Advertisement

ಸುವರ್ಣ ಪರ್ವದಲ್ಲಿ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ

01:10 AM Apr 27, 2022 | Team Udayavani |

ಬೆಳ್ತಂಗಡಿ: ಸಾಂಸಾರಿಕ ಸುಖಕ್ಕೆ ಮುಖ್ಯವಾ ದುದು ಅನುಬಂಧವೇ ಹೊರತುದುಂದು ವೆಚ್ಚದ ಅಂಧಾನುಕರಣೆಯಲ್ಲ. ಸಂಪ್ರ ದಾಯ ಬದ್ಧ ವಿವಾಹಕ್ಕೆ ಹೆಚ್ಚು ಖರ್ಚು ತಗಲುವುದಿಲ್ಲ ಎಂಬ ಸಾಂಸ್ಕೃತಿಕ ಪಾವಿತ್ರ್ಯತೆಯ ಶ್ರೀಮಂತ ಕಲ್ಪನೆ ಹುಟ್ಟಿದ್ದು ನಾಡಿನ ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಂದ.

Advertisement

ಡಾ| ವೀರೇಂದ್ರ ಹೆಗ್ಗಡೆ ಅವರು 1972ರಲ್ಲಿ ತಮ್ಮ ನೌಕರರಿಗೆ ಎಂದು ಆರಂಭಿಸಿದ ಉಚಿತ ಸಾಮೂಹಿಕ ವಿವಾಹ ಯೋಜನೆಯು ದುಂದುವೆಚ್ಚದ ಅಂಧಾನುಕರಣೆ ಸರಿಸಿ ಇಂದು ಸುವರ್ಣ ಪಥದಲ್ಲಿದೆ.

12,393 ಜೋಡಿ ವಿವಾಹ
1972ರ ಮೊದಲ ವಿವಾಹ ಸಮಾರಂಭದಲ್ಲಿ 88 ವಧೂ ವರರು ದಾಂಪತ್ಯಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ವರ್ಷದ ವರೆಗೆ 12,393 ಜೋಡಿ ವಿವಾಹವಾಗಿದ್ದು, ಈ ವರೆಗೆ ಒಂದೇ ಒಂದು ವಿಚ್ಛೇದನ ಆಗದಿರುವುದು ಈ ಸರಳ ವಿವಾಹದ ಹೆಗ್ಗಳಿಕೆ.

ಅಂತರ್‌ ಜಾತೀಯ ಮತ್ತು ಪ್ರೇಮ ವಿವಾಹಕ್ಕೂ ಹಿರಿಯರ ಒಪ್ಪಿಗೆಯೊಂದಿಗೆ ಅವಕಾಶ ನೀಡಲಾಗುತ್ತದೆ. ಈವರೆಗೆ ದಕ್ಷಿಣ ಭಾರತದ 4 ರಾಜ್ಯಗಳಿಂದ ಬಂದವರಿಗೆ ಇಲ್ಲಿ ವಿವಾಹವಾಗಿದೆ.

2020ರಲ್ಲಿ ಕೋವಿಡ್‌ನಿಂದ ಸಮಾರಂಭ ನಡೆದಿರಲಿಲ್ಲ. ಆದರೆ 2021ರಲ್ಲಿ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ 23 ಜಿಲ್ಲೆಗಳಿಗೆ ಸೇರಿದ ವಧು-ವರರ ಮನೆಗೆ ಮನೆಗೆ ಮಾಂಗಲ್ಯ, ಸೂತ್ರ, ವಸ್ತ್ರ ಇತ್ಯಾದಿಗಳನ್ನು ಕ್ಷೇತ್ರದಿಂದ ತಲುಪಿಸಿ 131 ಜೋಡಿಗೆ ಅವರ ಮನೆಯಲ್ಲೇ ವಿವಾಹ ನಡೆಸುವ ಮೂಲಕ ಮತ್ತೊಂದು ಕ್ರಾಂತಿಗೆ ಸಾಕ್ಷಿಯಾಗಿತ್ತು.

Advertisement

ಆರ್ಥಿಕ ಅಂಧಾನುಕರಣೆ ಸರಿಸುವ ವಿವಾಹಬಂಧ
ಇಂದು ಎಲ್ಲರೂ ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ನೌಕರರು, ಅಧಿಕಾರಿಗಳು, ಉನ್ನತ ಶಿಕ್ಷಣ ಪಡೆದವರು ಇಲ್ಲಿ ಮದುವೆಯಾಗುತ್ತಿರುವುದು ಸ್ತುತ್ಯರ್ಹ. ಸಾಮೂಹಿಕ ವಿವಾಹದಿಂದಾಗಿ ಅನೇಕ ಕುಟುಂಬಗಳು ಸಾಲದ ಶೂಲದಿಂದ ಪಾರಾಗಿವೆ..
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಇಂದು ಸಾಮೂಹಿಕ ವಿವಾಹ
ಈ ವರ್ಷದ ಸಾಮೂಹಿಕ ವಿವಾಹವು ಎ. 27ರಂದು ಸಂಜೆ 6.30ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದ್ದು, 188 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಚಲನಚಿತ್ರ ನಟ ಗಣೇಶ್‌, ಕಂದಾಯ ಸಚಿವ ಆರ್‌. ಅಶೋಕ್‌ ವಿಶೇಷ ಉಪಸ್ಥಿತರಿರುವರು.

Advertisement

Udayavani is now on Telegram. Click here to join our channel and stay updated with the latest news.

Next