Advertisement
ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ಜ.8ರಂದು ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ್ದ ನಳಿನಿ ಮತ್ತು ಪ್ರತಿಭಟನೆಯನ್ನು ಸಂಘಟಿಸಿದ್ದ ಮರಿದೇವಯ್ಯ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧರಿಸಿತ್ತು.
Related Articles
Advertisement
ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಿ: ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು. ಪ್ರಕರಣವನ್ನು ಪರಿಶೀಲನೆ ಮಾಡಿದ ಬಳಿಕ ಸತ್ಯ ತಿಳಿಯಲಿದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೇ, ಪ್ರಕರಣ ಇಲ್ಲಿಗೆ ನಿಲ್ಲುತ್ತದೆ. ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ.
ನಂತರ ಸತ್ಯಾಸತ್ಯತೆ ತಿಳಿಯಲಿದೆ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಲ್ಲದಿದ್ದರೆ ಅವರಿಗೆ ನ್ಯಾಯ ಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟದ್ದು. ಮೈಸೂರು ವಕೀಲರು ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದರು.
ಪದದ ಅರ್ಥ, ಹಿನ್ನೆಲೆ ತಿಳಿದುಕೊಳ್ಳಲಿ: ನಳಿನಿ ಪರ ವಕೀಲ ದಾವಣಗೆರೆ ಪಾಷ ಮಾತನಾಡಿ, ನಳಿನಿಗೆ ಈಗಾಗಲೇ ಮಧ್ಯಂತರ ಜಾಮೀನು ಸಿಕ್ಕಿದೆ. ನಿರೀಕ್ಷಣೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದೇವೆ. ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಕಾಲಾವಕಾಶ ಕೇಳಿದ ಹಿನ್ನೆಲೆ ಜ.24 ವಿಚಾರಣೆ ಮುಂದೂಡಲಾಗಿದೆ. ಕೇವಲ ಫ್ರೀ ಕಾಶ್ಮೀರ ಎಂದು ಫಲಕ ಹಿಡಿದರೆ ಅದು ದೇಶದ್ರೋಹವಾಗದು.
ಪದದ ಉದ್ದೇಶ, ಹಿನ್ನೆಲೆಯನ್ನು ಮೊದಲು ತಿಳಿದುಕೊಳ್ಳಬೇಕು ಎಂದು ವಾದ ಮಂಡಿಸಿದ್ದೇವೆ. ಅಲ್ಲದೇ, ಆ ಯುವತಿ ಈಗಾಗಲೇ ತನ್ನ ಉದ್ದೇಶ ಏನಾಗಿತ್ತು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣ ನಿಲ್ಲುವ ಸಾಧ್ಯತೆ ಕಡಿಮೆಯಿದೆ. ಎಫ್ಐಆರ್ ಮಾಡಿದ ಪೊಲೀಸರ ಮೇಲೂ ಕಾನೂನು ಕ್ರಮ ಆಗುವ ಸಾಧ್ಯತೆ ಇರಬಹುದು ಎಂದರು.
ವಕೀಲರ ಸಂಘದಿಂದ ವಕಾಲತ್ತಿಲ್ಲ: ಈ ನಡುವೆ ಮತ್ತೆ ಸಭೆ ನಡೆಸಿರುವ ಮೈಸೂರು ವಕೀಲರ ಸಂಘ ನಳಿನಿ ಪರ ವಕಾಲತ್ತು ವಹಿಸದಂತೆ ಕೈಗೊಂಡಿದ್ದ ನಿರ್ಧಾರಕ್ಕೆ ಬದ್ಧವಾಗಿದೆ. ಸೋಮವಾರ ಮತ್ತೆ ಸರ್ವ ಸದಸ್ಯರ ಸಭೆ ನಡೆಸಿದ ಸಂಘ ವಕಾಲತ್ತು ವಹಿಸದಿರುವ ಸಂಘದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿತು.
ಎಲ್ಲಾ ಹಿತಾಸಕ್ತಿಗಿಂತ ದೇಶದ ಭದ್ರತೆ ಮುಖ್ಯ. ದೇಶದ್ರೋಹದ ಆರೋಪದ ಪರ ವಕಾಲತ್ತು ವಹಿಸುವುದು ಸಂಘದ ಗೌರವಕ್ಕೆ ತರವಲ್ಲ. ಸಂಘದ ಗೌರವ, ಘನತೆಯ ದೃಷ್ಟಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊರಗಿನಿಂದ ಬಂದ ವಕೀಲರಿಗೂ ಈ ಬಗ್ಗೆ ಮನವಿ ಮಾಡಲು ಮೈಸೂರು ಜಿಲ್ಲಾ ವಕೀಲರ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೈಸೂರು ವಕೀಲರಿಂದಲೂ ವಕಾಲತ್ತು: ಒಂದೆಡೆ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಿದ್ದರೆ ಮತ್ತೂಂದೆಡೆ ಮೈಸೂರಿನ ಕೆಲವು ವಕೀಲರು ವಕಾಲತ್ತು ವಹಿಸಿದ್ದಾರೆ. ಸಂಘದ ನಿರ್ಣಯದ ವಿರುದ್ಧವೇ ನಿಂತಿರುವ ಸುಮಾರು 150 ವಕೀಲರು ನಳಿನಿ ಪರ ವಕಾಲತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನಿರ್ಣಯ ಮರುಪರಿಶೀಲನೆ ಮಾಡುವಂತೆ ಮೈಸೂರಿನ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ವಕೀಲೆ ಮಂಜುಳಾ ಮಾನಸ ಮಾತನಾಡಿ, ಸಂಘದ ನಿರ್ಣಯ ಉಲ್ಲಂಘಿಸಿದರೆ ಏನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿಲ್ಲ. ವೃತ್ತಿ ಧರ್ಮದ ದೃಷ್ಟಿಯಿಂದ ವಕಾಲತ್ತು ವಹಿಸಲು ನಿರ್ಧರಿಸಿದ್ದೇವೆ. ನಮ್ಮ ವಿರುದ್ಧ ಕ್ರಮ ಕೈಗೊಂಡರೆ, ಅದು ಏಕಪಕ್ಷಿಯ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.