರ್ಷ ಪೋಷಿಸಲು 50 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದು, ಈ ಕುರಿತಂತೆ ಈಗಾಗಲೇ ವಿಶೇಷ ಆಯುಕ್ತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

ದೊರೆಯದ ಸ್ಪಂದನೆ: ಕಳೆದ ವರ್ಷ ಮೇ 21ರಂದು ಚಿತ್ರನಟ ಯಶ್‌ ಅವರು ಬಿಬಿಎಂಪಿ ಗ್ರೀನ್‌ ಆ್ಯಪ್‌ಗೆ ಚಾಲನೆ ನೀಡುವ ಮೂಲಕ ಗಿಡ ನೆಡಲು ಸಾರ್ವಜನಿಕರು ಮುಂದಾಗಬೇಕೆಂದು ಜಾಗೃತಿ ಮೂಡಿಸಿದ್ದರು. ಆರಂಭದಲ್ಲಿ ಸಸಿಗಳಿಗಾಗಿ ನಾಗರಿಕರಿಂದ ಮನವಿಗಳು ಬಂದರೂ, ನಂತರದಲ್ಲಿ ತಾವು ಮನವಿ ಮಾಡಿದ ಗಿಡಗಳನ್ನು ಪಡೆಯಲು ಜನರು ಮುಂದಾಗಲಿಲ್ಲ. ಸುಮಾರು ಒಂದು ಕೋಟಿಗೂ ಅಧಿಕ ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ಸಸಿಗಳಿಗಾಗಿ ಪಾಲಿಕೆಯ ಆ್ಯಪ್‌ ಮೂಲಕ ಮನವಿ ಸಲ್ಲಿಸಿದವರ ಸಂಖ್ಯೆ 10 ಸಾವಿರ ಸಹ ಮೀರಲಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಗ್ರೀನ್‌ ಆ್ಯಪ್‌ನ್ನು ಸ್ಥಗಿತಗೊಳಿಸಿದ್ದರು. ಆನಂತರದಲ್ಲಿ ಮೇಯರ್‌ ಮರುಚಾಲನೆ ನೀಡುವುದಾಗಿ ತಿಳಿಸಿದರೂ ಪ್ರಯೋಜನವಾಗಿಲ್ಲ.

Advertisement

ಅಂಕಿ-ಅಂಶಗಳ ಬಗ್ಗೆ ಅನುಮಾನ!?: 2016-17ನೇ ಸಾಲಿನಲ್ಲಿ ಸಸಿಗಳಿಗಾಗಿ ಪಾಲಿಕೆಗೆ 9,670 ಜನರು ಮಾತ್ರ ಮನವಿ ಸಲ್ಲಿಸಿ ಒಟ್ಟು 2,68,873 ಸಸಿಗಳನ್ನು ಪಡೆದಿದ್ದರು. ಇನ್ನು ಬಿಬಿಎಂಪಿ ಪಾಲಿಕೆ ಸದಸ್ಯರು 90 ಸಾವಿರ ಸಸಿಗಳನ್ನು ಪಡೆದಿದ್ದು, ಪಾಲಿಕೆಯಿಂದ ನಗರದ ವಿವಿಧೆಡೆ 1 ಲಕ್ಷ ಗಿಡಗಳನ್ನು ನೆಡಲಾಗಿದೆ. ಅದರಂತೆ ಒಟ್ಟು 4.58 ಲಕ್ಷ ಸಸಿಗಳನ್ನು ವಿತರಿಸಿ, 5.42 ಲಕ್ಷ ಸಸಿಗಳು ಪಾಲಿಕೆಯ ನರ್ಸರಿಗಳಲ್ಲಿಯೇ ಇರಿಸಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ, ಸದ್ಯದ ಮಾಹಿತಿಯಂತೆ ನರ್ಸರಿಗಳಲ್ಲಿ 3 ಲಕ್ಷ ಸಸಿಗಳಿರುವುದು ತಿಳಿದುಬಂದಿದ್ದು, ಉಳಿದ 2.52 ಲಕ್ಷ ಸಸಿಗಳ ಮಾಹಿತಿಯ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next