Advertisement

ತಿಂಗಳ 1, 3ನೇ ಭಾನುವಾರ ಉಚಿತ ಆರೋಗ್ಯ ಶಿಬಿರ

05:59 AM Jan 04, 2019 | Team Udayavani |

ಮೈಸೂರು: ಆರೋಗ್ಯ ಮೈಸೂರು ಶೀರ್ಷಿಕೆಯಡಿ ನಗರದ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಮುಂದಿನ ಐದು ವರ್ಷಗಳ ಕಾಲ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಭಾನುವಾರಗಳಂದು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ 20 ಸಂಘ ಸಂಸ್ಥೆಗಳು ನಮ್ಮ ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಬೆಂಗಳೂರಿನ ಕಿದ್ವಾಯ್‌ ಕ್ಯಾನ್ಸರ್‌ ಆಸ್ಪತ್ರೆ, ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನೆಫ್ರೋ-ಯುರಾಲಜಿ ಸಂಸ್ಥೆ, ಬೌರಿಂಗ್‌ ಆಸ್ಪತ್ರೆ ಸೇರಿದಂತೆ

ಮೈಸೂರಿನ 15 ಪ್ರತಿಷ್ಠಿತ ಆಸ್ಪತ್ರೆಗಳ ತಜ್ಞ ವೈದ್ಯರು ಈ ಆರೋಗ್ಯ ಶಿಬಿರಗಳಲ್ಲಿ ರೋಗಿಗಳ ತಪಾಸಣೆ ನಡೆಸಿ, ಅಗತ್ಯ ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಜನವರಿ 6ರಂದು ವಿದ್ಯಾರಣ್ಯಪುರಂನ ಬೂತಾಳೆ ಮೈದಾನದ ಎದುರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮೊದಲ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.

ನೇತ್ರ ತಪಾಸಣೆ, ಕಿವಿ-ಮೂಗು-ಗಂಟಲು, ಮೂತ್ರಪಿಂಡ, ಕ್ಷಯರೋಗ, ಕ್ಯಾನ್ಸರ್‌, ಪ್ರಿವೆಂಟಿವ್‌ ಮೆಡಿಸನ್‌, ಮಂಡಿನೋವು, ಉಸಿರಾಟದ ತೊಂದರೆ, ವಾತರೋಗ, ಕೀಲುನೋವು, ಚರ್ಮರೋಗ, ಹೃದ್ರೋಗ, ಬಾಲ ರೋಗ, ಸ್ತ್ರೀ ರೋಗ, ಅಲರ್ಜಿ, ಆಸ್ತಮಾ, ಮೈಗ್ರೇನ್‌, ದಂತ ತಪಾಸಣೆಯನ್ನು ಮಾಡಲಿದ್ದಾರೆ. 

ಕ್ಯುರೇಟಿವ್‌ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್‌, ಕ್ಷಯ, ಮೂತ್ರಪಿಂಡ ಕಾಯಿಲೆ, ಲಿವರ್‌ಗೆ ಸಂಬಂಧಿಸಿದ ಕಾಯಿಲೆಗಳು, ಕಣ್ಣು, ದಂತ, ಮೂಳೆ ರೋಗ, ಇಎನ್‌ಟಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು ವಿಶೇಷ ಚಿಕಿತ್ಸೆಗಳನ್ನು ಕೇಂದ್ರ, ರಾಜ್ಯ ಮತ್ತು ಬೇರೆ ಬೇರೆ ಯೋಜನೆಗಳಡಿ ಸಂಪೂರ್ಣವಾಗಿ ಕೊಡಿಸಿ ಆರೋಗ್ಯವಂತರಾಗಿ ಮಾಡುವುದಲ್ಲದೆ, ಆರೋಗ್ಯವಂತ ಜೀವನ ನಡೆಸಲು ವಿಶ್ವಾಸ ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು. 

Advertisement

ಪ್ರಿವೆಂಟಿವ್‌ ಯೋಜನೆಯಡಿ ಯಾವುದೇ ರೋಗಗಳಿಗೆ ತುತ್ತಾಗದಂತೆ ಮಕ್ಕಳಿಂದ ವೃದ್ಧರವರೆಗೆ ರೋಗ ನಿರೋಧಕ ಶಕ್ತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಬೆಳೆಸಲು ಯೋಗ, ಅಗ್ನಿಹೋತ್ರ, ಸೂರ್ಯಪಾನ, ನೆಚರೋಪತಿ, ಶುದ್ಧ ಕುಡಿಯುವ ನೀರು ಒದಗಿಸುವುದು, ಶುದ್ಧ ಗಾಳಿಗಾಗಿ ಗಿಡ ಮರಗಳ ಜೊತೆಯಲ್ಲೇ ಪರಿಸರದ ಉಳಿವಿಗಾಗಿ ವಾಹನಗಳ ಹೊಗೆ ನಿಯಂತ್ರಣಕ್ಕೆ ಕ್ರಮ, ಪ್ಲಾಸ್ಟಿಕ್‌ ಬಳಕೆಗೆ ನಿರ್ಬಂಧ, ರಾಸಾಯನಿಕ ರಹಿತ ಆಹಾರಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ನೀಡಲಾಗುವುದು ಎಂದರು.

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪ್ರತಿ ತಿಂಗಳು ಪುಷ್ಯ ನಕ್ಷತ್ರದ ದಿನ 6 ಕೇಂದ್ರಗಳಲ್ಲಿ ಮಕ್ಕಳಿಗೆ ಉಚಿತವಾಗಿ ಸ್ವರ್ಣಪ್ರಾಶನ ಯೋಜನೆ ಜಾರಿ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗಾಗಿ ಡೇ ಕೇರ್‌ ಸೆಂಟರ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. 

ಆಯಸ್ಸು ವೃದ್ಧಿಗೆ ಯೋಜನೆ: ದಿನೇ ದಿನೆ ಹೆಚ್ಚುತ್ತಿರುವ ಕ್ಯಾನ್ಸರ್‌ ಮಾರಕರೋಗ ಜನರಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತಿದ್ದು, ಚಿಕ್ಕ ಮಕ್ಕಳಿಂದ ಎಲ್ಲಾ ವಯೋಮಾನದ ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ಸಾಮಾನ್ಯವಾಗುತ್ತಿದೆ. ಕ್ಯಾನ್ಸರ್‌ ತಗುಲಿದರೆ ಚಿಕಿತ್ಸೆಗೆ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುವುದು ಅನಿವಾರ್ಯವಾಗುತ್ತಿದೆ. ಈ ದೃಷ್ಟಿಯಲ್ಲಿ ವಾರ್‌ ಎಗೆನೆಸ್ಟ್‌ ಕ್ಯಾನ್ಸರ್‌ ಯೋಜನೆಯನ್ನು 5 ವರ್ಷಗಳ ಕಾಲದಲ್ಲಿ ಅನುಷ್ಠಾನ ಮಾಡುವ ಯೋಜನೆ ಹೊಂದಲಾಗಿದೆ.

ಆರೋಗ್ಯ ಶಿಬಿರದಲ್ಲಿ ರಕ್ತ ಪರೀಕ್ಷೆ ಸೇರಿದಂತೆ 18 ಬಗೆಯ ಪ್ರಯೋಗಾಲಯದ ಪರೀಕ್ಷೆಗಳನ್ನೂ ಉಚಿತವಾಗಿ ಮಾಡಲಾಗುವುದು. ಈಗಾಗಲೇ ರೋಗಳಿಗೆ ವಿಶೇಷ ಚಿಕಿತ್ಸೆ ಮತ್ತು ಆಯಸ್ಸು ವೃದ್ಧಿಗೆ ಯೋಜನೆ ರೂಪಿಸಲಾಗುವುದು. ಉಳಿದವರಿಗೆ ಪ್ರಿವೆಂಟಿವ್‌ ಯೋಜನೆಯಡಿ ಎಲ್ಲರ ರೋಗ ನಿರೋಧಕ ಶಕ್ತಿ ವೃದ್ಧಿಸುವ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದು ಶಾಸಕ ರಾಮದಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next