.
ವಿಧಾನ ಪರಿಷತ್ತು: ರಾಜ್ಯದ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು 52 ಸಾವಿರ ಕೋಟಿ ರೂ. ಅಗತ್ಯವಿದೆ. ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಮುಕ್ತ ಮನಸ್ಸು ಇಟ್ಟುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ.ಪಾಟೀಲ್ ಹೇಳಿದ್ದಾರೆ.
ನಿಯಮ 72ರಡಿ ಬಿಜೆಪಿ ಸದಸ್ಯ ಮಹಂತೇಶ ಪಾಟೀಲ್ ಕವಟಗಿಮಠ ಪ್ರಸ್ತಾಪಿಸಿದ ವಿಷಯಕ್ಕೆ ಪೂರಕವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಇಲಾಖೆಯಿಂದ ನಿರ್ದೇಶನ ನೀಡಿದ್ದು ಸರಿಯಲ್ಲ ಎಂದಾಗ ಸಚಿವರು ಈ ಉತ್ತರ ನೀಡಿದರು.
ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ನಾವು ನಿರ್ದೇಶನ ನೀಡಿಲ್ಲ. ರಾಷ್ಟ್ರೀಯ ಕುಡಿಯುವ ನೀರು ಯೋಜನೆಯಡಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನವಾಗಿದೆ. ಕೆಂದ್ರ ಸರ್ಕಾರ ಈ ರೀತಿಯ ನಿರ್ಬಂಧ ಹಾಕುವುದು ಒಳ್ಳೆಯದಲ್ಲ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ನೀಡಲು ಕೇಂದ್ರ ಸರ್ಕಾರ ಮುಕ್ತವಾಗಿರುವಂತೆ ಕುಡಿಯುವ ನೀರಿನ ಯೋಜನೆಗೂ ಮುಕ್ತ ಸಹಾಯ ಹಸ್ತ ನೀಡಬೇಕು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯದ 27 ಜಿಲ್ಲೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಲಭ್ಯವಿರುವ ಭೂಮೇಲ್ಮೆ„ ಜಲಮೂಲಗಳಾದ ನದಿ, ಜಲಾಶಯ, ನೀರಾವರಿ ಇಲಾಖೆ ಕೆರೆಗಳು ಸೇರಿ ಲಭ್ಯವಿರುವ ಇತರೆ ಜಲಮೂಲಗಳನ್ನು ಆಧರಿಸಿ ರೂಪಿಸಲಾಗಿದೆ. ಈವರೆಗೆ 10,500 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇದುವರೆಗೆ 544 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 409 ಯೋಜನೆಗಳನ್ನು ಪೂರ್ಣಗೊಳಿಸ ಲಾಗಿದೆ. ಪ್ರಸ್ತುತ ಸರ್ಕಾರದಲ್ಲಿ 236 ಯೋಜನೆಗಳನ್ನು ಪೂರ್ಣಗೊಳಿಸಿ 3,426 ಜನಸವತಿಗಳ 49.58 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು
ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 65 ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರಿಂದ 1,909 ಜನವಸತಿಗಳ 29.67 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸಲು ಯೋಜಿಸಲಾಗಿದೆ. 98 ಯೋಜನೆಗಳು ಪ್ರಗತಿಯಲ್ಲಿವೆ. 19 ಯೋಜನೆಗಳು ಟೆಂಡರ್ ಪ್ರಕ್ರಿಯೆಲ್ಲಿವೆ ಎಂದು ಹೇಳಿದರು.