Advertisement
ನಗರದಲ್ಲಿ ವಾಸಿಸುವವರಿಗೆ ಮನೆಗಳಲ್ಲಿ ಹೆಚ್ಚಿನ ವಸ್ತುಗಳನ್ನಿಡಲು ಸ್ಥಳಾವಕಾಶವು ಇರುವುದಿಲ್ಲ. ಕೆಲವೊಂದು ವಸ್ತುಗಳು ಮನೆಯಿಂದ ಹೊರಹಾಕಲಾಗದೇ, ಯಾವುದೋ ಮೂಲೆಯಲ್ಲಿ ಹಾಗೆ ಇಟ್ಟಲ್ಲಿ ಮನೆಯ ಅಂದಗೆಡುವುದು, ಇಕ್ಕಟ್ಟಿನ ಸ್ಥಿತಿ ನಿರ್ಮಾಣ ವಾಗುವು ದುಂಟು. ಸೋಫಾ ಸೆಟ್, ಹಳೆಯದಾದ ಫ್ರಿಜ್ಡ್, ವಾಷಿಂಗ್ ಮಿಷನ್ ಹೀಗೆ ದೊಡ್ಡ ವಸ್ತುಗಳನ್ನು ಎತ್ತ ಬಿಸಾಡುವುದು ಎಂದು ತಿಳಿಯದೆ ಮನೆಯ ಸ್ಟೋರ್ ರೂಮ್‌ಗಳಲ್ಲೇ ಉಳಿದು ಬಿಡುತ್ತವೆ. ಇವುಗಳಿಗೆ ಪರಿಹಾರ ಫ್ರೀ ಟ್ರಾಶ್ ಡಿಸ್‌ಪೋಸಲ್ ಡೇ.
ಪ್ರತಿ ವರ್ಷ ಜನವರಿ 13ರಂದು ಫ್ರೀ ಟ್ರಾಶ್ ಡಿಸ್‌ಪೋಸಲ್ ಡೇ ಎನ್ನುವ ಅಭಿಯಾನವನ್ನು ಲ್ಯಾಕ್ಸಿಂಗ್‌ಟನ್‌ನಲ್ಲಿ ಒಂದು ರೀತಿಯ ಹಬ್ಬದಂತೆ ಕೈಗೊಳ್ಳಲಾಗುತ್ತದೆ. ನಗರವಾಸಿಗಳು ಈ ದಿನಕ್ಕೆಂದು ಕಾದು ಕುಳಿತುಕೊಳ್ಳುವುದಿದೆ. ಒತ್ತಡದ ಬದುಕಿನ ನಡುವೆ ಕೋಣೆಗಳನ್ನು ಖಾಲಿ ಮಾಡುವುದೇ ದೊಡ್ಡ ಸಂತಸ. ಈ ಅಭಿಯಾನ ಕೈಗೊಳ್ಳುವುದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ. ನಗರಾಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ದೊಡ್ಡ ದೊಡ್ಡ ಗಾಡಿಗಳಲ್ಲಿ ಬೇಡವಾದ ವಸ್ತುಗಳನ್ನು ಹೊತ್ತೂಯ್ಯಲು ಬರುತ್ತಾರೆ. ಆದರೆ ಎಲ್ಲಾ ವಸ್ತುಗಳನ್ನು ನೀಡಲು ಇಲ್ಲಿ ಅವಕಾಶವಿಲ್ಲ. ಮರುಬಳಕೆಗೆ ಯೋಗ್ಯವಾಗುವಂತಹ ಎಲೆಕ್ಟ್ರಾನಿಕ್ ವಸ್ತುಗಳು, ಮನೆಯ ಪೀಠೊಪಕರಣಗಳು, ಟಯರ್ ಮುಂತಾದ ವಸ್ತುಗಳನ್ನು ಯಾವುದೇ ವೆಚ್ಚವಿಲ್ಲದೆ ಸಾಗಹಾಕಬಹುದು. ಹೀಗೆ ಯಾವುದೋ ಮೂಲೆಯಲ್ಲಿ, ಅಥವಾ ಎಲ್ಲೆಂದರಲ್ಲಿ ಬಿಸಾಡುವ ವಸ್ತುಗಳನ್ನು ಒಂದೆಡೆ ಸೇರಿಸಿ ಮರುಬಳಕೆಗೆ ಪೂರಕವಾದ ವಸ್ತುಗಳನ್ನು ತಯಾರಿಸುವ ಈ ಕಾರ್ಯ ಸ್ವಚ್ಛ ನಗರ ನಿರ್ಮಾಣದೆಡೆಗೆ ಒಂದು ಉತ್ತಮ ಹೆಜ್ಜೆಯಾಗಿದೆ.
Related Articles
ಕೇಂದ್ರ ಸರಕಾರದ ಸ್ವಚ್ಛತಾ ಅಭಿಯಾನ ದೇಶದೆಲ್ಲೆಡೆ ಟ್ರೆಂಡ್ ರೀತಿಯಲ್ಲಿ ಹಬ್ಬಿಕೊಂಡು ಇವತ್ತಿಗೂ ಛಲಬಿಡದೆ ಈ ಕಾರ್ಯವನ್ನು ನಡೆಸುಕೊಂಡು ಬಂದಿರುವುದು ಪ್ರಶಂಸನೀಯ. ಇಂತಹ ಅಭಿಯಾನದ ಜತೆಗೆ ಮೇಲೆ ಹೇಳಿದ ಈ ರೀತಿಯ ಕಲ್ಪನೆ ಜೋಡನೆಗೊಂಡಾಗ ಇನ್ನಷ್ಟು ಸ್ವಚ್ಚತಾ ಕಾರ್ಯಕ್ಕೆ ಹೊಸ ಹುಮ್ಮಸ್ಸನ್ನು ನೀಡುತ್ತದೆ. ಈ ಕಲ್ಪನೆ ಕಾರ್ಯರೂಪಕ್ಕೆ ಬಂದಾಗ ಮುಂದೊಂದು ದಿನ ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಮಂಗಳೂರು ರಾರಾಜಿಸುವುದರಲ್ಲಿ ಸಂಶಯವಿಲ್ಲ.
Advertisement
-ವಿಶ್ವಾಸ್ ಅಡ್ಯಾರ್