Advertisement

ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ರಕ್ಷಣೆ: ಟೋಪೆ

07:17 PM May 03, 2020 | Suhan S |

ಜಾಲ್ನಾ, ಮೇ 2: ಮಹಾರಾಷ್ಟ್ರ ಸರಕಾರದ ಆರೋಗ್ಯ ಯೋಜನೆಯ ವ್ಯಾಪ್ತಿಗೆ ರಾಜ್ಯದ ಸಮಸ್ತ ನಾಗರಿಕರನ್ನು ಸೇರಿಸಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಘೋಷಿಸಿದ್ದಾರೆ. ಮಹಾರಾಷ್ಟ್ರವು ತನ್ನ ಜನರಿಗೆ ಉಚಿತ ಮತ್ತು ನಗದುರಹಿತ ವಿಮಾ ರಕ್ಷಣೆಯನ್ನು ಒದಗಿಸುವ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ ಎಂದವರು ಹೇಳಿದ್ದಾರೆ.

Advertisement

ಜಾಲ್ನಾ ದಲ್ಲಿ ಮಹಾರಾಷ್ಟ್ರ ದಿನದ ಆಚರಣೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೋಪೆ ಅವರು, ಪ್ರಸ್ತುತ ರಾಜ್ಯದ ಜನಸಂಖ್ಯೆಯ ಶೇ. 85 ರಷ್ಟು ಜನರನ್ನು ಮಹಾತ್ಮ ಜ್ಯೋತಿಬಾ ಫ‌ುಲೆ ಜನ ಆರೋಗ್ಯ ಯೋಜನೆ (ಎಂಜೆಪಿಜೆ) ಅಡಿಯಲ್ಲಿ ಸೇರಿಸಿಕೊಳ್ಳಲಾಗಿದ್ದು, ಉಳಿದಿರುವ ಶೇ.15ರಷ್ಟು ಜನರನ್ನೂ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದನ್ನು ತಡೆಯುವ ಉದ್ದೇಶದಿಂದ ಸರಕಾರಿ, ಅರೆ ಸರಕಾರಿ ನೌಕರರು ಮತ್ತು ಬಿಳಿ ಪಡಿತರ ಚೀಟಿ ಹೊಂದಿರುವವರನ್ನು ಈ ಯೋಜನೆಯಲ್ಲಿ ಸೇರಿಸಲು ಮನವಿ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದರು.

ಪುಣೆ ಮತ್ತು ಮುಂಬಯಿಯ ಖಾಸಗಿ ಆಸ್ಪತ್ರೆ ಗಳಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಸರಕಾರವು ಜನರಲ್‌ ಇನ್ಸೂರೆನ್ಸ್‌ ಪಬ್ಲಿಕ್‌ ಸೆಕ್ಟರ್‌ ಅಸೋಸಿಯೇಶನ್‌ (ಜಿಐಪಿಎಸ್ ಎ) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸಚಿವರು ತಿಳಿಸಿದ್ದಾರೆ. ಅಂತೆಯೇ, ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಶುಲ್ಕವನ್ನು ಪ್ರಮಾಣೀಕರಿಸಲು ಎಲ್ಲಾ ರೋಗಗಳಿಗೆ ವಿಭಿನ್ನ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲಾಗುವುದು ಎಂದವರು ಹೇಳಿದ್ದಾರೆ. ಈ ಹಿಂದೆ 496 ಆಸ್ಪತ್ರೆಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿತ್ತು, ಆದರೆ ಈಗ 1,000 ಕ್ಕೂ ಹೆಚ್ಚು ಆಸ್ಪತ್ರೆಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದು ಟೋಪೆ ನುಡಿದಿದ್ದಾರೆ. ವಿಪತ್ತು

ನಿರ್ವಹಣಾ ಕಾಯಿದೆ ಮತ್ತು ಸಾಂಕ್ರಾಮಿಕ ಕಾಯಿದೆಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಚಿಕಿತ್ಸೆಯ ಶುಲ್ಕವನ್ನು ರಾಜ್ಯ ಸರಕಾರವು ನಿಗದಿಪಡಿಸಿದೆ ಎಂದು ಸಚಿವರು ಹೇಳಿದ್ದಾರೆ. ಜಿಐಪಿಎಸ್‌ಎ ಜತೆಗೆ ಸಂಬಂಧವಿಲ್ಲದ ಆಸ್ಪತ್ರೆಗಳು ಕೂಡ ತಮ್ಮ ಚಿಕಿತ್ಸಾ ಶುಲ್ಕವನ್ನು ಪ್ರಮಾಣೀಕರಿಸಬೇಕಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next