ದಾವೋಸ್/ವಾಷಿಂಗ್ಟನ್: “ಅಮೆರಿಕವೇ ಮೊದಲು ಎಂದರೆ ಅಮೆರಿಕಕ್ಕೆ ಮಾತ್ರವೇ ಅವಕಾಶ ಅಲ್ಲ. ಅಲ್ಲಿ ಇತರರಿಗೂ ವ್ಯಾಪಾರ, ಉದ್ಯೋಗಕ್ಕೆ ಅವಕಾಶಗಳು ಇವೆ. ಮುಕ್ತ ವ್ಯಾಪಾರಕ್ಕೂ ನಮ್ಮ ಬೆಂಬಲವಿದೆ. ಉದ್ಯೋಗ ನಡೆಸಲೂ ಮುಕ್ತ ವಾತಾವರಣ ಇದೆ. ವಿಶ್ವದ ಎಲ್ಲರಿಗೂ ಅವಕಾಶಗಳು ಸಿಗುವಂತಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ (ಡಬ್ಲೂéಇಎಫ್)ವನ್ನು ಉದ್ದೇಶಿಸಿ ಶುಕ್ರವಾರ ಅವರು ಮಾತನಾಡಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶೃಂಗದಲ್ಲಿ ಭಾಷಣ ಮಾಡಿದ್ದ ವೇಳೆ ವಿಶ್ವದ ರಾಷ್ಟ್ರಗಳು ಅನುಸರಿಸುತ್ತಿರುವ ಸ್ವರಕ್ಷಣಾ ಆರ್ಥಿಕ ನೀತಿ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಇದೇ ವೇಳೆ, ಅಫ್ಘಾನಿಸ್ತಾನ ಮತ್ತೆ ಉಗ್ರರ ತಾಣವಾಗಲು ಬಿಡುವುದಿಲ್ಲ ಎಂದು ಹೇಳಿದ ಟ್ರಂಪ್, ವಿಶ್ವದ ಯಾವುದೇ ಭಾಗದಲ್ಲಿ ಉಗ್ರವಾದದ ವಿರುದ್ಧ ಹೋರಾಟ ನಡೆಸಲು ಅಮೆರಿಕ ಸಿದ್ಧ. ಅಮೆರಿಕ ಮತ್ತು ಅಲ್ಲಿನ ಪ್ರಜೆಗಳ ಹಿತಾಸಕ್ತಿ ಕಾಪಾಡಲೆಂದೇ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
1990ರ ಬಳಿಕ 2ನೇ ಅಧ್ಯಕ್ಷ: ಬಿಲ್ ಕ್ಲಿಂಟನ್ 1990ರ ದಶಕದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದಾಗ ದಾವೋಸ್‌ಗೆ ತೆರಳಿ ಶೃಂಗದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಹಾಲಿ ಅಧ್ಯಕ್ಷ ಟ್ರಂಪ್ ಡಬ್ಲೂéಇಎಫ್ನಲ್ಲಿ ಭಾಗವಹಿಸುತ್ತಿದ್ದಾರೆ.
ಲಾಟರಿ ಮಾದರಿ ಇಲ್ಲ?: ಅಮೆರಿಕದಲ್ಲಿನ ಭಾರತೀಯರಿಗೆ ಮತ್ತು ಅಲ್ಲಿಗೆ ಹೋಗಬೇಕೆಂದು ಆಸೆ ಇರಿಸಿಕೊಂಡಿರುವ ಭಾರತೀಯರಿಗೆ ಖುಷಿ ಕೊಡುವ ಸುದ್ದಿ ಟ್ರಂಪ್ ಆಡಳಿತದಿಂದ ಹೊರ ಬಿದ್ದಿದೆ. ಸದ್ಯ ಜಾರಿಯಲ್ಲಿರುವ ವೀಸಾ ಲಾಟರಿಯನ್ನು ಕೊನೆಗೊಳಿಸಿ, ಕೌಶಲ್ಯ ಆಧರಿತ ವೀಸಾ ವ್ಯವಸ್ಥೆ ಜಾರಿಯ ಬಗ್ಗೆ ಅಲ್ಲಿನ ಸರ್ಕಾರದಿಂದ ಒಲವು ವ್ಯಕ್ತವಾಗಿದೆ. ಇದರಿಂದಾಗಿ ಅಮೆರಿಕ ವೀಸಾ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡುವ ಬಗ್ಗೆ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಒಂದು ವೇಳೆ ವಿಧೇಯಕ ಅಲ್ಲಿನ ಸಂಸತ್‌ನಲ್ಲಿ ಅನುಮೋದನೆಗೊಂಡು ಅಂಗೀಕಾರಗೊಂಡರೆ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಭಾರತೀಯರಿಗೆ ಅನುಕೂಲವಾಗಲಿದೆ.
ಹೊಸ ವಿಧೇಯಕ ಮಂಡನೆ: ರಿಪಬ್ಲಿಕನ್ ಪಕ್ಷದ ಇಬ್ಬರು ಸಂಸದರು ವಾರ್ಷಿಕವಾಗಿ ನೀಡಲಾಗುವ ಎಚ್-1ಬಿ ವೀಸಾ ಹೆಚ್ಚಳ ಮಾಡುವುದರ ಬಗ್ಗೆ ವಿಧೇಯಕವನ್ನು ಅಮೆರಿಕ ಸಂಸತ್‌ನಲ್ಲಿ ಮಂಡಿಸಲಾಗಿದೆ. ಒರ್ರಿನ್ ಹ್ಯಾಚ್ ಮತ್ತು ಜೆಫ್ ಫ್ಲೇಕ್ ಎಂಬ ಇಬ್ಬರು ಸಂಸದರು ಅದನ್ನು ಮಂಡಿಸಿದ್ದಾರೆ. ಅದು ಅಂಗೀಕಾರವಾದರೆ ಪ್ರತಿ ಹಣಕಾಸು ವರ್ಷದಲ್ಲಿ 1,95,000 ಎಚ್-1ಬಿ ವೀಸಾಗಳನ್ನು ನೀಡಲು ಅನುಕೂಲವಾಗುತ್ತದೆ. ಈ ಕ್ರಮವೂ ಭಾರತೀಯ ಐಟಿ ಪರಿಣತರಿಗೆ ನೆರವಾಗಲಿದೆ.