ಶಿವಮೊಗ್ಗ: ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ನಿಮಿತ್ತ 24 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಆದರ್ಶ ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭ ಪೂಜ್ಯರ ಸಮ್ಮುಖದಲ್ಲಿ ನಡೆಯಿತು.
ವಿವಾಹವಾಗಿ 50 ವರ್ಷ ತುಂಬಿದ ಆದರ್ಶ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಅವರ ಮೂಲಕ ನವ ಬದುಕಿಗೆ ಕಾಲಿಟ್ಟ ವಧು-ವರರನ್ನು ಆಶೀರ್ವದಿಸುವ ಈ ಅಪರೂಪದ ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾ ಧಿಪತಿ ಶ್ರೀ ಡಾ| ನಿರ್ಮಲಾನಂದ ಮಹಾಸ್ವಾಮೀಜಿ ಅವರು ವಹಿಸಿದ್ದರು.
ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಆಕರ್ಷಣೆ ಎಂಬಂತೆ ನವ ಬದುಕಿಗೆ ಕಾಲಿಟ್ಟ ದಂಪತಿ ಹಾಗೂ ಹಿರಿಯ ದಂಪತಿಗಳ ಹಬ್ಬವೆಂಬ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಇದೊಂದು ಸುಮಧುರ ಹಾಗೂ ದೈವ ಪ್ರೇರಣೆಯ ಕ್ಷಣ. ಜೀವನದ ಅತ್ಯಂತ ಪವಿತ್ರ ಘಳಿಗೆ. ಶ್ರೀಗಳ ಆಶೀರ್ವಾದಗಳೊಂದಿಗೆ ಹೊಸ ಬದುಕಿಗೆ ಕಾಲಿಟ್ಟ ನವ ದಂಪತಿ ಎಚ್ಚರಿಕೆಯ ಹೆಜ್ಜೆ ಇಟ್ಟು ಬದುಕು ಸಾಗಿಸಿ. ಪೂಜ್ಯರ ಸಮ್ಮುಖದಲ್ಲಿ ತಂದೆ-ತಾಯಿಯರಿಗೆ ಸಮಾನರಾದ ಹಿರಿಯ ದಂಪತಿಗಳನ್ನು ಸತ್ಕರಿಸುವ ಕಾರ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ| ಅಂಜನಪ್ಪ ಮಾತನಾಡಿ, ಕಾಯಿಲೆ ಬಂದ ಮೇಲೆ ತಿದ್ದಿಕೊಳ್ಳುವ ಬದಲು ಕಾಯಿಲೆ ಬರದಂತೆ ನೋಡಿಕೊಳ್ಳುವುದು ಮುಖ್ಯ. ದುಶ್ಚಟಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಡಾ|ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮದ ಕಾರ್ಯದಲ್ಲಿ ಒಂದುಗೂಡಿ ಕೆಲಸ ಮಾಡಿ, ಧರ್ಮಪತ್ನಿ ಹಾಗೂ ದಾಂಪತ್ಯ ಜೀವನ ಎಂದುಕೊಳ್ಳಿ. ಪತಿ ತನ್ನ ವೇತನವನ್ನು ಪತ್ನಿಗೆ ತಿಳಿಸಬೇಕು. ಹಣಕಾಸು ವ್ಯವಹಾರವು ಪರಸ್ಪರ ಇಬ್ಬರಿಗೂ ಗೊತ್ತಿರಬೇಕು. ನಿಜವಾದ ನಂಬಿಕೆ, ಪ್ರೀತಿ ವಿಶ್ವಾಸ ನಿಮ್ಮ ನಡುವೆ ಇರಲಿ. ಹಿರಿಯ ದಂಪತಿಗಳಿಂದ ನಿಮಗೆ ಆಶೀರ್ವಾದ ಸಿಕ್ಕಿದೆ ಸುಖವಾಗಿ ಬಾಳಿ ಎಂದರು.