Advertisement

ಉಚಿತ ಫಾಸ್ಟ್ಯಾಗ್‌ ಖಾಲಿ, ಕೆಲವೆಡೆ ಸರ್ವರ್‌ ಸಮಸ್ಯೆ

09:00 AM Dec 01, 2019 | Team Udayavani |

ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಝಾಗಳಲ್ಲಿ ಸಂಚರಿಸುವ ವಾಹನಗಳಿಗೆ ಕೇಂದ್ರ ಸರಕಾರವು ಫಾಸ್ಟ್ಯಾಗ್‌ ಅಳವಡಿಕೆ ಆರಂಭಿಸಲಿದೆ. ವಿವಿಧ ಟೋಲ್‌ಪ್ಲಾಝಾಗಳಲ್ಲಿ ಫಾಸ್ಟ್ಯಾಗ್‌ ಸ್ಟಿಕ್ಕರ್‌ ವಿತರಣೆಗೆ ಭಾರೀ ಸಂಖ್ಯೆಯಲ್ಲಿ ವಾಹನ ಮಾಲಕರು ಬರುತ್ತಿದ್ದಾರೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಕೆಲವು ಕಡೆ ಉಚಿತ ಫಾಸ್ಟ್ಯಾಗ್‌ ಸ್ಟಿಕ್ಕರ್‌ ಖಾಲಿಯಾಗಿದ್ದರಿಂದ ಕೇವಲ ನೋಂದಣಿ ಮಾತ್ರ ನಡೆಯುತ್ತಿದೆ.

Advertisement

ಬ್ರಹ್ಮರಕೂಟ್ಲು: ಮತ್ತೆ ಫಾಸ್ಟ್ಯಾಗ್‌ ವಿತರಣೆ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ ಪ್ಲಾಝಾದಲ್ಲಿ ಒಮ್ಮೆ ಸ್ಥಗಿತಗೊಂಡಿದ್ದ ಫಾಸ್ಟ್ಯಾಗ್‌ ಉಚಿತ ವಿತರಣೆ ಮತ್ತೆ ಆರಂಭಗೊಂಡಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ವಾಹನ ಮಾಲಕರು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದಿಂದ ಎಲ್ಲ ಟೋಲ್‌ ಪ್ಲಾಝಾಗಳ ಪಕ್ಕದಲ್ಲೇ
ಫಾಸ್ಟ್ಯಾಗ್‌ ವಿತರಣೆ ಪ್ರಾರಂಭಿಸಲಾಗಿತ್ತು. ಅದೇ ರೀತಿ ಬ್ರಹ್ಮರಕೂಟ್ಲುನಲ್ಲೂ ಪ್ರತ್ಯೇಕ ಕೊಠಡಿಯಲ್ಲಿ ನ. 23ರಿಂದ ಉಚಿತ ಫಾಸ್ಟ್ಯಾಗ್‌ ವಿತರಣೆ ಆರಂಭಿಸಲಾಗಿತ್ತು. ಆರಂಭದಲ್ಲಿ ಪ್ರಾಧಿಕಾರದಿಂದ ಪೂರೈಕೆಯಾದ 500ರಷ್ಟು ಸ್ಟಿಕ್ಕರ್‌ ಮೂನೇ ದಿನಗಳಲ್ಲಿ ಖಾಲಿಯಾಗಿತ್ತು. ಹೀಗಾಗಿ ಟೋಲ್‌ಗೆ ಆಗಮಿಸಿದ ವಾಹನ ಮಾಲಕರು ಫಾಸ್ಟ್ಯಾಗ್‌ ಇಲ್ಲದೇ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿತ್ತು.

700ರಷ್ಟು ಫಾಸ್ಟ್ಯಾಗ್‌
ಸದ್ಯ ಇಲ್ಲಿಗೆ 700ರಷ್ಟು ಫಾಸ್ಟ್ಯಾಗ್‌ ಬಂದಿದೆ. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ವಿತರಣೆ ನಿಧಾನಗತಿ ಯಲ್ಲಿ ಸಾಗುತ್ತಿದೆ. ಶುಕ್ರವಾರ ಫಾಸ್ಟ್ಯಾಗ್‌ ಖರೀದಿಗೆ ಆಗಮಿ ಸಿದ್ದ ವಾಹನಗಳು ಟೋಲ್‌ ಫ್ಲಾಝಾ ಬಳಿ ಸರತಿಯಲ್ಲಿ ನಿಂತಿದ್ದವು. ಇದರಿಂದ ನಿಲುಗಡೆ ಮಾಡಲೂ ಸಮಸ್ಯೆ ಎದುರಾಯಿತು.

ಪೇಟಿಎಂನಿಂದ ವಿತರಣೆ
ಟೋಲ್‌ ಬಳಿಯ ಪೇಟಿಎಂನಿಂದಲೂ ಫಾಸ್ಟ್ಯಾಗ್‌ ವಿತರಣೆ ನಡೆಯುತ್ತಿದೆ. ಆದರೆ ಪೇಟಿಎಂ ಖಾತೆ ಆವಶ್ಯಕ. ಹೀಗಾಗಿ ಎನ್‌ಎಚ್‌ಎಐನ ಫಾಸ್ಟ್ಯಾಗ್‌ಗೆ ಬೇಡಿಕೆ ಜಾಸ್ತಿ. ಜತೆಗೆ ಬ್ಯಾಂಕೊಂದರ ಕೌಂಟರ್‌ನಲ್ಲೂ ವಿತರಣೆಯಾಗುತ್ತಿದೆ.

Advertisement

ಹೆಜಮಾಡಿ: ವಾಹನಗಳ ಒತ್ತಡ
ಪಡುಬಿದ್ರಿ: ಫಾಸ್ಟ್ಯಾಗ್‌ ನೋಂದಣಿಗಾಗಿ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಶುಕ್ರವಾರ ಹಿಂದೆಂದೂ ಕಂಡಿರದಷ್ಟು ಅಧಿಕ ವಾಹನಗಳ ಒತ್ತಡವಿತ್ತು. ಗುರುವಾರದಂದು ಬಂದಿದ್ದ 100 ಎನ್‌ಎಚ್‌ಎಐ ಫಾಸ್ಟ್ಯಾಗ್‌ ನೋಂದಣಿ ಸ್ಟಿಕ್ಕರ್‌ಗಳು ಅದೇ ದಿನ ಖಾಲಿಯಾಗಿವೆ. ಮುಂದಿನ ಮೂರು ದಿನಗಳ ಒಳಗೆ ಮತ್ತೆ ಸ್ಟಿಕ್ಕರ್‌ಗಳು ಬರುವ ನಿರೀಕ್ಷೆ ಇದೆ ಎಂದು ಟೋಲ್‌ ಸಿಬಂದಿ ತಿಳಿಸಿದ್ದಾರೆ.

ಸರ್ವರ್‌ ಡೌನ್‌ ಇದ್ದ ಕಾರಣ ಆ್ಯಕ್ಸಿಸ್‌ ಬ್ಯಾಂಕ್‌ ಕೌಂಟರ್‌ನಲ್ಲಿ ಸುಮಾರು 20 ಮತ್ತು ಪೇಟಿಎಂ ಕೌಂಟರ್‌ನಲ್ಲಿ 100 ಸ್ಟಿಕ್ಕರ್‌ಗಳಷ್ಟೇ ನೋಂದಣಿ ಸಾಧ್ಯವಾಗಿದೆ. ಎನ್‌ಎಚ್‌ಎಐ ಉಚಿತ ಸ್ಟಿಕ್ಕರ್‌ಗಳಿಗಾಗಿ ಶುಕ್ರವಾರ ನೋಂದಣಿ ಮಾತ್ರ ನಡೆಸಲಾಗಿದೆ.

ಸುರತ್ಕಲ್‌: 196 ಸ್ಟಿಕ್ಕರ್‌ ವಿತರಣೆ
ಸುರತ್ಕಲ್‌: ಸುರತ್ಕಲ್‌ ಟೋಲ್‌ಗೇಟ್‌ ಬೂತ್‌ನಲ್ಲಿ ಶುಕ್ರವಾರ 196 ಮಂದಿಗೆ ಫಾಸ್ಟ್ಯಾಗ್‌ ಸ್ಟಿಕ್ಕರ್‌ ವಿತರಿಸಲಾಗಿದೆ.ಬ್ಯಾಂಕ್‌ಗಳಿಗೆ ತಲಾ ನೂರು ಫಾಸ್ಟ್ಯಾಗ್‌ ಕಳುಹಿಸಲಾಗಿದ್ದು ಅಲ್ಲಿ ಖಾತೆ ಹೊಂದಿರುವ ಗ್ರಾಹಕರು ವಿಚಾರಿಸಿ ಪಡೆದುಕೊಳ್ಳುತ್ತಿದ್ದಾರೆ. ಡಿ. 1ಕ್ಕೆ ಫಾಸ್ಟಾ ಗ್‌ ಅಳವಡಿಕೆ ಶೇ. 100ರಷ್ಟು ಆಗದಿದ್ದರೂ ಶೇ. 60ರಷ್ಟು ಗುರಿ ತಲುಪಲು ಪ್ರಯತ್ನಿಸಲಾಗುತ್ತಿದೆ.

ಪೇಟಿಎಂಗೆ ಆಸಕ್ತಿ
ಉಳ್ಳಾಲ: ತಲಪಾಡಿ ಟೋಲ್‌ ಗೇಟ್‌ನಲ್ಲಿ ಫಾಸ್ಟ್ಯಾಗ್‌ ನೀಡುವ ಕಾರ್ಯ ನಡೆಯುತ್ತಿದ್ದು ಪೇಟಿಎಂ ಸಂಸ್ಥೆ ಒಟ್ಟು 600 ವರೆಗೆ ಸ್ಟಿಕ್ಕರ್‌ ವಿತರಿಸಿದೆ. ಆ್ಯಕ್ಸಿಸ್‌ ಬ್ಯಾಂಕ್‌ 100, ಎನ್‌ಎಚ್‌ಎಐ 50 ಮಾತ್ರ ಕೊಟ್ಟಿದೆ. ಈ ಕಡೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್‌ ಸ್ಟಿಕ್ಕರ್‌ ವಿತರಣೆ ವ್ಯವಸ್ಥೆಯಿಲ್ಲ. ಆದರೆ ರೀಚಾರ್ಚ್‌ ವ್ಯವಸ್ಥೆಯಿದೆ. ಹಾಗಾಗಿ ಪೇಟಿಎಂ ಆ್ಯಪ್‌ ಮೂಲಕ ಹೆಚ್ಚಿನ ಮಂದಿ ಸ್ಟಿಕ್ಕರ್‌ ಪಡೆಯುತ್ತಿದ್ದಾರೆ.

ಸಾಸ್ತಾನ: ಬ್ಯಾಂಕ್‌ಗಳಲ್ಲಿ ಮಂದಗತಿ; ಪೇಟಿಎಂ ಅತ್ಯಧಿಕ
ಕೋಟ: ಸಾಸ್ತಾನ ಟೋಲ್‌ನಲ್ಲಿ ಶುಕ್ರವಾರ ಫಾಸ್ಟ್ಯಾಗ್‌ ವಿತರಣೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಅತ್ಯಂತ ಮಂದಗತಿಯಲ್ಲಿ ಸಾಗಿದ್ದರೆ ಪೇಟಿಎಂ ಸಂಸ್ಥೆ ಅತೀ ಹೆಚ್ಚು ಸಂಖ್ಯೆಯ 250 ಸ್ಟಿಕ್ಕರ್‌ ವಿತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next