ನವದೆಹಲಿ: ಉಚಿತ ಮಾತು ಮತ್ತು ಡೇಟಾದ ದೋಣಿಯಲ್ಲಿ ಪ್ರಯಾಣ ನಡೆಧಿಸಿದ್ದ ಜಿಯೋ ಸದಸ್ಯರಿಗೆ ಏ.1 ರಿಂದ ಹಣ ಪಾವತಿ ಮಾಡಿ ಮಾತನಾಡುವುದು, ಬ್ರೌಸ್ ಮಾಡುವುದು ಅನಿವಾರ್ಯವಾಗಲಿದೆ.
170 ದಿನಗಳಲ್ಲಿ 10 ಕೋಟಿ ಮಂದಿ ಗ್ರಾಹಕರಾದ ಖುಷಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಮುಂದೆಯೂ ಫ್ರೀ ಸೇವೆ ಇರಲಿದೆ ಎಂದಿದ್ದಾರೆ. ಆದರೆ, 99 ರೂ. ಪಾವತಿಸಿ ಪ್ರೈಮ್ ಸದಸ್ಯರಾದರೆ, ಇನ್ನಷ್ಟು ಆಫರ್‌ಗಳು ಗ್ಯಾರಂಟಿ ಎಂಬ ಭರವಸೆ ನೀಡಿದ್ದಲ್ಲದೇ, ಪ್ರತಿ ತಿಂಗಳು 303 ರೂ ಕಟ್ಟಿದರೆ ಅನಿಯಮಿತ ವಾಯ್ಸ ಮತ್ತು ಡೇಟಾ ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ.
ಸದ್ಯ ಜಿಯೋದಲ್ಲಿ ಹ್ಯಾಪಿ ನ್ಯೂ ಇಯರ್ ಪ್ಯಾಕ್ ಚಾಲ್ತಿಯಲ್ಲಿದೆ. ಇದರ ಪ್ರಕಾರ, ಉಚಿತ ಅನಿಯಮಿತ ಕಾಲ್ ಮತ್ತು ಡೇಟಾ ಸೇವೆ ಸಿಗಲಿದೆ. ಇದರ ಜತೆಯಲ್ಲೇ ಸಂಗೀತ, ಸಿನಿಮಾ, ಮ್ಯಾಗಜಿನ್, ಪತ್ರಿಕೆ, ನ್ಯೂಸ್‌ನಂಥ ಸೇವೆಗಳೂ ಸಿಗುತ್ತಿವೆ. ಆದರೆ, ಏಪ್ರಿಲ್ 1 ರ ನಂತರ ಕರೆ ಮತ್ತು ಇಂಟರ್ನೆಟ್ ಉಚಿತವಾಗಿ ಸಿಗಲಿದೆ ಎಂದು ಹೇಳಿದ್ದರೂ, ಇದು ಹೇಗೆ ಎಂಬುದರ ಬಗ್ಗೆ ಅಂಬಾನಿ ಬಾಯಿಬಿಟ್ಟಿಲ್ಲ. ಇದರ ಜತೆಯಲ್ಲೇ ಪ್ರೈಮ್ ಮೆಂಬರ್‌ಶಿಪ್ ಪ್ರೋಗ್ರಾಮ್ ಬಗ್ಗೆ ಘೋಷಣೆ ಮಾಡಿದ್ದು, ಒಮ್ಮೆ 99 ರೂಪಾಯಿ ಕಟ್ಟಿ ಸದಸ್ಯರಾಗಿ ಎಂದಿದ್ದಾರೆ. ಈ ಸದಸ್ಯತ್ವದ ಅಡಿ ಪ್ರತಿ ತಿಂಗಳೂ 303 ರೂ. ಕಟ್ಟಿದರೆ ಅನಿಯಮಿತ ಕರೆ ಮತ್ತು ಇಂಟರ್ನೆಟ್ ಸಿಗುತ್ತೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ ಇದು 2019ರ ಮಾರ್ಚ್ ವರೆಗೆ ಪ್ರೈಮ್ ಸದಸ್ಯತ್ವ ಇರಲಿದೆ.
ಸಾಧನೆಯ ಬಗ್ಗೆ: ಕಳೆದ 170 ದಿನಗಳ ಸಾಧನೆ ಬಗ್ಗೆ ಅಂಬಾನಿ ಮಾತನಾಡಿದ್ದಾರೆ. ಪ್ರತಿ ಸೆಕೆಂಡ್‌ಗೆ 7 ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿದ್ದಾರಂತೆ. ಅಲ್ಲದೆ ದಿನಕ್ಕೆ 200 ಕೋಟಿ ನಿಮಿಷ ಮಾತು ಮತ್ತು ವಿಡಿಯೋ ಕಾಲ್, 3.3 ಕೋಟಿ ಜಿಬಿ ಡೇಟಾ ಬಳಕೆಯಾಗುತ್ತಿದೆ. ಇದು ಜಗತ್ತಿನ ಯಾವುದೇ ನೆಟ್‌ವರ್ಕ್‌ನಲ್ಲೂ ಇಲ್ಲ ಎಂದಿದ್ದಾರೆ.
ಐಡಿಯಾ, ಏರ್‌ಟೆಲ್ ಷೇರು ಮೌಲ್ಯ ಕುಸಿತ
ಅತ್ತ ಮುಖೇಶ್ ಅಂಬಾನಿ ಅವರು ಜಿಯೋ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದಂತೆ, ಇತ್ತ ಷೇರುಮಾರುಕಟ್ಟೆಯಲ್ಲಿ ಇತರೆ ಟೆಲಿಕಾಂ ಕಂಪನಿಗಳ ಷೇರುಗಳ ಮೌಲ್ಯ ಕುಸಿತ ಕಂಡಿತು. ರಿಲಯನ್ಸ್‌ನ ಷೇರು ಬೆಲೆ ಶೇ.1.36 ರಷ್ಟು ಏರಿಕೆಯಾಗಿ, 1,088ಕ್ಕೆ ನಿಂತಿತು. ಜತೆಗೆ ಐಡಿಯಾ ಕಂಪನಿಯ ಷೇರು ಮೌಲ್ಯವೂ ಕುಸಿತವಾಯಿತು. ಒಟ್ಟಾರೆ ಇತರೆ ಟೆಲಿಕಾಂ ಕಂಪನಿಗಳ ಷೇರು ದರ ಶೇ.3 ರಷ್ಟು ಕುಸಿತ ಕಂಡಿತು.